ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನಕ ಕಿಟ್ಟಿಗೆ ಆತ್ಮೀಯ ಸಂಸ್ಕೃತಿ ಪ್ರಜ್ಞ ಪ್ರಶಸ್ತಿ ಪ್ರದಾನ

ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್‌ನ ಪ್ರಯತ್ನಕ್ಕೆ ಶ್ಲಾಘನೆ
Last Updated 23 ಜನವರಿ 2023, 16:04 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಂಗಭೂಮಿಯು ಸಮಯ ಪ್ರಜ್ಞೆ, ಶಿಸ್ತು, ಮಾನವೀಯ ಮೌಲ್ಯವನ್ನು ಕಲಿಸುತ್ತದೆ. ಮಕ್ಕಳು ರಂಗಭೂಮಿ ಕಲಿತರೆ ಸಮಾಜಕ್ಕೆ ಉತ್ತಮ ಕೊಡುಗೆಗಳಾಗುತ್ತಾರೆ’ ಎಂದು ಗಾಯಕ ಹಾಗೂ ರಾಜಕಾರಣಿ ಎಸ್‌.ಬಾಲರಾಜ್‌ ಅಭಿಪ್ರಾಯಪಟ್ಟರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಸಂಸ್ಥೆ ಭಾನುವಾರ ಸಂಜೆ ಏರ್ಪಡಿಸಿದ್ದ ಆತ್ಮೀಯ ರಂಗ ಉತ್ಸವ ಮತ್ತು ಸಿ.ಆರ್‌.ಕೃಷ್ಣಮೂರ್ತಿಯವರಿಗೆ (ಬೆನಕ ಕಿಟ್ಟಿ) ಆತ್ಮೀಯ ಸಂಸ್ಕೃತಿ ಪ್ರಜ್ಞ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಿನಿಮಾ ರಂಗಕ್ಕೂ ಮೂಲ ಬೇರು ರಂಗಭೂಮಿಯೇ. ರಂಗ ತರಬೇತಿಗಳ ಮೂಲಕ ರಂಗಭೂಮಿಯನ್ನು ಪೋಷಣೆ ಮಾಡುವುದರ ಜೊತೆಗೆ, ಸಮಾಜಕ್ಕೆ ಸೇವೆ ಸಲ್ಲಿಸಿರುವ ಹಿರಿಯರಿಗೆ ಗೌರವಿಸಬೇಕು ಎಂಬ ಉದ್ದೇಶದಿಂದ ಆತ್ಮೀಯ ಸಂಸ್ಕೃತಿ ಪ್ರಜ್ಞ ಪ್ರಶಸ್ತಿಯನ್ನು ಬೆನಕ ಕಿಟ್ಟಿ ಅವರಿಗೆ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಆತ್ಮೀಯ ಸಂಸ್ಕೃತಿ ಪ್ರಜ್ಞ ಪ್ರಶಸ್ತಿ ಸ್ವೀಕರಿಸಿದ ರಂಗಕರ್ಮಿ ಸಿ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ನೀಡುವ ಕಾಣಿಕೆ ಬಹು ದೊಡ್ಡದು. ಶಾಲಾ ಹಂತದಿಂದ ಶುರುವಾದ ರಂಗಭೂಮಿ ಪಯಣ ನನ್ನನ್ನು ಒಬ್ಬ ಮನುಷ್ಯನನ್ನಾಗಿ ರೂಪಿಸಿದೆ’ ಎಂದರು.

ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಮಾತನಾಡಿ, ‘ಸಂಸ್ಕೃತಿ ಎಂಬುದು ಒಳಿತಿನ ಮೊತ್ತವೆಂಬುದಷ್ಟೇ ನಮಗೆ ಗೊತ್ತಿದೆ. ಸಂಸ್ಕೃತಿಯಲ್ಲಿ ಕಟ್ಟುವ ಸಂಸ್ಕೃತಿಯೂ ಇದೆ; ಕೆಡಹುವ ಸಂಸ್ಕೃತಿಯೂ ಇದೆ. ಈ ಎರಡೂ ಸಂಸ್ಕೃತಿಗಳಲ್ಲಿ ಕಟ್ಟುವ ಸಂಸ್ಕೃತಿಯನ್ನು ಜೀವಂತವಾಗಿಸುವ ಜವಾಬ್ದಾರಿಯಿಂದ ವ್ಯಕ್ತಿತ್ವಗಳನ್ನು ಹುಡುಕಿ ಗೌರವಿಸಬೇಕು ಎಂಬ ಆಶಯವೇ ಈ ಕಾಲದ ಮುಖ್ಯ ರೂಪಕ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯ ಎ.ಎಂ.ನಾಗಮಲ್ಲಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ, ಸಾಹಿತಿ ಸಿ.ಮಂಜುನಾಥ ಪ್ರಸನ್ನ ಮಾತನಾಡಿದರು.

ಟ್ರಸ್ಟ್‌ನ ಅಧ್ಯಕ್ಷ, ರಂಗ ನಿರ್ದೇಶಕ ಕಿರಣ್‌ಕುಮಾರ್‌ (ಗಿರ್ಗಿ) ಪ್ರಸ್ತಾವಿಕವಾಗಿ ಮಾತನಾಡಿದರು.

ನಾಟಕ ಪ್ರದರ್ಶನ: ಸಮಾರಂಭದಲ್ಲಿ ರಂಗ ತರಬೇತಿ ಪಡೆದ ಮಕ್ಕಳು ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಕುಣಿ ಕುಣಿ ನವಿಲೆ’ ಮತ್ತು ಯುವಕಲಾವಿದರು ಭಾಸ ಮಹಾಕವಿಯ ‘ಮಧ್ಯಮ ವ್ಯಾಯೋಗ’ ನಾಟಕಗಳನ್ನು ಪ್ರದರ್ಶಿಸಿದರು.

ಬಿಎಸ್‌ವಿ ಪ್ರತಿಷ್ಠಾನದ ಬಿ.ವಿ.ವೆಂಕಟನಾಗಪ್ಪ ಶೆಟ್ಟಿ, ರೋಟರಿ ಸಿಲ್ಕ್ ಸಿಟಿಯ ಅಜಯ್ ಹೆಗ್ಗವಾಡಿಪುರ, ನಟ ಜಗದೀಶ್ ಮಲ್ನಾಡ್, ಆತ್ಮೀಯ ಸಂಸ್ಥೆಯ ಕಾರ್ಯದರ್ಶಿ ಶಿವು ಜನ್ನೂರ ಹೊಸೂರು, ಗಾಯಕ ಮಹಾಲಿಂಗ ಗಿರ್ಗಿ, ಕಲಾವಿದೆ ನಂದಿನಿ ರವಿಕುಮಾರ್, ಕಲೆ ನಟರಾಜ್, ಸುರೇಂದ್ರ ದೇಶವಳ್ಳಿ, ಜೇಮ್ಸ್ ದೇಶವಳ್ಳಿ ಹಾಗೂ ಶಿವರಾಂ, ಆತ್ಮೀಯ ಟ್ರಸ್ಟ್‌ನ ಕಲಾವಿದರಾದ ಶಿವಶಂಕರ್ ಚಟ್ಟು, ಆತ್ಮೀಯ ರಂಗಶಾಲೆಯ ಪೋಷಕರು, ಕಲಾವಿದರು, ಮಕ್ಕಳು ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT