ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13 ಸಾವಿರ ಶಾಲೆ ಮುಚ್ಚುವ ಪ್ರಸ್ತಾವ; ಎಐಡಿಎಸ್‌ಒ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ, ಸರ್ಕಾರಿ ಶಾಲೆಗಳ ಸುಧಾರಣೆಗೆ ಕ್ರಮಕ್ಕೆ ಒತ್ತಾಯ
Last Updated 28 ಜುಲೈ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ:ಮಾನವತಾವಾದಿ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಸ್ಮರಣ ದಿನದ ಅಂಗವಾಗಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ವತಿಯಿಂದ ನಗರದ ವಿವಿಧ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಗುರುವಾರ ‘ಸಾರ್ವಜನಿಕ ಶಿಕ್ಷಣ ಉಳಿಸಿ ದಿನ’ ಆಚರಿಸಲಾಯಿತು.

ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ಪ್ರಸ್ತಾವವನ್ನು ವಿರೋಧಿಸಿ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಎಐಡಿಎಸ್‌ಒನ ಜಿಲ್ಲಾ ಸಂಚಾಲಕಿ ಆಸಿಯಾ ಬೇಗಂ ಮಾತನಾಡಿ, ‘ಈ ವರ್ಷ ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎಂದು ಸರ್ಕಾರ ಹೇಳಿದೆ. ಈ ಸುದ್ದಿಯಿಂದ ರಾಜ್ಯದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಸರ್ಕಾರದ ನಿರ್ಧಾರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶಾಶ್ವತವಾಗಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತಿದೆ’ ಎಂದು ದೂರಿದರು.

‘ಸರ್ಕಾರಿ ಶಾಲೆಗಳಲ್ಲಿ ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿರುವುದರಿಂದ ದಾಖಲಾತಿ 25 ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ಒಂದೇ ಸ್ಥಳದಲ್ಲಿ ಸೇರಿಸಿ ದೊಡ್ಡ ಶಾಲೆಯೊಂದಿಗೆ ವಿಲೀನಗೊಳಿಸಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇದನ್ನು ಮಾದರಿ ಶಾಲೆ ಎಂದು ಕರೆದಿದೆ.ಸರ್ಕಾರದ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 35 ಸಾವಿರ ಶಿಕ್ಷಕರ ಕೊರತೆ ಇದೆ. 4767ರಷ್ಟು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲದ ಶಾಲೆಗಳಿವೆ. ಅಂತಹ 16 ಶಾಲೆಗಳು ಚಾಮರಾಜನಗರ ಹಾಗೂ 30 ಶಾಲೆಗಳು ರಾಯಚೂರಿನಲ್ಲಿ ಇವೆ. ಒಂದು ಶಾಲೆಗೆ ಇಡೀ ವರ್ಷಕ್ಕೆ ಐದು ಮಕ್ಕಳು ದಾಖಲಾಗುತ್ತಿರುವುದು, 10 ಮಕ್ಕಳು ದಾಖಲಾಗುತ್ತಿರುವ ನಿದರ್ಶನಗಳೂ ಇವೆ. ಇದಕ್ಕಿಂತಲೂ ಕರಿಣ ಪರಿಸ್ಥಿತಿಯಲ್ಲಿ ಇನ್ನೂ ಶಾಲೆಗಳು ಇರಬಹುದು. ಈ ಕೊರತೆಗಳನ್ನು ಸರಿಪಡಿಸಲು, ಶಾಲೆಗಳ ಗುಣಮಟ್ಟ ಏರಿಸಲು ಸರ್ಕಾರ ಏಕೆ ಕ್ರಮ ವಹಿಸುವುದಿಲ್ಲ? ಶಾಲೆಗಳ ವಿಲೀನ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಸರ್ಕಾರದ ನೀತಿಗಳು ಶಿಕ್ಷಣವನ್ನು ಮತ್ತಷ್ಟು ದುಬಾರಿಗೊಳಿಸುತ್ತಿವೆ. ಖಾಸಗೀಕರಣಗೊಳಿಸುತ್ತಿವೆ. ರಾಷ್ಟ್ರೀಯ ಶಿಕ್ಷಣ ನೀತಿ–2020 ಇಂತಹದ್ದೇ ನೀತಿ. ಇದರಲ್ಲಿ ಹಲವು ಶಿಕ್ಷಣ ವಿರೋಧಿ, ಬಡ ಜನ ವಿರೋಧಿ ಪ್ರತಿಪಾದನೆಗಳು ಇವೆ. ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಎಂಬುದು ಈ ನೀತಿಯಲ್ಲಿದೆ. ಇದೇ ನೀತಿಯ ಅಡಿಯಲ್ಲಿ 13,800 ಸರ್ಕಾರಿ ಶಾಲೆಗಳ ಮುಚ್ಚಲಾಗುತ್ತಿದೆ’ ಎಂದು ಆಸಿಯಾ ಬೇಗಂ ಆರೋಪಿಸಿದರು.

ಸರ್ಕಾರ ತಕ್ಷಣವೇ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು. 13 ಸಾವಿರ ಶಾಲೆಗಳನ್ನು ಮುಚ್ಚುವ ಬದಲು ಎಲ್ಲ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT