ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರಕ್ಕೆ ಬಂದ ಮುಧೋಳ ನಾಯಿ ಮರಿಗಳು

ಅಪರಾಧ ಪತ್ತೆ ಹಚ್ಚುವ ತರಬೇತಿ ನೀಡಲಿರುವ ಇಲಾಖೆ, ‘ರಾಣಾ’ ಜಾಗಕ್ಕೆ ನಿಯೋಜನೆ
Last Updated 21 ಅಕ್ಟೋಬರ್ 2020, 11:44 IST
ಅಕ್ಷರ ಗಾತ್ರ
ADVERTISEMENT
""
""

ಚಾಮರಾಜನಗರ: ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚುವುದಕ್ಕಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಆಡಳಿತವು, ಮುಧೋಳ ತಳಿಯ ಎರಡು ನಾಯಿ ಮರಿಗಳನ್ನು ಖರೀದಿಸಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳಸಮೀಪದ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದಿಂದ ಒಂದು ತಿಂಗಳಿನ ಒಂದು ಗಂಡು ಹಾಗೂ ಒಂದು ಹೆಣ್ಣು ಮರಿಯನ್ನು ತರಲಾಗಿದೆ. ಐದು ದಿನಗಳ ಹಿಂದೆ ಬಂಡೀಪುರಕ್ಕೆ ಬಂದಿವೆ.

2015ರಿಂದ ಅರಣ್ಯ ಅಪರಾಧ ಪತ್ತೆಯಲ್ಲಿ ತೊಡಗಿರುವ ‘ರಾಣಾ’ ಎಂಬ ಜರ್ಮನ್‌ ಶೆಫರ್ಡ್‌ ತಳಿಯ ಶ್ವಾನವು ನಿವೃತ್ತಿ ಅಂಚಿನಲ್ಲಿರುವುದರಿಂದ, ಅದರ ಸ್ಥಾನಕ್ಕೆ ಬೇರೆ ಶ್ವಾನಗಳನ್ನು ನಿಯೋಜಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದರು.

ಚುರುಕಿಗೆ ಹೆಸರು ವಾಸಿಯಾಗಿರುವ,ಇತ್ತೀಚೆಗೆ ಸೇನೆಗೆ ಸೇರ್ಪಡೆಗೊಂಡು ಸುದ್ದಿ ಮಾಡಿದ್ದ ದೇಸಿ ಹಾಗೂ ಕರ್ನಾಟಕದ್ದೇ ತಳಿಯಾದ ಮುಧೋಳ ನಾಯಿಗಳನ್ನು ಖರೀದಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಎರಡು ಮರಿಗಳಿಗಾಗಿ ಅರಣ್ಯ ಇಲಾಖೆಯು ತಿಮ್ಮಾಪುರದದ ಸಂಶೋಧನಾ ಕೇಂದ್ರಕ್ಕೆ ಬೇಡಿಕೆ ಇಟ್ಟಿತ್ತು. ₹27 ಸಾವಿರ ಪಾವತಿಸಿ ನಾಯಿ ಮರಿಗಳನ್ನು ಖರೀದಿ ಮಾಡಲಾಗಿದೆ.

‘ನಮ್ಮ ‘ರಾಣಾ’ ಶೀಘ್ರದಲ್ಲಿ ನಿವೃತ್ತಿಯಾಗಲಿದ್ದಾನೆ. ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸುವುದಕ್ಕಾಗಿ ಶ್ವಾನಗಳ ಅಗತ್ಯವಿದೆ. ಕುಶಾಗ್ರಮತಿಗಳಾಗಿರುವ ಮುಧೋಳ ತಳಿಯ ನಾಯಿಗಳು ಇತ್ತೀಚೆಗೆ ಬಿಎಸ್‌ಎಫ್‌ ಸೇರಿದಂತೆ ರಕ್ಷಣಾ ಪಡೆಗಳನ್ನು ಸೇರಿವೆ. ಅರಣ್ಯ ಇಲಾಖೆಗೂ ಅವುಗಳನ್ನು ಬಳಸುವ ಅಭಿಪ್ರಾಯವನ್ನು ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ವ್ಯಕ್ತಪಡಿಸಿದ್ದರು. ಅದರಂತೆ ಎರಡು ಮರಿಗಳನ್ನು ಖರೀದಿಸಲಾಗಿದೆ’ ಎಂದು ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್‌) ರವಿ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಂಡೀಪುರಕ್ಕೆ ಬಂದಿರುವ ನಾಯಿಮರಿಗಳು

ಬಿಳಿ ಮರಿಗಳು

ಒಂದು ತಿಂಗಳ ಬಿಳಿ ಬಣ್ಣದ ಎರಡು ಮರಿಗಳನ್ನು ಈಗ ಬಂಡೀಪುರದ ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ. ಅಪರಾಧ ಪತ್ತೆ ಕಾರ್ಯಕ್ಕೆ ಅವುಗಳನ್ನು ನಿಯೋಜಿಸುವುದಕ್ಕೂ ಮುನ್ನ, ಅರಣ್ಯ ಇಲಾಖೆ ಅವುಗಳಿಗೆ ತರಬೇತಿ ನೀಡಲಿದೆ.

ಸದ್ಯ ಕರ್ತವ್ಯದಲ್ಲಿರುವ ರಾಣಾಗೆ ಭೋಪಾಲ್‌ನಲ್ಲಿ 11 ತಿಂಗಳು ತರಬೇತಿ ನೀಡಲಾಗಿತ್ತು. ಮುಧೋಳ ಶ್ವಾನಗಳಿಗೆ ಎಲ್ಲಿ ತರಬೇತಿ ಕೊಡಿಸಬೇಕು ಎಂಬುದನ್ನು ಅಧಿಕಾರಿಗಳು ಇನ್ನೂ ತೀರ್ಮಾನಿಸಿಲ್ಲ.

‘ಬೆಂಗಳೂರು ಅಥವಾ ಮೈಸೂರಿನಲ್ಲಿ ತರಬೇತಿ ಕೊಡಿಸುವ ಯೋಚನೆ ಇದೆ. ತರಬೇತಿ ಸಂಸ್ಥೆಗಾಗಿ ಹುಡುಕಾಟ ನಡೆದಿದೆ’ ಎಂದು ರವಿಕುಮಾರ್‌ ಅವರು ಮಾಹಿತಿ ನೀಡಿದರು.

‘ಎರಡು ಶ್ವಾನಗಳು ಬಂದಿವೆ. ಬಂಡೀಪುರ ಹಾಗೂ ಇತರ ಕಡೆಗಳಲ್ಲಿ ಅರಣ್ಯ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶಕ್ಕೆ ಅವುಗಳನ್ನು ಬಳಸಲಾಗುವುದು. ಕರ್ತವ್ಯಕ್ಕೆ ನಿಯೋಜಿಸುವುದಕ್ಕೂ ಮುನ್ನ ತರಬೇತಿ ನೀಡಲಾಗುವುದು’ ಎಂದು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ನಿವೃತ್ತಿಯ ಅಂಚಿನಲ್ಲಿರುವ ರಾಣಾ

ನಿವೃತ್ತಿ ಅಂಚಿನಲ್ಲಿ ‘ರಾಣಾ’

ಐದು ವರ್ಷಗಳಿಂದ ಕರ್ತವ್ಯದಲ್ಲಿರುವ ‘ರಾಣಾ’, ಅರಣ್ಯ ಇಲಾಖೆಗೆ ಸೇರಿದ ಮೊದಲ ಶ್ವಾನ. 11 ತಿಂಗಳ ತರಬೇತಿಗೆ ಒಳಗಾಗಿದ್ದ ಜರ್ಮನ್‌ ಶೆಫರ್ಡ್‌ ತಳಿಯ ನಾಯಿಯನ್ನು 2015ರಲ್ಲಿ ಬಂಡೀಪುರದಲ್ಲಿ ನಿಯೋಜಿಸಲಾಗಿತ್ತು. ತನ್ನ ಚುರುಕು ತನದಿಂದ ಇಲಾಖೆಯಲ್ಲೇ ಮನೆ ರಾಣಾ ಪ್ರಸಿದ್ಧಿ ಪಡೆದಿದೆ.

ಅಧಿಕಾರಿಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದ ಅನೇಕ ಪ್ರಕರಣಗಳನ್ನೂ ‘ರಾಣಾ’ ಭೇದಿಸಿತ್ತು. ವನ್ಯಜೀವಿಗಳ ಇರುವಿಕೆ ಹಾಗೂ ಜಾಡನ್ನು ಹಲವು ಕಿ.ಮೀ ದೂರದಿಂದಲೇ ಪತ್ತೆ ಹಚ್ಚುವುದರಲ್ಲೂ ನಿಷ್ಣಾತವಾಗಿದ್ದಶ್ವಾನ, ಇತ್ತೀಚೆಗೆ ನಾಗರಹೊಳೆಯಲ್ಲಿ ನಡೆದ ಹುಲಿ ಬೇಟೆಯ ಪ್ರಕರಣವನ್ನೂ ಭೇದಿಸಿತ್ತು.

ಎಂಟು ವರ್ಷ ವಯಸ್ಸಿನ ರಾಣಾ ನಿವೃತ್ತಿಯ ಅಂಚಿನಲ್ಲಿದೆ. ಮುಂದಿನ ವರ್ಷದಿಂದ ಸೇವೆಯಿಂದ ನಿವೃತ್ತಿಯಾಗಲಿದೆ. ಅದಕ್ಕೂ ಮೊದಲು ಬೇರೆ ಶ್ವಾನಗಳನ್ನು ತಯಾರು ಮಾಡಬೇಕು ಎಂಬುದು ಅಧಿಕಾರಿಗಳ ಯೋಜನೆಯಾಗಿತ್ತು. ಅದರಂತೆ ಮುಧೋಳ ಶ್ವಾನಗಳ ಖರೀದಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT