ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಬೆಟ್ಟಿಂಗ್‌, ಅಕ್ರಮ ಮದ್ಯ, ಲಾಟರಿ ಮಾರಾಟ ಅವ್ಯಾಹತ

ಗುಂಡ್ಲುಪೇಟೆ: ಕ್ರಮ ಕೈಗೊಳ್ಳದ ಪೊಲೀಸರು‌– ಸಾರ್ವಜನಿಕರ ಆರೋಪ
Last Updated 10 ಅಕ್ಟೋಬರ್ 2021, 7:55 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಮದ್ಯ ವಹಿವಾಟು, ಕೇರಳ ಲಾಟರಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮಗಳ ಬಗ್ಗೆ ಪೊಲೀಸ್‌ ಸಿಬ್ಬಂದಿಗೆ ತಿಳಿದಿದ್ದರೂ ಮೌನವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಕಾಡಂಚಿನ ಗ್ರಾಮಗಳು ಮತ್ತು ಗಿರಿಜನ ಹಾಡಿಗಳಲ್ಲಿ ಮದ್ಯಮಾರಾಟ ಹೆಚ್ಚಾಗಿದೆ. ಲಾಟರಿ ಜೂಜಿಗೆ ದಾಸರಾಗಿರುವವರ ಸಂಖ್ಯೆಯೂ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಹತ್ತಕ್ಕೂ ಹೆಚ್ಚಿನ ಗಿರಿಜನರ ಹಾಡಿಗಳಿವೆ. ಇಲ್ಲಿನ ಗಿರಿಜನರು ಹೆಚ್ಚಾಗಿ ಕೇರಳದ ರೈತರ ಜಮೀನಿಗೆ ಕೂಲಿಗೆ ಹೋಗುತ್ತಾರೆ. ಪಡೆದ ಕೂಲಿಯನ್ನು ಮದ್ಯಕ್ಕಾಗಿಯೇ ಖರ್ಚು ಮಾಡುತ್ತಿರುವುದರಿಂದ ಬರಿಗೈಯಲ್ಲಿ ಮನೆ ಸೇರುತ್ತಿದ್ದಾರೆ. ಇದರಿಂದಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ.

ಮೇಲುಕಾಮನಹಳ್ಳಿ, ಹಂಗಳ, ಮಂಗಲ ಭಾಗದಲ್ಲಿ ಕೆಲವು ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ಬಗ್ಗೆ ಗ್ರಾಮದದವರು ಪೊಲೀಸರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ.

‘ಮದ್ಯ ಮಾರಾಟ ಮಾಡುವವರನ್ನು ಬಂಧಿಸುವಂತೆ ನಾಟಕವಾಡುವ ಪೊಲೀಸರು, ಮತ್ತೆ ಬಿಟ್ಟುಬಿಡುತ್ತಾರೆ. ಬಿಡುಗಡೆಯಾಗಿ ಬಂದವರು ಮತ್ತೆ ದಂಧೆಯನ್ನು ಆರಂಭಿಸುತ್ತಿದ್ದಾರೆ. ಗಿರಿಜನ ಹಾಡಿಗಳಿಗೆ ಮತ್ತು ಗಿರಿಜನರು ಕೆಲಸ ಮಾಡುವ ಜಮೀನಿಗೆ ತೆರಳಿ ಹೆಚ್ಚಿನ ಹಣ ಪಡೆದು ಮಾರಾಟ ಮಾಡುತ್ತಿದ್ದಾರೆ’ ಎಂಬುದು ಗ್ರಾಮಸ್ಥರ ಆರೋಪ.

‘ಪ್ರತಿ ನಿತ್ಯ ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುವುದರಿಂದ ಕುಟುಂಬ ನಿರ್ವಹಣೆ ಕಷ್ಟ ವಾಗುತ್ತಿದೆ. ಕೈ ಹಣ ಇಲ್ಲದಿದ್ದರೆ ಮನೆಯಲ್ಲಿ ಪದಾರ್ಥಗಳನ್ನು ಮಾರಾಟ ಮಾಡಿ ಕುಡಿಯುತ್ತಾರೆ. ಅಕ್ರಮವಾಗಿ ಮಾರಾಟ ಮಾಡುವವರನ್ನು ತಡೆಯದಿದ್ದರೆ ಅನೇಕ ಸಂಸಾರಗಳು ಬೀದಿಗೆ ಬೀಳುತ್ತವೆ’ ಎಂದು ಗಿರಿಜನ ಮಹಿಳೆಯರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ಅಕ್ರಮ ಮದ್ಯ ಮಾರಾಟ ಬಗ್ಗೆ ಪೊಲೀಸರಿಗೆ ಮತ್ತು ಅಬಕಾರಿ ಪೊಲೀಸರಿಗೆ ತಿಳಿಸಿದರೂ ಕಡಿಮೆಯಾಗಿಲ್ಲ. ತಾಲ್ಲೂಕು ಆಡಳಿತ ಅಕ್ರಮ ವಹಿವಾಟಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸುತ್ತಾರೆ ಅವರು.

ರಾಜಾರೋಷವಾಗಿ ಬೆಟ್ಟಿಂಗ್‌: ಐಪಿಎಲ್‌ ಕ್ರಿಕೆಟ್‌ ಟೂರ್ನಿ ನಡೆಯುತ್ತಿದ್ದು, ಯುವಕರು ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ತೊಡಗುತ್ತಿದ್ದಾರೆ.ಕೆಲವು ಗ್ರಾಮ ಮತ್ತು ಪಟ್ಟಣದಲ್ಲಿ ಸಂಜೆಯಾಗುತ್ತಿದ್ದಂತೆ ಯುವಕರು ಒಂದೆಡೆ ಸೇರಿ, ನಿರ್ದಿಷ್ಟ ತಂಡವೇ ಗೆಲ್ಲುತ್ತದೆ, ಒವರ್‌ಗೆ ಇಂತಿಷ್ಟು ರನ್‌ ಬರುತ್ತದೆ. ವಿಕೆಟ್ ಬಿಳುತ್ತದೆ ಎಂದೆಲ್ಲ ಹಣಕಟ್ಟಿ ಜೂಜು ಆಡುತ್ತಾರೆ. ಪಟ್ಟಣದ ಸುತ್ತ ಹಾಗೂ ಗ್ರಾಮೀಣ ಭಾಗದಲ್ಲಿ ಸಕ್ರಿಯವಾಗಿರುವ ಇಸ್ಪೀಟು ಅಡ್ಡೆಗಳ ಸಂಖ್ಯೆಗೂ ಕಡಿಮೆಯಲ್ಲ.

ಗುಪ್ತಚರ ವೈಫಲ್ಯವೇ ಅಲ್ಲ ನಿರ್ಲಕ್ಷ್ಯವೇ?
ಕೇರಳದ ಲಾಟರಿ ಮಾರಾಟವೂ ತಾಲ್ಲೂಕಿನಲ್ಲಿ ನಡೆಯುತ್ತಿದೆ. ಕೆಲವರು ಕೇರಳದ ಸುಲ್ತಾನ್‌ ಬತ್ತೇರಿ ಮತ್ತು ವಯನಾಡು ಭಾಗಗಳಿಗೆ ತೆರಳಿ ಅಲ್ಲಿಂದ ಲಾಟರಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೇರಳ ಮತ್ತು ತಮಿಳುನಾಡಿನ ಭಾಗದಿಂದ ಬರುವ ಲಾರಿ ಇನ್ನಿತರ ಸರಕು ಸಾಗಾಣಿಕೆಯ ವಾಹನಗಳಲ್ಲಿ ತಾಲ್ಲೂಕಿಗೆ ತ್ಯಾಜ್ಯ ತಂದು ಗ್ರಾಮೀಣ ಭಾಗಗಳಲ್ಲಿ ಸುರಿಯಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಸರಿಯಾಗಿ ತಪಾಸಣೆ ಮಾಡದಿರುವುದರಿಂದ ಈ ರೀತಿ ಆಗುತ್ತಿದೆ.

‘ಪೊಲೀಸರು ಇದರ ಬಗ್ಗೆ ಮಾಹಿತಿಯೇ ಇಲ್ಲದಂತೆ ಇದ್ದಾರೆ. ಪೊಲೀಸ್‌ ಗುಪ್ತಚರ ಸಿಬ್ಬಂದಿ ಮಾಹಿತಿ ಸಂಗ್ರಹಿಸುತ್ತಿಲ್ಲವೇ ಅಥವಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆಯೇ’ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

‘ತಾಲ್ಲೂಕಿನಲ್ಲಿ ಗಣಿಗಾರಿಕೆ ನಡೆಯುತ್ತಿದ್ದು,ಪ್ರತಿದಿನ ಇಂತಿಷ್ಟು ಲೋಡಿಗೆ ಎಂದು ಪರಾವನಿಗೆ ಅದಕ್ಕಿಂತ ಹೆಚ್ಚು ಲೋಡುಗಳನ್ನು ಸಾಗಣೆ ಮಾಡುತ್ತಿದ್ದಾರೆ. ಮಿತಿಗಿಂತ ಅಧಿಕ ಭಾರ ತುಂಬಿದ ಲಾರಿಗಳು ಪಟ್ಟಣದಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಸಂಚಾರ ಮಾಡುತ್ತದೆ. ಈ ಬಗ್ಗೆ ಆರ್‌ಟಿಒಗಳಾಗಲಿ, ಪೊಲೀಸರಾಗಲಿ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಪಟ್ಟಣದ ದೀಪಕ್ ಅವರು ದೂರಿದರು.

**
ಅಕ್ರಮಗಳ ಬಗ್ಗೆ ಗಮನ ಹರಿಸುವಂತೆ ಪೊಲೀಸರಿಗೆ ತಿಳಿಸುತ್ತೇನೆ. ಅಕ್ರಮಗಳು ಕಂಡುಬಂದರೆ ಸಾರ್ವಜನಿಕರೇ ನೇರವಾಗಿ ಮೇಲಾಧಿಕಾರಿಗಳಿಗೆ ತಿಳಿಸಬಹುದು.
-ಕೆ.ಎಸ್‌.ಸುಂದರ್ ರಾಜ್, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT