ಬುಧವಾರ, ಮಾರ್ಚ್ 29, 2023
27 °C
ಸುತ್ತೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆ; ಸ್ಥಳೀಯರಲ್ಲಿ ಹರ್ಷ

ಯಡಿಯೂರು ಕೆರೆ ಭರ್ತಿ; ಬಾಗಿನ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸುತ್ತೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ, ತಾಲ್ಲೂಕಿನ ಹೊಸಕೆರೆ ಭರ್ತಿಯಾಗಿದ್ದಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೋಮವಾರ ಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.

ಸುತ್ತೂರು ಏತ ನೀರಾವರಿ ಯೋಜನೆಯಡಿಯಲ್ಲಿ ಉಮ್ಮತ್ತೂರು ಕೆರೆಗೆ ನೀರು ಹರಿದ ನಂತರ, ಅಲ್ಲಿಂದ ಹೊಸಕೆರೆಗೆ ನೀರು ಬಂದಿದೆ. 

ಈ ಸಂದರ್ಭದಲ್ಲಿ ಮಾತನಾಡಿದ ಪುಟ್ಟರಂಗಶೆಟ್ಟಿ, ‘ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಅನುದಾನ ನೀಡಿದ್ದರು. ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಅಂದು ಸಚಿವರಾಗಿದ್ದ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್ ಅವರ ಶ್ರಮ ಅವರ್ಣನೀಯ’ ಎಂದರು. 

‘ಜಿಲ್ಲೆಯ ಹಲವಾರು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದವು. ಆ ಸಂದರ್ಭದಲ್ಲಿ ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕಿನ 200ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಯೋಜನೆ ಜಾರಿ ಮಾಡಲು ಅನುದಾನ ಬಿಡುಗಡೆ ಮಾಡಿಸಿದ್ದರು. ಅವರ ಕಾಳಜಿ ಪರಿಣಾಮ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಬವಣೆ ನೀಗಿದೆ’ ಎಂದು ಹೇಳಿದರು.

‘ಯಡಿಯೂರು ಕೆರೆ ತುಂಬಿರುವುದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದ್ದು, ದನಕರುಗಳಿಗೂ ಕುಡಿಯಲು ನೀರು ಸಿಕ್ಕಂತಾಗಿದೆ. ಕೆಲ ಗ್ರಾಮಗಳಿಗೆ ರಸ್ತೆ ಅಭಿವೃದ್ಧಿ ಪಡಿಸುವ ಅಗತ್ಯವಿದ್ದು, ಅನುದಾನ ಬಿಡುಗಡೆಯಾಗದೆ ತೊಂದರೆಯಾಗಿದೆ. ಮುಂದೆ ಅನುದಾನ ಬಿಡುಗಡೆಯಾದಲ್ಲಿ ರಸ್ತೆಗಳ ಅಭಿವೃದ್ದಿಗೂ ಕ್ರಮ ವಹಿಸಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ನಾಗಶ್ರೀ ಮಾತನಾಡಿ, ‘ಕೆರೆ ನೀರು ತುಂಬಿಸುವ ಯೋಜನೆ ಉತ್ತಮ ಯೋಜನೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಇದರಿಂದ ರೈತರ ಆದಾಯ ಹೆಚ್ಚುವುದಲ್ಲದೇ ವ್ಯಾಪಾರ, ವಹಿವಾಟು ವೃದ್ಧಿಯಾಗಲಿದೆ’ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಸಿ.ಎಸ್.ಬಾಲರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿನ್ನತಾಯಮ್ಮ, ಮುಖಂಡರಾದ ಶಿವಶಂಕರ್, ಮಹದೇವಪ್ಪ, ಗುರುಸಿದ್ದಪ್ಪ, ತ್ಯಾಗಶೆಟ್ಟಿ, ಶಿವಣ್ಣ ಎಚ್.ಎಂ, ಮಹದೇವಶೆಟ್ಟಿ, ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ವೀರಭದ್ರಸ್ವಾಮಿ, ನಾಗಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಮಂಗಲ, ಹುಲ್ಲೇಪುರ, ಮಂಗಲ ಹೊಸೂರು, ಚುಂಗಡಿಪುರ ಗ್ರಾಮಸ್ಥರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು