ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ಬಾರ್‌ಗಳಲ್ಲಿ ಇನ್ನೂ ಹೆಚ್ಚದ ವಹಿವಾಟು

ಇನ್ನೂ ಆರಂಭವಾಗದ ಅಂತರರಾಜ್ಯ ಮುಕ್ತ ಸಂಚಾರ, ಪ್ರವಾಸಿಗರ ಸಂಖ್ಯೆಯಲ್ಲಿ ಕಾಣದ ಹೆಚ್ಚಳ
Last Updated 8 ಸೆಪ್ಟೆಂಬರ್ 2020, 20:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ನಾಲ್ಕನೇ ಹಂತದ ಅನ್‌ಲಾಕ್‌ ಆರಂಭವಾಗಿ ವಾರ ಕಳೆದರೂ ತಾಲ್ಲೂಕಿನ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ವ್ಯಾಪಾರದಲ್ಲಿ ಹೇಳುವಂತಹ ಚೇತರಿಕೆ ಕಂಡು ಬಂದಿಲ್ಲ.

ಲಾಕ್‌ಡೌನ್‌ ಆರಂಭವಾಗುವುದಕ್ಕೂ ಮೊದಲು ಎಂಆರ್‌ಪಿಗಿಂತಲೂ ಸ್ವಲ್ಪ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ,ಕೆಲವು ಮದ್ಯದ ಅಂಗಡಿಗಳು ಹಾಗೂ ಬಾರ್‌ಗಳು ಈಗ ಎಂಆರ್‌ಪಿ ಬೆಲೆಗೆ ಮಾರಾಟ ಮಾಡುತ್ತಿದ್ದರೂ, ಮದ್ಯಪ್ರಿಯರು ಬರುತ್ತಿಲ್ಲ.

ತಿಂಗಳ ಆರಂಭದವರೆಗೂ ಮದ್ಯದ ಅಂಗಡಿ ಹಾಗೂ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಹಾಗೂ ಆಹಾರದ ಪಾರ್ಸೆಲ್‌ಗೆ ಮಾತ್ರ ಅವಕಾಶ ಇತ್ತು. ಅನ್‌ಲಾಕ್‌ ನಾಲ್ಕನೇ ಹಂತದಲ್ಲಿ ಈ ನಿಯಮವನ್ನು ತೆಗೆದುಹಾಕಲಾಗಿದ್ದು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲೇ ಮದ್ಯ ಸೇವಿಸಬಹುದು, ಆಹಾರ ತಿನ್ನಬಹುದು. ಹಾಗಿದ್ದರೂ ವ್ಯಾಪಾರ ಚೇತರಿಸಿಕೊಂಡಿಲ್ಲ.

ಹಿಂದೆ ನಡೆಯುತಿದ್ದ ವಾಹಿವಾಟಿನಲ್ಲಿ ಅರ್ಧದಷ್ಟು ವ್ಯಾಪಾರ ಆಗುತ್ತಿಲ್ಲ. ವಿದ್ಯುತ್ ಬಿಲ್, ಕಾರ್ಮಿಕರಗೆ ಸಂಬಳ ನೀಡಲು ಆಗುತ್ತಿಲ್ಲ ಎಂದು ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ಮಾಲೀಕರು ಹೇಳುತ್ತಾರೆ.

ಗುಂಡ್ಲುಪೇಟೆ ಪಟ್ಟಣದಲ್ಲಿ ಏಳು ಬಾರ್ ಮತ್ತು ರೆಸ್ಟೋರೆಂಟ್, ಐದು ಮದ್ಯ ಮಾರಾಟ ಕೇಂದ್ರ ಹಾಗೂ ಎರಡು ಎಂಎಸ್ಐಎಲ್ ಮಳಿಗೆಗಳಿವೆ.

ಲಾಕ್‌ಡೌನ್‌ಗಿಂತಲೂ ಮೊದಲು ವಹಿವಾಟು ಉತ್ತಮವಾಗಿ ನಡೆಯುತ್ತಿದಾಗ ಪ್ರಮಾಣ ಮತ್ತು ಗುಣಮಟ್ಟದ ಆಧಾರದ ಮೇಲೆ ಕೆಲವು ಮಳಿಗೆಗಳು ಮುದ್ರಿತ ಬೆಲೆಗಿಂತ ₹10 ರಿಂದ ₹100 ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು.

‘ಇದೀಗ ಪಟ್ಟಣದಲ್ಲಿ ಇರುವ ಮದ್ಯ ಮಳಿಗೆಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು ಎಂಆರ್‌ಪಿ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರೂ ಮದ್ಯ ಪ್ರಿಯರು ಆಸಕ್ತಿ ತೋರುತ್ತಿಲ್ಲ. ಕೆಲಸ ಇಲ್ಲದೇ ಜನರ ಕೈಯಲ್ಲಿ ಹಣ ಓಡಾಡುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಬಾರ್ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂತರ ರಾಜ್ಯ ಬಂದ್: ಅತ್ತ ಕೇರಳ ಹಾಗೂ ತಮಿಳುನಾಡಿಗೆ ಹೊಂದಿಕೊಂಡಂತಿರುವ ಗುಂಡ್ಲುಪೇಟೆಯ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಿಗೆ ಅಂತರರಾಜ್ಯ ಪ್ರಯಾಣಿಕರೇ ಗ್ರಾಹಕರು. ರಾಜ್ಯಗಳ ನಡುವೆ ಇನ್ನೂ ಮುಕ್ತ ಸಂಚಾರ ಆರಂಭವಾಗದೇ ಇರುವುದು ವ್ಯಾಪಾರ ಹೆಚ್ಚಾಗದಿರಲು ಕಾರಣ.

ಗಡಿಭಾಗದ ಜನರು ಪಟ್ಟಣಕ್ಕೆ ಆಗಮಿಸಿ ಮದ್ಯ ಖರೀದಿಸಿ ಲಾರಿ, ತರಕಾರಿ ವಾಹನಗಳಲ್ಲಿ ಕೊಂಡೊಯ್ಯುತ್ತಿದ್ದರು. ಜೊತೆಗೆ ಅಲ್ಲಿನ ಪ್ರವಾಸಿಗರು ಕೂಡ ಮದ್ಯ ಸೇವನೆಗಾಗಿಯೇ ಪಟ್ಟಣಕ್ಕೆ ಬರುತ್ತಿದ್ದರು.

‘ಬಿಯರ್ ವಹಿವಾಟು ಅರ್ಧದಷ್ಟು ಕುಸಿತವಾಗಿದೆ. ಮದ್ಯ ವ್ಯಾಪಾರ ಶೇ30 ರಿಂದ 40ರಷ್ಟು ಕಡಿಮೆಯಾಗಿದೆ. ಗುಂಡ್ಲುಪೇಟೆಯಲ್ಲಿ ನಡೆಯುವ ವ್ಯಾಪಾರ ಪ್ರವಾಸಿಗರನ್ನು ಅವಲಂಭಿಸಿದೆ. ರಾಜ್ಯಗಳ ನಡುವೆ ಮುಕ್ತ ಸಂಚಾರಕ್ಕೆ ಅವಕಾಶವಾದರೆ ವಹಿವಾಟು ಏರಿಕೆಯಾಗಬಹುದು’ ಎಂದು ಅಬಕಾರಿ ಇನ್‌ಸ್ಪೆಕ್ಟರ್‌ ಸುನಂದಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT