ಶನಿವಾರ, ಜುಲೈ 24, 2021
20 °C
ಎಲ್ಲ ವಿದ್ಯಾರ್ಥಿಗಳೂ ತೇರ್ಗಡೆ, ಪ್ರತಿ ವಿಷಯಕ್ಕೆ ಎರಡು ಮಾದರಿ ಪ್ರಶ್ನೆ ಪತ್ರಿಕೆಗಳು,

ಪ್ರಥಮ ಪಿಯು: ಅಂಕ ನಿರ್ಧಾರಕ್ಕೆ ಅಸೈನ್‌ಮೆಂಟ್‌

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ 2ನೇ ಅಲೆ ಕಾರಣಕ್ಕೆ ಪರೀಕ್ಷೆಯಿಂದ ವಂಚಿತರಾದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನಿರ್ಧರಿಸಲು ‌ಪದವಿ ಪೂರ್ವ ಶಿಕ್ಷಣ ಇಲಾಖೆ ಅಸೈನ್‌ಮೆಂಟ್‌ಗಳನ್ನು (ಮಾದರಿ ಪರೀಕ್ಷೆ) ನೀಡಿದೆ. 

ಈ ಪರೀಕ್ಷೆಗಳ ಆಧಾರದಲ್ಲಿ ವಿದ್ಯಾರ್ಥಿಗಳು ಗಳಿಸುವ ಶೇಕಡವಾರು ಅಂಕಗಳು ನಿರ್ಧಾರವಾಗಲಿದೆ. ಜುಲೈ 1ರಿಂದ 2021–22ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಘೋಷಿಸಿ. ಕೋವಿಡ್‌ ಹಾವಳಿಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಗಳಿಸಿರುವ ಸರ್ಕಾರ, ಎಲ್ಲರನ್ನೂ ತೇರ್ಗಡೆ ಮಾಡಿದೆ. 

ಇತ್ತ, ಕಳೆದ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯೂ ರದ್ದಾಗಿದೆ. ಜಿಲ್ಲೆಯಲ್ಲಿ ಹಿಂದಿನ ವರ್ಷ 7,370 ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ದಾಖಲಾಗಿದ್ದರು. ಸರ್ಕಾರ ಎಲ್ಲರನ್ನೂ ತೇರ್ಗಡೆ ಮಾಡಿದೆ. ಮುಂದಿನ ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ಅಂಕಗಳನ್ನು ನೀಡಬೇಕಾಗಿರುವುದರಿಂದ ಪ್ರತಿ ವಿಷಯಕ್ಕೆ ಎರಡು ಮಾದರಿ ಪರೀಕ್ಷೆಗಳನ್ನು ನಡೆಸಲು ಇಲಾಖೆ ತೀರ್ಮಾನಿಸಿದೆ. 

ಇದಕ್ಕಾಗಿ ಪಿಯು ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ, ಪ್ರತಿ ವಿಷಯಕ್ಕೂ ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಿದೆ. ವಿದ್ಯಾರ್ಥಿಗಳು ಇದಕ್ಕೆ ಉತ್ತರಿಸಿ, ಉತ್ತರ ಪತ್ರಿಕೆಗಳನ್ನು ಖುದ್ದಾಗಿ ಅಥವಾ ವಾಟ್ಸ್‌ಆ್ಯಪ್‌ ಅಪ್‌ ಅಥವಾ ಇ–ಮೇಲ್‌ ಮೂಲಕ ಉಪನ್ಯಾಸಕರಿಗೆ ಕಳುಹಿಸಬೇಕು. 

‘ಎಲ್ಲ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ 35ರಷ್ಟು ಅಂಕಗಳನ್ನು ನೀಡಿ ತೇರ್ಗಡೆಗೊಳಿಸಬೇಕು ಎಂಬ ಸೂಚನೆ ಇದೆ. ಐದು ಅಂಕಗಳನ್ನು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ಉಳಿದ 60 ಅಂಕಗಳನ್ನು ಎರಡು ಅಸೈನ್‌ಮೆಂಟ್‌ಗಳ ಆಧಾರದಲ್ಲಿ ನೀಡಲಾಗುತ್ತದೆ. ಪ್ರತಿ ವಿಷಯಕ್ಕೆ ಎರಡು ಅಸೈನ್‌ಮೆಂಟ್‌ಗಳಿವೆ. ಅಂದರೆ ಒಬ್ಬ ವಿದ್ಯಾರ್ಥಿ 12 ಅಸೈನ್‌ಮೆಂಟ್‌ಗಳನ್ನು ಮಾಡಬೇಕು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಯು) ಡಿ.ಎಸ್‌.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮೊದಲ ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆದು ಸಲ್ಲಿಸಲು ಈಗಾಗಲೇ ಗಡುವು ಮುಗಿದಿದೆ. ಇದೇ 10ರಿಂದ 20ರೊಳಗೆ ಅವರು ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳು ನೀಡಬೇಕಾಗಿತ್ತು. ಎರಡನೇ ಮಾದರಿ ಪ್ರಶ್ನೆಪತ್ರಿಕೆಗಳನ್ನು ಈಗ ನೀಡಲಾಗುತ್ತಿದ್ದು, ಇದೇ 26ರಿಂದ ಜುಲೈ 5ರೊಳಗಾಗಿ ಅವರು ಉತ್ತರಿಸಿ ನೀಡಬೇಕು’ ಎಂದು ಅವರು ಮಾಹಿತಿ ನೀಡಿದರು. 

ಮೊದಲ ಅಸೈನ್‌ಮೆಂಟ್‌ಗಳ ಮೌಲ್ಯಮಾಪನಕ್ಕೆ ಇದೇ 25ರವರೆಗೆ ಸಮಯ ನಿಗದಿ ಪಡಿಸಲಾಗಿದೆ. ಎರಡನೇ ಅಸೈನ್‌ಮೆಂಟ್‌ನ ಮೌಲ್ಯ‍ಮಾಪನ ಜುಲೈ 6ರಿಂದ 10ರೊಳಗೆ ಉಪನ್ಯಾಸಕರು ನಡೆಸಬೇಕು. ನಂತರ ವಿದ್ಯಾರ್ಥಿಗಳು ಪಡೆದಿರುವ  ಅಂಕಗಳನ್ನು ಪರಿವರ್ತಿಸಿ ದಾಖಲು ಮಾಡಲು ಪಿಯು ಇಲಾಖೆ ಸೂಚನೆ ನೀಡಿದೆ.

6,524 ದ್ವಿತೀಯ ಪಿಯು ವಿದ್ಯಾರ್ಥಿಗಳು ಉತ್ತೀರ್ಣ

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೇ ಇರುವುದರಿಂದ, ಜಿಲ್ಲೆಯ ಎಲ್ಲ 6,524 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪದವಿ, ವೃತ್ತಿ ಶಿಕ್ಷಣ ಸೇರಿದಂತೆ ಇತರ ಉನ್ನತ ಶಿಕ್ಷಣದ ಕೋರ್ಸ್‌ಗಳನ್ನು ಮಾಡಲು ಅರ್ಹತೆ ಪಡೆದಿದ್ದಾರೆ. 

ಉತ್ತೀರ್ಣರಾದ 6,524 ವಿದ್ಯಾರ್ಥಿಗಳ ಪೈಕಿ, 3,043 ಮಂದಿ ಗಂಡು ಮಕ್ಕಳಾಗಿದ್ದರೆ, 3,081 ಮಂದಿ ಹೆಣ್ಣು ಮಕ್ಕಳು. 

ಜುಲೈ 15ರಿಂದ ದಾಖಲಾತಿ: 2021–22ನೇ ದ್ವಿತೀಯ ಪಿಯುಸಿಗೆ ಆನ್‌ಲೈನ್‌ ತರಗತಿಗಳು ಜುಲೈ 15ರಿಂದ ಆರಂಭವಾಗಲಿದೆ. ದಾಖಲಾತಿ ಪ್ರಕ್ರಿಯೆಯೂ ಅಂದಿನಿಂದಲೇ ಆರಂಭವಾಗಲಿದೆ. 

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದ ನಂತರವಷ್ಟೇ, ಪ್ರಥಮ ಪಿಯುಸಿಗೆ ದಾಖಲಾತಿ ಆರಂಭವಾಗಲಿದೆ. ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಪಿಯು ಇಲಾಖೆ ತಿಳಿಸಿದೆ. 

ಖಾಸಗಿ, ಪುನರಾವರ್ತಿತ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ
ಡಿ.ಎಸ್‌.ಕೃಷ್ಣಮೂರ್ತಿ, ಡಿಡಿಪಿಯು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು