ಬುಧವಾರ, ಸೆಪ್ಟೆಂಬರ್ 29, 2021
20 °C
ಉರುಳು ಇಟ್ಟ ವ್ಯಕ್ತಿಯ ಬಂಧನ, ಹಿಂದೆಯೂ ದಂತ, ಹುಲಿ ಚರ್ಮ ಪ್ರಕರಣಗಳಲ್ಲಿ ಆರೋಪಿ

ಬಂಡೀಪುರ: ಪ್ರಶ್ನೆ ಹುಟ್ಟುಹಾಕಿದ ಹುಲಿ ಸಾವು

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಬೀಟ್‌ನಲ್ಲಿ ಉರುಳಿಗೆ ಸಿಲುಕಿ ಗಂಡು ಹುಲಿಯೊಂದು ಮೃತಪಟ್ಟಿರುವ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.  ಪ್ರಕರಣಕ್ಕೆ ಸಂಬಂಧಿಸಿ ಹೊಸಹಳ್ಳಿ ಹಾಡಿಯ ನಿವಾಸಿ ಚಂದ್ರು ಎಂಬುವವರನ್ನು ಬಂಧಿಸಿದ್ದಾರೆ. 

‘ಆರೋಪಿಯು ಆನೆ ದಂತ, ಹುಲಿ ಚರ್ಮದ ಪ್ರಕರಣಗಳಲ್ಲೂ ಪ್ರಮುಖ ಆರೋಪಿಯಾಗಿದ್ದ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಳ್ಳಬೇಟೆ ಉದ್ದೇಶ: ಹೊಸಹಳ್ಳಿ ಬೀಟ್‌ನಲ್ಲಿರುವ ಆನೆ ಕಂದಕ ಸಮೀಪದ ಪೊದೆಯೊಂದರಲ್ಲಿ ಉರುಳು ಹಾಕಲಾಗಿತ್ತು. ಕಂದಕ ದೊಡ್ಡದಾಗಿದ್ದು, ಸುಲಭವಾಗಿ ಹೋಗಲು ಸಾಧ್ಯವಿಲ್ಲ. ಪ್ರಾಣಿಗಳ ಓಡಾಟದ ಬಗ್ಗೆ ಅರಿತಿರುವ ಹಾಗೂ ಬೇಟೆಯಲ್ಲಿ ಪಳಗಿರುವವರಿಗೆ ಮಾತ್ರ ಸಾಧ್ಯ’ ಎನ್ನುತ್ತಾರೆ ಅಧಿಕಾರಿಗಳು. 

‘ಹುಲಿಯನ್ನು ಬೇಟೆಯಾಡಲೆಂದೇ ಆರೋಪಿ ಉರುಳು ಹಾಕಿದ್ದರೋ ಅಥವಾ ಬೇರೆ ಪ್ರಾಣಿ ಸೆರೆಗೆ ಉದ್ದೇಶಿಸಿದ್ದರೋ ಸ್ಪಷ್ಟವಾಗಿಲ್ಲ. ಜಿಂಕೆ, ಹಂದಿ ಸೆರೆಗಾಗಿ ಕೃತ್ಯ ಎಸಗಿರಬಹುದು’ ಎಂಬುದು ಅಧಿಕಾರಿಗಳ ಶಂಕೆ.

ಅಧಿಕಾರಿ –ಸಿಬ್ಬಂದಿ ಸಂಘರ್ಷ ಕಾರಣವೇ?: ಬಂಡೀಪುರದಲ್ಲಿ ಕೆಲವು ತಿಂಗಳುಗಳಿಂದ ಅಧಿಕಾರಿಗಳು ಹಾಗೂ ತಳಮಟ್ಟದ ಸಿಬ್ಬಂದಿ ನಡುವೆ ಘರ್ಷಣೆ ನಡೆಯುತ್ತಿದೆ. ಸಾಮೂಹಿಕ ವರ್ಗಾವಣೆ, ತಾರತಮ್ಯ, ಶೋಷಣೆಯನ್ನು ವಿರೋಧಿಸಿ ದಿನಗೂಲಿ ನೌಕರರು ಇತ್ತೀಚೆಗೆ ಉನ್ನತ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದರು.

‘ಗುಂಡ್ರೆ ಹಾಗೂ ಮೊಳೆಯೂರು ವಲಯದ ಅಧಿಕಾರಿಗಳ ಬಗ್ಗೆ ಸಿಬ್ಬಂದಿ ವ್ಯಕ್ತಪಡಿಸಿದ್ದ ಆಕ್ಷೇಪವೂ ಘಟನೆ ಹಿನ್ನೆಲೆಯಲ್ಲಿರಬಹುದು’ ಎಂಬುದು ಪರಿಸರವಾದಿಗಳ ಅನುಮಾನ.

ಸಾಮಾನ್ಯವಾಗಿ ಸಿಬ್ಬಂದಿ ಡಿ–ಲೈನ್‌ ಪಕ್ಕದಲ್ಲಿ ಗಸ್ತು ತಿರುಗುತ್ತಾರೆ. ಕೆಳಹಂತದಲ್ಲಿ ಆದಿವಾಸಿಗಳೇ ನೌಕರರಾಗಿರುವುದರಿಂದ ಜನರ ಚಲನವಲನಗಳನ್ನು, ಬೇಟೆ ಯತ್ನಗಳ ಸುಳಿವನ್ನೂ ಸೂಕ್ಷ್ಮವಾಗಿ ಗ್ರಹಿಸಬಲ್ಲರು. ಕೆಲವು ಬಾರಿ ಅಧಿಕಾರಿಗಳ ಮೇಲಿನ ಕೋಪಕ್ಕೆ, ಮಾಹಿತಿ ನೀಡದೆ ಸುಮ್ಮನಿರುವ ಸಾಧ್ಯತೆ ಇರುತ್ತದೆ. ಗಸ್ತು ಸರಿಯಾಗಿ ನಡೆಯದಿರಬಹುದು. ಹೊಸಹಳ್ಳಿ ಬೀಟ್‌ನಲ್ಲಿ ಇಂತಹದ್ದೇನಾದರೂ ನಡೆದಿದೆಯೇ ಎಂಬ ಸಂಶಯವೂ ಉಂಟಾಗಿದೆ. 

‘ಪ್ರೌಢಾವಸ್ಥೆಯಲ್ಲಿದ್ದ, 5ರಿಂದ 6 ವರ್ಷ ವಯಸ್ಸಿನ ದಷ್ಟಪುಟ್ಟ ಹುಲಿ ಮುಳ್ಳು ಹಂದಿಯ ಬೇಟೆಗೆ ವಿಫಲ ಯತ್ನ ನಡೆಸಿ ಗಾಯಗೊಂಡಿತ್ತು ಎನ್ನುತ್ತಾರೆ ಅಧಿಕಾರಿಗಳು. ಅದು ಉರುಳಿಗೆ ಬೀಳದೇ ಇರುತ್ತಿದ್ದರೆ ಗಾಯಗೊಂಡಿದ್ದರೂ, ತನಗೆ ಸಾಧ್ಯವಿರುವ ಪ್ರಾಣಿಗಳನ್ನು ಬೇಟೆಯಾಡಿ ಇನ್ನಷ್ಟು ವರ್ಷ ಬದುಕುವ ಸಾಧ್ಯತೆ ಇತ್ತು’ ಎನ್ನುತ್ತಾರೆ ವನ್ಯಪ್ರೇಮಿಗಳು. 

ಹೊಸಹಳ್ಳಿ ಹಾಡಿಗೆ ಭೇಟಿ

ಹೊಸಹಳ್ಳಿ ಹಾಡಿಯ ಆರೋಪಿಯನ್ನು ಬಂಧಿಸಿದ ಬೆನ್ನಲ್ಲೇ, ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್.ನಟೇಶ್‌ ಹಾಗೂ ಎಸಿಎಫ್‌ ರವಿಕುಮಾರ್‌ ಬುಧವಾರ ಹಾಡಿಗಳಿಗೆ ಭೇಟಿ ನೀಡಿ, ವನ್ಯಜೀವಿ ಮಾನವ ಸಂಘರ್ಷ ತಡೆಯುವ ಕುರಿತು ಜನರೊಂದಿಗೆ ಸಮಾಲೋಚಿಸಿದರು. ಬಳಿಕ ಗುಂಡ್ರೆ ಹಾಗೂ ಮೊಳೆಯೂರು ವಲಯಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು. 

----

ಪ್ರಾಣಿಗಳ ಬೇಟೆಗಾಗಿ ಕಳ್ಳಬೇಟೆಗಾರರು ಉರುಳು ಹಾಕುತ್ತಿದ್ದಾರೆ. ಸಿಬ್ಬಂದಿ ಪ್ರತಿನಿತ್ಯ ಕೂಂಬಿಂಗ್‌ ನಡೆಸಿ ಉರುಳು ಪತ್ತೆಹಚ್ಚುತ್ತಿದ್ದಾರೆ
ಎಸ್.ಆರ್.ನಟೇಶ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು