ಯಳಂದೂರು: ತಾಲ್ಲೂಕಿನ ಪುರಾಣ ಪ್ರಸಿದ್ಧ ಬಿಳಿಗಿರಿಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ರಂಗಪ್ಪನ ಮಹಾ ರಥೋತ್ಸವವನ್ನು ಅಪಾರ ಭಕ್ತರು ತೇರಿನ ಬೀದಿಯಷ್ಟೇ ಅಲ್ಲದೆ ಇಕ್ಕೆಲಗಳಲ್ಲಿರುವ ಎತ್ತರದ ಸ್ಥಳದಲ್ಲಿ ನಿಂತು ಕಣ್ತುಂಬಿಕೊಂಡರು. ಬನದ ಮೇಲಿನ ಆರಾಧ್ಯ ದೈವ ರಂಗನಾಥನ ಉತ್ಸವ ಮೂರ್ತಿಯನ್ನು ತಂದು ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಜಾತ್ರೆಯ ಅಂಗವಾಗಿ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಾಲಯ ಮಹಾದ್ವಾರವನ್ನು ಕಬ್ಬು, ಬಾಳೆ, ತಳಿರು ತೋರಣಗಳ ಅಲಂಕಾರದಿಂದ ಸಿಂಗರಿಸಲಾಗಿತ್ತು. ಆಲಯದಿಂದ ಇಳಿಬಿಟ್ಟ ಹೂ ಮಾಲೆಗಳ ತೋರಣ ಗಮನ ಸೆಳೆಯಿತು. ಬಂಗಾರದ ಆಭರಣಗಳಿಂದ ಕಂಗೊಳಿಸುತ್ತಿದ್ದ ದೇವರ ಮಂಗಳಮೂರ್ತಿಗೆ ಅರಿಸಿನ, ಚಂದನ ಮತ್ತು ಕುಂಕುಮಗಳ ಸಿಂಚನ, ಹಣೆಗೆ ನಾಮ ಬಳಿದು ಶ್ವೇತ ವಸ್ತ್ರಗಳ ಧಾರಣೆ ಮಾಡಲಾಗಿತ್ತು.

ರಥೋತ್ಸವದ ನಂತರ ದೇವಾಲಯ ಸುತ್ತಲೂ ಭಕ್ತಗಣ ಕರ್ಪೂರ ಮತ್ತು ಸುಗಂಧ ಕಡ್ಡಿ ಬೆಳಗಿ, ದೇಗುಲದ ತುಂಬ ಸಾಂಬ್ರಾಣಿ ಪರಿಮಳ ಚಲ್ಲಿ, ಹಣ್ಣು ಕಾಯಿ ಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.

ಕಂಗೊಳಿಸಿದ ದೊಡ್ಡ ತೇರು: ದೇವಸ್ಥಾನದಲ್ಲಿ ದೊಡ್ಡ ಜಾತ್ರೆಗೂ ಮೊದಲು ನಿತ್ಯಾರಾಧನೆ ಮುಗಿಸಿ, ಕಲ್ಯಾಣೋತ್ಸವ ಹಾಗೂ ಪ್ರಸ್ಥಾನ ಮಂಟಪೋತ್ಸವ ಪೂರೈಸಲಾಗಿತ್ತು. ಚೈತ್ರ ಶುಕ್ಲ ಶುದ್ಧ ಪೌರ್ಣಮಿಯಂದು ಬೆಳಿಗ್ಗೆ 10.53ರಿಂದ 11.08ರೊಳಗೆ ಸಲ್ಲುವ ಶುಭ ಮಿಥುನ ಲಗ್ನದ ಮೇಷ ಕುಜ ನಾವಾಂಶ ಶುಭ ಮುಹೂರ್ತದಲ್ಲಿ ಭೂದೇವಿ ಮತ್ತು ಶ್ರೀದೇವಿ ಸಮೇತ ಬಿಳಿಗಿರಿ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥಾರೋಹಣ ಮಾಡಲಾಯಿತು.

ವಿವಿಧ ಫಲ ಪುಷ್ಪಗಳಿಂದ ರಾರಾಜಿಸುತ್ತಿದ್ದ ರಂಗನಾಥನ ರಥ ಚಲಿಸುತ್ತಿದ್ದಂತೆ ಭಕ್ತಾದಿಗಳು ಜಯಘೋಷ ಮೊಳಗಿಸಿದರು. ಪೂರ್ವಾಭಿಮುಖವಾಗಿ ರಥ ಹೊರಡುತ್ತಿದ್ದಂತೆ ನೂರಾರು ದಾಸರು ಎಡಬಿಡದೆ ಜಾಗಟೆ ಬಾರಿಸಿದರು. ಮಧ್ಯೆ ಶಂಖನಾದ ಮಾಡುತ್ತಿದ್ದಂತೆ ನೆರೆದವರು ‘ಊಘೇ ರಂಗಪ್ಪ ಉಘೇ’ ಗುಣಗಾನ ಮಾಡಿದರು. ಮಂಗಳವಾದ್ಯದ ಸದ್ದು ಬನದಲ್ಲಿ ಅನುರಣಿಸಿತು. ಭಕ್ತಗಣದ ಕಲರವ ಮುಗಿಲು ಮುಟ್ಟಿತು. ಅರ್ಚಕರು ಸ್ವಾಮಿಗೆ ಮಂಗಳಾರತಿ ಬೆಳಗಿದರೆ, ಭಕ್ತರು ವೀಳ್ಯದೆಲೆ, ತೆಂಗಿನ ಕಾಯಿ, ಕರ್ಪೂರ ಬೆಳಗಿದರು.

ಇದೇ ಸಮಯ ರಥದ ಬೀದಿಯಲ್ಲಿ ಕಾನನದಿಂದ ಗರುಡ ಪಕ್ಷಿ ತೇರನ್ನು ಪ್ರದಕ್ಷಿಣೆ ಹಾಕಿತು. ರಂಗನಾಥನ ಭಕ್ತರು ‘ಗೋವಿಂದ ಗೋವಿಂದ..’ ಸ್ಮರಣೆ ಮಾಡಿದರು. 25 ನಿಮಿಷದಲ್ಲಿ ಮೂಡಣ ದಿಕ್ಕಿನತ್ತ ಬ್ರಹ್ಮರಥ ವೈಭವದಿಂದ ಚಲಿಸಿ ನಿಂತಿತು. ರೈತಾಪಿ ವರ್ಗ ಮತ್ತು ದಾಸನ ಒಕ್ಕಲಿನವರು ದವಸ, ಧಾನ್ಯ ತೂರಿದರೆ, ಸೋಲಿಗರು ಮೆಣಸು ಚೆಲ್ಲಿ ಹರಕೆ ಒಪ್ಪಿಸಿದರು. ಸ್ತ್ರೀಯರು ನಾಣ್ಯಗಳನ್ನು ಚೆಲ್ಲಿ ಸಂಭ್ರಮಿಸಿದರು. ನವ ದಂಪತಿ ಬಾಳೆಹಣ್ಣು, ಧವನವನ್ನು ದೊಡ್ಡ ರಥಕ್ಕೆ ಎಸೆದು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಪಕ್ಷಗಳ ಕಾರ್ಯಕರ್ತರು, ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿ ಎಂದು ಅವರ ಹೆಸರು ಬಾಳೆಹಣ್ಣಿನಲ್ಲಿ ಬರೆದು ತೇರಿಗೆ ಎಸೆದರು.

ಕಳೆಗಟ್ಟಿದ ಬ್ಯಾಟೆಮನೆ

ತೇರು ಸಾಗುವ ಹಾದಿಯಲ್ಲಿ ಬ್ಯಾಟೆಮನೆ ಉತ್ಸವ ಕಳೆಗಟ್ಟಿತು. ಭಕ್ತರು ಅಕ್ಕಿ ಬೆಲ್ಲ ಪುರಿಯ ಮಿಶ್ರಣವನ್ನು ಇಟ್ಟರು. ದಾಸರು ‘ಆಪರಾಕ್ ಗೋಪಾರಕ್’ ಸಂಪ್ರದಾಯ ಪೂಜೆ ನೆರವೇರಿಸಿದರು. ಅರವಟ್ಟಿಗೆಗಳ ಸಾಲಿನಲ್ಲಿ ಭಕ್ತರು ಪಾನಕ ನೀರು ಮಜ್ಜಿಗೆ ಕೋಸಂಬರಿ ಪೂರೈಸಿದರು. ದಾಸೋಹ ಭವನದಲ್ಲಿ ರಾತ್ರಿಪೂರ ಪ್ರಸಾದ ವಿತರಣೆ ನಡೆಯಿತು. ಸ್ಥಳೀಯರು ಮತ್ತು ಪೊಲೀಸರು ವಸಂತ ರಥ ಸಾಂಗವಾಗಿ ನೆರವೇರಲು ಕೈಜೋಡಿಸಿದರು. 1 ಗಂಟೆ ಸುಮಾರಿಗೆ ತೇರು ಹಿಮ್ಮುಖವಾಗಿ ಸಾಗಿ ಸ್ವಸ್ಥಾನ ಸೇರಿತು. ಈ ವೇಳೆ ಪ್ರಸಾದ ಸ್ವೀಕರಿಸಿ ತೀರ್ಥ ಚಿಮುಕಿಸಿಕೊಂಡರು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು.

ಪಾದುಕೆ ಸ್ಪರ್ಶ

ಜಾತ್ರೆಯ ನಂತರ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜಾ ಕೈಂಕರ್ಯ ನೆರವೇರಿಸಿದರು. ಅಮ್ಮನವರ ಆಲಯದಲ್ಲಿ ಕುಂಕುಮಾರ್ಚನೆ ಮಾಡಿಸಿದರು. ಸ್ವಾಮಿಯ ಪಾದುಕೆಗಳನ್ನು ಸ್ಪರ್ಶಿಸಿಕೊಂಡು ಧನ್ಯತೆ ಮೆರೆದರು. ಮಕ್ಕಳ ಆಟಿಕೆ ಕಜ್ಜಾಯ ಖಾರಪುರಿ ಕೊಳ್ಳಲು ಜನರು ಮುಗಿಬಿದ್ದರು. ಜಿಲ್ಲಾಡಳಿತ ಗುಂಬಳ್ಳಿ ತಪಾಸಣಾ ಕೇಂದ್ರದಿಂದ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿತ್ತು. ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಿದವು. ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರಿಂದ ಕೆಲವೆಡೆ ವಾಹನ ದಟ್ಟಣೆ ಕಂಡುಬಂದಿತು. ಈ ಸಲ ಭಕ್ತರ ಸಂಖ್ಯೆ ನಿರೀಕ್ಷೆಗೂ ಮೀರಿ ಬಂದಿತ್ತು. ಗ್ರಾಮೀಣ ಭಾಗದಲ್ಲಿ ಜನರು ಭಕ್ತರಿಗೆ ನೀರು ಮಜ್ಜಿಗೆ ವಿತರಿಸಿದರು. ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿಗಳು ಅಲ್ಲಲ್ಲಿ ನಿಂತು ದಟ್ಟಣೆ ನಿಯಂತ್ರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.