ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಅಂಬೇಡ್ಕರ್‌ ಸಂದೇಶದಿಂದ ಸಮಾಜ ಸುಧಾರಣೆ

ಜಿಲ್ಲೆಯಾದ್ಯಂತ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರನ ಸ್ಮರಣೆ; ಭಾವಚಿತ್ರದ ಮೆರವಣಿಗೆ
ಫಾಲೋ ಮಾಡಿ
Comments

ಚಾಮರಾಜನಗರ: ಜಿಲ್ಲೆಯಾದ್ಯಂತ ಶುಕ್ರವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 132ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳಲ್ಲಿ ಸಂವಿಧಾನಶಿಲ್ಪಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ದಲಿತ ಮತ್ತು ಪ್ರಗತಿ ಪರ ಸಂಘಟನೆಗಳು ಕೂಡ ಕಾರ್ಯಕ್ರಮ ಹಮ್ಮಿಕೊಂಡು ಸಮಾನತೆಯ ಹರಿಕಾರನನ್ನು ಸ್ಮರಿಸಿದವು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ, ಜಿಲ್ಲಾಡಳಿತ ಭವನದ ಮುಂಭಾಗ ಇರುವ ಅಂಬೇಡ್ಕರ್‌ ಪ್ರತಿಮೆಗೆ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂವಿತಾ ಎಸ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಸೇರಿದಂತೆ ಹಿರಿಯ ಅಧಿಕಾರಿಗಳು ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಬುದ್ಧವಂದನೆ ಸಲ್ಲಿಸಲಾಯಿತು.

ನಂತರ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ‘ಅಂಬೇಡ್ಕರ್ ನೀಡಿದ ಸಂದೇಶಗಳು ಹಾಗೂ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ’ ಎಂದರು.

‘ಮಾನವೀಯತೆ, ಸಮಾನತೆ ಮೌಲ್ಯಗಳಂತಹ ವಿಚಾರಧಾರೆಗಳ ಬಗ್ಗೆ ಅವರು ಹೊಂದಿದ್ದ ಧೋರಣೆ, ನಿಲುವುಗಳು ಎಂದಿಗೂ ಆದರ್ಶಪ್ರಾಯವಾಗಿವೆ. ಇಡೀ ಸಮುದಾಯಕ್ಕೆ ಸಮಾನತೆ ಇರಬೇಕು. ಯಾರಿಗೂ ಯಾವುದೇ ತೊಂದರೆ ನೀಡಬಾರದು. ಅಸ್ಪೃಶ್ಯತೆ, ಕೀಳು-ಮೇಲು, ಜಾತಿ ಪದ್ಧತಿ ಹೋಗಬೇಕು ಎನ್ನುವ ಸದುದ್ದೇಶದೊಂದಿಗೆ ಹೋರಾಟ ಮಾಡಿದ ಅವರ ಉದಾತ್ತ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ಹಕ್ಕು ಚಲಾಯಿಸಿ: ‘ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಆಡಳಿತ ಹಾಗೂ ಇತರೆ ವ್ಯವಸ್ಥೆಗಳ ಪ್ರಾಮುಖ್ಯವನ್ನೂ ತೋರಿಸಿ ಕೊಟ್ಟಿದ್ದಾರೆ. ಚುನಾವಣೆಯ ಪ್ರಸ್ತುತ ಸಂದರ್ಭದಲ್ಲಿ ಮತದಾನದ ಹಕ್ಕು ಚಲಾಯಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗುವ ಮೂಲಕ ಅಂಬೇಡ್ಕರ್‌ಗೆ ಗೌರವ ಸಲ್ಲಿಸಬೇಕು’ ಎಂದು ರಮೇಶ್ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸರಸ್ವತಿ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ನಗರಸಭೆಯ ಆಯುಕ್ತ ಎಸ್.ವಿ.ರಾಮ್‌ದಾಸ್ ಇದ್ದರು.

ಮೆರವಣಿಗೆ: ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟ, ಅಂಬೇಡ್ಕರ್ ಸೇನೆ, ಪ್ರಗತಿಪರ ಸಂಘನೆಗಳ ಒಕ್ಕೂಟ ಮತ್ತು ತಾಲ್ಲೂಕಿನ ಗಡಿ ಯಜಮಾನರ ನೇತೃತ್ವದಲ್ಲಿ ನಗರದಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಅಂಬೇಡ್ಕರ್ ಭವನದ ಮುಂಭಾಗ ತಾಲ್ಲೂಕಿನ ಗಡಿ ಯಜಮಾನರಾದ ಮಾಧು, ರಾಮಸಮುದ್ರ ಚನ್ನಂಜಯ್ಯ, ರೇವಣ್ಣ, ಮಂಗಲ ಶಿವಣ್ಣ, ರಂಗಸ್ವಾಮಿ, ಶಿವಕುಮಾರ್, ಉಮ್ಮತ್ತೂರು ಚಂದ್ರು, ವೀರಯ್ಯ, ಶಿವರಾಜು, ಮಹದೇವಯ್ಯ, ಬಿ.ಮಹದೇವಯ್ಯ, ಎಂ.ಎನ್.ಮಹದೇವ್, ಸಂಪತಕುಮಾರ್, ಒಕ್ಕೂಟದ ಅಧ್ಯಕ್ಷ ಸಿ.ಕೆ.ಮಂಜುನಾಥ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಗಣೇಶ್ ಪ್ರಸಾದ್, ನಾಗವಳ್ಳಿ ಮಹದೇವಸ್ವಾಮಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ರಥದಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟು ಶೃಂಗರಿಸಿ, ಬುದ್ಧ ವಿಗ್ರಹ ಮೆರವಣಿಗೆಯು ವಿವಿಧ ಜಾನಪದ ಕಲಾ ತಂಡಗಳಾದ ನಗಾರಿ, ಮಂಗಳವಾದ್ಯ, ಬ್ಯಾಂಡ್ ಸೆಟ್, ಡೋಲು ಕುಣಿತ, ತಮಟೆಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಜಿಲ್ಲಾಡಳಿತ ಭವನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಮೆರವಣಿಗೆ ಮುಕ್ತಾಯ ಕಂಡಿತು.

ಉಮೇಶ್‌ ಕುದರ್, ಮಹೇಶ್ ಕುದರ್, ಸಿ.ಎಂ.ಕೃಷ್ಣಮೂರ್ತಿ, ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಅಮಚವಾಡಿ ಶಿವಣ್ಣ, ಪರ್ವತರಾಜು, ಯ.ರೇವಣ್ಣ, ಮಹೇಶ್, ಮನೋಜ್ ಮಸು, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಂಬೇಡ್ಕರ್ ಅಭಿಮಾನಿಗಳು. ಹಿತೈಷಿಗಳು, ಸಂಘಟನೆಗಳ ಪದಾಧಿಕಾರಿಗಳು, ತಾಲ್ಲೂಕಿನ ಎಲ್ಲಾ ಗ್ರಾಮಗಳ ಯಜಮಾನರು, ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT