ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಗೌರವಿಸಿದ್ದಕ್ಕೆ ಬಿಜೆಪಿ ಸೇರಿದ್ದೇನೆ: ಎನ್.ಮಹೇಶ್

Last Updated 3 ಅಕ್ಟೋಬರ್ 2021, 3:28 IST
ಅಕ್ಷರ ಗಾತ್ರ

ಚಾಮರಾಜನಗರ: 'ಕಾಂಗ್ರೆಸ್‌ನವರು ಸಂವಿಧಾನ ಶಿಲ್ಪಿ ಬಾಬಾ‌ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗಲೂ, ಮೃತಪಟ್ಟ ನಂತರವೂ ಗೌರವ ತೋರಲಿಲ್ಲ. ಬಿಜೆಪಿಯು ಅಂಬೇಡ್ಕರ್ ಅವರನ್ನು ಗೌರವಿಸಿದೆ. ಹಾಗಾಗಿ ಬಿಜೆಪಿ ಸೇರಿದ್ದೇನೆ' ಎಂದು‌ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಶನಿವಾರ ಹೇಳಿದರು.

ಮಲ್ಲಯ್ಯನಪುರದ ಮುಖಂಡ ಎಂ.ಸಿ.ಮಲ್ಲೇದೇವರು ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆ ಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್‌ನಲ್ಲಿ ಹೆಚ್ಚು‌ ದಲಿತರಿದ್ದಾರೆ. ಹಾಗಾಗಿ, ನೀವು ಕಾಂಗ್ರೆಸ್ ಸೇರಿದ್ದರೆ ಚೆನ್ನಾಗಿತ್ತು ಎಂದು ಎಲ್ಲರೂ ನನಗೆ ಹೇಳಿದ್ದರು. ಹಾಗಿದ್ದರೂ ನಾನು ಬಿಜೆಪಿ ಸೇರಿದೆ. ಅದಕ್ಕೆ ಏನು ಕಾರಣ ಎಂದು ಇವತ್ತು ಹೇಳುತ್ತೇನೆ' ಎಂದರು.

'ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು‌ ಕಾಂಗ್ರೆಸ್‌ನವರು ಹೇಗೆ ನಡೆಸಿಕೊಂಡರು ಎಂಬುದು‌ ಎಲ್ಲರಿಗೂ ಗೊತ್ತು. ಬದುಕಿದ್ದಾಗಲೂ ಅವರಿಗೆ ಸರಿಯಾದ ಅವಕಾಶ ಕೊಡಲಿಲ್ಲ. ನಿಧನರಾದ ಮೇಲೂ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಲಿಲ್ಲ.‌ ಸಮುದ್ರದ ದಂಡೆಯ ಮೇಲೆ ಅಂತ್ಯ ಸಂಸ್ಕಾರ‌ ನೆರವೇರಿಸಲಾಯಿತು. ಬಾಬಾ ಸಾಹೇಬರಿಗೆ ಗೌರವ ನೀಡದ ಪಕ್ಷಕ್ಕೆ ನಾನು ಹೇಗೆ ಸೇರಲಿ' ಎಂದು ಕೇಳಿದರು.

'ಬಿಜೆಪಿ‌ ಸೇರುವುದಕ್ಕೂ‌ ಮೊದಲು ದೆಹಲಿಯಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅವರು ಮಾತುಕತೆಗೂ ಮುನ್ನ ಒಂದು ಸ್ಮಾರಕ ನೋಡಿಕೊಂಡು ಬರುವುದಕ್ಕೆ ಹೇಳಿದರು. ಅದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾನೂನು ಸಚಿವರಾಗಿದ್ದಾಗ ಉಳಿದುಕೊಂಡ ಮನೆಯಾಗಿತ್ತು. ಅಲ್ಲೇ ಅವರು ಕೊನೆಯುಸಿರೆಳೆದಿದ್ದರು.‌ ಮೋದಿ ಸರ್ಕಾರ ಆ‌‌ ಮನೆಯನ್ನು ಸ್ಮಾರಕವನ್ನಾಗಿ ಮಾಡಿದೆ. ಮಹಾ ಪರಿನಿರ್ವಾಣ ಸ್ಥಳ ಎಂದು ಹೆಸರಿಟ್ಟಿದೆ. ಬಿಜೆಪಿ ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದೆ. ಅದಕ್ಕೆ ಈ ಪಕ್ಷಕ್ಕೆ ಬಂದಿದ್ದೇನೆ. ನಾನು ಎಲ್ಲೇ ಇದ್ದರೂ ಅಂಬೇಡ್ಕರ್ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇನೆ' ಎಂದರು.

'ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಸೇರ್ಪಡೆ ‌ಕಾರ್ಯಕ್ರಮ ಮಾಡುತ್ತೇನೆ. ಇದಲ್ಲದೇ ಬೇರೆ ಜಿಲ್ಲೆಗಳಲ್ಲೂ ಮಾಡುತ್ತೇನೆ' ಎಂದರು.

ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಮಾತನಾಡಿ, 'ಲೋಕಸಭಾ ಚುನಾವಣೆಯ‌ ನಂತರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಚೆನ್ನಾಗಿ‌ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿಗರು ಉತ್ತಮ ಸಾಧನೆ ಮಾಡಿದ್ದಾರೆ. ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೂ ನಾವು ಸಜ್ಜು ಗೊಂಡಿದ್ದೇವೆ' ಎಂದರು.

ಕಾರ್ಯಕ್ರಮದಲ್ಲಿ ಎಂ.ಸಿ.ಮಲ್ಲೆದೇವರು ಹಾಗೂ ಅವರ 50ಕ್ಕೂ ಹೆಚ್ಚು ಬೆಂಬಲಿಗರು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಂಜುಂಡಸ್ವಾಮಿ, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಮುಖಂಡ ನಿಜಗುಣರಾಜು, ರಾಜ್ಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಗಲ ಶಿವಕುಮಾರ್, ನಾಗಶ್ರೀ, ಹನುಮಂತಶೆಟ್ಟಿ, ಕೋಡಿಮೋಳೆರಾಜಶೇಖರ್, ಬಸವೇಗೌಡ, ಡಾ.ಎ.ಆರ್.ಬಾಬು, ಗ್ರಾಮಾಂತರ ಮಂಡಲ ಆಧ್ಯಕ್ಷ ಬಸವಣ್ಣ, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT