ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: 11ರಂದು ಬಿಜೆಪಿ ಜನ ಸೇವಕ ಸಮಾವೇಶ

Last Updated 9 ಜನವರಿ 2021, 13:52 IST
ಅಕ್ಷರ ಗಾತ್ರ

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಅಭಿನಂದಿಸುವುದಕ್ಕಾಗಿ ಬಿಜೆಪಿಯು ಸೋಮವಾರ (ಜ.11) ನಗರದದಲ್ಲಿ ಜನ ಸೇವಕ ಸಮಾವೇಶವನ್ನು ಆಯೋಜಿಸಿದೆ.

‘ನಗರದ ಅಂಬೇಡ್ಕರ್‌ ಭವನದ ಪಕ್ಕದಲ್ಲಿರುವ ಮೈದಾನದಲ್ಲಿ 11ರಂದು ಮಧ್ಯಾಹ್ನ 2.30ಕ್ಕೆ ಸಮಾವೇಶ ಆಯೋಜಿಸಲಾಗಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವರಾದ ಆರ್‌.ಅಶೋಕ, ಎಸ್‌.ಟಿ.ಸೋಮಶೇಖರ್‌, ಎಸ್‌.ಸುರೇಶ್‌ಕುಮಾರ್‌, ಸಂಸದ ವಿ.ಶ್ರೀನಿವಾಸ ಪ್ರಸಾದ್‌, ಸಂಸದ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷ ಪ್ರತಾಪ್‌ ಸಿಂಹ, ಉಪಾಧ್ಯಕ್ಷ ರಾಜೇಂದ್ರ, ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರು ಹೇಳಿದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ಇದು ಮುಂಬರುವ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿದ ಪಕ್ಷದ ಸದಸ್ಯರನ್ನೂ ಸಮಾವೇಶದಲ್ಲಿ ಅಭಿನಂದಿಸಲಾಗುವುದು’ ಎಂದರು.

71 ಪಂಚಾಯಿತಿಗಳಲ್ಲಿ ಅಧಿಕಾರ

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷ ಬೆಂಬಲಿತ 1,036 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. 129 ಪಂಚಾಯಿತಿಗಳ ಪೈಕಿ 71ರಲ್ಲಿ ಪಕ್ಷದ ಬೆಂಬಲಿಗರು ಬಹುಮತ ಪಡೆದು ಅಧಿಕಾರ ಹಿಡಿಯಲಿದ್ದಾರೆ’ ಎಂದು ಆರ್‌.ಸುಂದರ್‌ ಅವರು ಹೇಳಿದರು.

ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಜಿ.ಎನ್‌.ನಂಜುಂಡಸ್ವಾಮಿ ಅವರು ಮಾತನಾಡಿ, ‘ಜನಸೇವಕ ಸಮಾವೇಶಕ್ಕಾಗಿ ರಾಜ್ಯ ಹಾಗೂ ಕೇಂದ್ರದ ನಾಯಕರಿರುವ ಐದು ತಂಡಗಳು ರಾಜ್ಯದಾದ್ಯಂತ ಪ್ರವಾಸ ಮಾಡಲಿವೆ. ಪ್ರತಿ ತಂಡವು ಆರು ಜಿಲ್ಲಾ ಸಮಾವೇಶಗಳಲ್ಲಿ ಭಾಗವಹಿಸಲಿವೆ. ಜ.11ರಂದು ಬೆಳಿಗ್ಗೆ ಮೈಸೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾವೇಶವನ್ನು ಉದ್ಘಾಟನೆ ಮಾಡಲಿದ್ದು ಎರಡನೇ ಸಮಾವೇಶ ಚಾಮರಾಜನಗರದಲ್ಲಿ ನಡೆಯಲಿದೆ’ ಎಂದರು.

ಬಿಜೆಪಿ ಹಿರಿಯ ಮುಖಂಡ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ ಇದ್ದರು.

‘ಎನ್‌.ಮಹೇಶ್‌ ಪಕ್ಷಕ್ಕೆ ಬಂದರೆ ಸ್ವಾಗತ’

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಹಬ್ಬಿರುವ ವದಂತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಂಜುಂಡಸ್ವಾಮಿ ಅವರು, ‘ಬಿಎಸ್‌ಪಿಯಿಂದ ಉಚ್ಚಾಟಿತರಾದ ಮೇಲೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ದೂರದಿಂದ ಬೆಂಬಲ ಕೊಟ್ಟಿದ್ದೇನೆ ಎಂದು ಮಹೇಶ್‌ ಹೇಳಿದ್ದಾರೆ. ಸರ್ಕಾರದ ಬಗ್ಗೆ ಅವರಿಗೆ ಸಹಾನುಭೂತಿ ಇದೆ. ಯಾವಾಗಲೂ ಸರ್ಕಾರದ ಪರ ಇರುವುದಾಗಿ ಹೇಳಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಅವರದ್ದೇ ಆದ ತಂಡ ಇದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರ 60ರಿಂದ 70 ಬೆಂಬಲಿಗರು ಗೆದ್ದಿದ್ದಾರೆ. ಪಕ್ಷಕ್ಕೆ ಸಹಕಾರ ನೀಡುವುದಾಗಿ ಅವರು ನಮ್ಮ ಜೊತೆಯಲ್ಲಿ ಹೇಳಿದ್ದಾರೆ’ ಎಂದು ಹೇಳಿದರು.

ಇದು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಆರಂಭಿಕ ಹೆಜ್ಜೆಯೇ ಎಂದು ಕೇಳಿದ್ದಕ್ಕೆ, ‘ನಮ್ಮ ದೇಶದಲ್ಲಿ ಯಾರು, ಯಾವ ‌ಪಕ್ಷಕ್ಕೂ ಸೇರಬಹುದು. ಎನ್‌.ಮಹೇಶ್‌ ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT