ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ರೆಸಾರ್ಟ್‌ ತೆರೆಯುವುದಕ್ಕೆ ಸ್ಥಳೀಯರ ವಿರೋಧ

ಇಂದಿನಿಂದ ಕಾರ್ಯಾರಂಭ ಮಾಡಲಿವೆ ರೆಸಾರ್ಟ್‌, ಹೋಂ ಸ್ಟೇ, ಸಫಾರಿಯೂ ಆರಂಭ
Last Updated 7 ಜೂನ್ 2020, 16:25 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸೋಮವಾರದಿಂದರೆಸಾರ್ಟ್‌, ಹೋಂ ಸ್ಟೇ ಸೇರಿದಂತೆ ಆತಿಥ್ಯ ಉದ್ಯಮ ಕಾರ್ಯಾರಂಭಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿರುವುದರಿಂದ, ಜಂಗಲ್‌ ಲಾಡ್ಜಸ್‌ ಆಂಡ್‌ ರೆಸಾರ್ಟ್‌ ಸೇರಿದಂತೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತ ಇರುವ ರೆಸಾರ್ಟ್‌ಗಳು ಕಾರ್ಯಾರಂಭ ಮಾಡಲು ಸಿದ್ಧತೆ ನಡೆಸಿವೆ.

ಆದರೆ, ಕಾಡಂಚಿನ ಪ್ರದೇಶದ ಸ್ಥಳೀಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೂ ಎರಡು ಮೂರು ತಿಂಗಳ ಕಾಲ ಭಾಗದ ರೆಸಾರ್ಟ್‌ಗಳನ್ನು ತೆರೆಯಲು ಅವಕಾಶ ನೀಡಬಾರದು ಎಂದು ಕೆಲ ಯುವಕರು ಅಭಿಯಾನ ಆರಂಭಿಸಿದ್ದಾರೆ.

ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಹತ್ತಕ್ಕೂ ಹೆಚ್ಚಿನ ಗ್ರಾಮಗಳಿಗೆ ಈ ಭಾಗದಲ್ಲಿ ನಾಲ್ಕು ಐಷಾರಾಮಿ ರೆಸಾರ್ಟ್ ಹಾಗೂ ಹತ್ತಾರು ಹೋಂ ಸ್ಟೇಗಳಿವೆ.

‘ಇವುಗಳು ತೆರೆದರೆ ದೂರದ ಊರುಗಳಿಂದ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಇವರಲ್ಲಿ ಯಾರಿಗೆ ಕೋವಿಡ್‌–19 ಇದೆ ಎಂಬುದು ಗೊತ್ತಿಲ್ಲ. ಆ ಹೋಟೆಲ್‌ಗಳಿಗೆ ಹೋಗಬೇಕಾದರೆ ಗ್ರಾಮದ ಮೂಲಕವೇ ಹಾದು ಹೋಗಬೇಕು. ಜೊತೆಗೆ ರೆಸಾರ್ಟ್ ಮತ್ತು ಹೋಂ ಸ್ಟೇಗಳೆಲ್ಲ ಕಾಡಿಗೆ ಹೊಂದಿಕೊಂಡಂತೆ ಇವೆ. ಪ್ರಾಣಿಗಳ ಓಡಾಟವೂ ಹೆಚ್ಚಿದೆ. ಕಾಡು ಪ್ರಾಣಿಗಳಿಗೂ ಹರಡುವ ಸಾಧ್ಯತೆ ಇದೆ’ ಎಂದು ಮಂಗಲ ಗ್ರಾಮದ ಯುವಕ ನಂಜುಂಡಸ್ವಾಮಿ ತಿಳಿಸಿದರು.

‘ಇಲ್ಲಿರುವ ಹೋಟೆಲ್ ಮತ್ತು ರೆಸಾರ್ಟ್‌ಗಳಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರು ಹೆಚ್ಚು. ಸದ್ಯದ ಮಟ್ಟಿಗೆ ಚಾಮರಾಜನಗರ ಜಿಲ್ಲೆ ಹಸಿರು ವಲಯದಲ್ಲಿ ಇದೆ. ಇವುಗಳಿಗೆ ಅವಕಾಶ ಕೊಟ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಶಾಸಕರು, ಜಿಲ್ಲಾಧಿಕಾರಿಗಳು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು’ ಎಂದು ಸ್ಥಳೀಯರು ಹೇಳುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಈ ಭಾಗದ ಅನೇಕರು ರೆಸಾರ್ಟ್ ಮತ್ತು ಹೋಟೆಲ್‌ಗಳಿಗೆ ಕೆಲಸಗಳಿಗೆ ಹೋಗುತ್ತಾರೆ. ಪ್ರವಾಸಿಗರಲ್ಲಿ ಯಾರಾದರೂ ಸೋಂಕಿತರು ಇದ್ದರೆ ಏನು ಗತಿ? ಮೊದಲೇ ಗ್ರಾಮಗಳು ಕಾಡಂಚಿನಲ್ಲಿದ್ದು ಆಸ್ಪತ್ರೆಗೆ ಹೋಗಬೇಕೆಂದರೆ 20ರಿಂದ 39 ಕಿ.ಮೀ ಹೋಗಬೇಕಿದೆ. ಅಲ್ಲದೇ ಈ ಭಾಗದಲ್ಲಿ ಹತ್ತಾರು ಬುಡಕಟ್ಟು ಕಾಲೊನಿಗಳು ಇದೆ. ಇವುಗಳ ಭವಿಷ್ಯದ ದೃಷ್ಟಿಯಿಂದ ಎರಡು ಮೂರು ತಿಂಗಳು ಅವಕಾಶ ನೀಡಬಾರದು’ ಎಂದು ಅನೇಕ ಯುವಕರು ಒತ್ತಾಯಿಸುತ್ತಿದ್ದಾರೆ.

‘ಆರೋಗ್ಯದ ದೃಷ್ಟಿಯಿಂದ ಇನ್ನೂ ಸ್ವಲ್ಪ ದಿನಗಳ ಕಾಲ ರೆಸಾರ್ಟ್ ತೆರೆಯುವುದು ಬೇಡ. ಆರ್ಥಿಕವಾಗಿ ಸಿಬ್ಬಂದಿಗೆ ತೊಂದರೆಯಾಗುತ್ತದೆ ನಿಜ. ಆದರೂ ಬುಡಕಟ್ಟು ಹೆಚ್ಚು ಜನರು ಈ ಭಾಗದಲ್ಲಿ ಇದ್ದಾರೆ. ಅಂತವರಿಗೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ ಸದ್ಯದ ಮಟ್ಟಿಗೆ ತೆರೆಯುವುದು ಬೇಡ’ ಎಂದು ರೆಸಾರ್ಟ್‌ ಒಂದರ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಕಡೆ ಹೋಟೆಲ್‌, ಹೋಂ ಸ್ಟೇ, ರೆಸಾರ್ಟ್‌ಗಳನ್ನೂ ತೆರೆದಿದ್ದರೂ, ಚಾಮರಾಜನಗರ ಜಿಲ್ಲೆಯ ಕಾಡಂಚಿನನಲ್ಲಿ ಇರುವ ರೆಸಾರ್ಟ್‌ಗಳನ್ನು ತೆರೆಯುವುದಕ್ಕೆ ಅವಕಾಶ ನೀಡಬಾರದು. ಸದ್ಯದ ಮಟ್ಟಿಗೆ ಉದ್ಯೋಗಕ್ಕೆ ತೊಂದರೆಯಾಗಿಲ್ಲ. ನರೇಗಾದಲ್ಲಿ ದುಡಿಯುವ ಎಲ್ಲರಿಗೂ ಕೆಲಸ ಇದೆ’ ಮೇಲುಕಾಮನಹಳ್ಳಿಯರ ರವಿಕುಮಾರ್ ತಿಳಿಸಿದರು.

ಸಫಾರಿಯೂ ಆರಂಭ

ಬಂಡೀಪುರದ ಸಫಾರಿ ಕೂಡ ಸೋಮವಾರದಿಂದ ಆರಂಭವಾಗಲಿದೆ. ಅರಣ್ಯ ಇಲಾಖೆಗೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿದೆ.

‘ಸಫಾರಿ ನಡೆಸಲು ಅನುಮತಿ ಸಿಕ್ಕಿದೆ. ಕೋವಿಡ್‌–19 ತಡೆಗಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡುತ್ತಲೇ, ಸಫಾರಿ ಸೇವೆ ಒದಗಿಸಲಾಗುವುದು. ಸಫಾರಿ ವಾಹನಗಳ ಒಟ್ಟು ಆಸನ ಸಾಮರ್ಥ್ಯದ ಅರ್ಧದಷ್ಟು ಪ್ರವಾಸಿಗರನ್ನು ಕರೆಯೊಯ್ಯಲಾಗುವುದು’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT