ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ಟೋಪಿ ಹಾಕಿದ ಸಿದ್ದರಾಮಯ್ಯ: ಮೂಡ್ನಾಕೂಡು ಪ್ರಕಾಶ್

Published 31 ಡಿಸೆಂಬರ್ 2023, 5:30 IST
Last Updated 31 ಡಿಸೆಂಬರ್ 2023, 5:30 IST
ಅಕ್ಷರ ಗಾತ್ರ

ಚಾಮರಾಜನಗರ: ದಲಿತರ ಮತಗಳಿಂದ ಗೆದ್ದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಪದೇ ಪದೇ ದಲಿತ ವಿರೋಧಿ ಧೋರಣೆ ತಾಳಿ, ಸಮುದಾಯದ ಜನರಿಗೆ ಟೋಪಿ ಹಾಕುತ್ತಿದ್ದಾರೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಶನಿವಾರ ಆರೋಪಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಮೂರ್ನಾಲ್ಕು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ದಲಿತ ಮಕ್ಕಳನ್ನು ಶೌಚ ಗುಂಡಿಗೆ ಇಳಿಸಿ ಸ್ವಚ್ಛ ಮಾಡಲಾಗಿದೆ. ಶೌಚಾಲಯವನ್ನು ಸ್ವಚ್ಛಗೊಳಿಸಲಾಗಿದೆ. ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ ಮಕ್ಕಳೇ ಹೆಚ್ಚಿರುತ್ತಾರೆ. ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿದ್ದ ₹11,400 ಕೋಟಿಯನ್ನು ಬಳಸಿದ್ದರಿಂದ ಶಾಲೆಗಳಿಗೆ ಸರಿಯಾಗಿ ಅನುದಾನ ಹೋಗುತ್ತಿಲ್ಲ. ಈ ಕಾರಣಕ್ಕೆ ಸ್ವಚ್ಛತಾ ಕೆಲಸಕ್ಕೆ ಮಕ್ಕಳನ್ನು ಬಳಸಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಯವರೇ ನೇರ ಕಾರಣ’ ಎಂದು ದೂರಿದರು. 

‘ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಋಣಿಯಾಗಿರಬೇಕು. ಸರ್ಕಾರ ರಚಿಸುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಹೋಗಿ ತಮಗೆ ಸಿ.ಎಂ. ಹುದ್ದೆ ಕೊಡಿ ಎಂದು ಪಟ್ಟು ಹಿಡಿದ್ದರು. ಆದರೆ, ಇದನ್ನು ಒಪ್ಪದ ಖರ್ಗೆಯವರು ಸಿದ್ದರಾಮಯ್ಯ ಆಗಲಿ ಎಂದು ಅವರನ್ನು ಬೆಂಬಲಿಸಿದ್ದರು’ ಎಂದರು. 

‘ಇತ್ತೀಚೆಗೆ ದೆಹಲಿಯಲ್ಲಿ ನಡೆದ ಇಂಡಿಯಾ ಸಭೆಯಲ್ಲಿ ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್‌ ಅವರು ಖರ್ಗೆಯವರು ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಘೋಷಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಸಂಸ್ಥಾಪ‍ನಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿರುವುದು ಇವರ ದಲಿತ ವಿರೋಧಿ ನೀತಿಯನ್ನು ತೋರಿಸುತ್ತದೆ’ ಎಂದು ಪ್ರಕಾಶ್‌ ಕಿಡಿಕಾರಿದರು. 

‘ರಾಜ್ಯ ಸಿವಿಲ್‌ ಸೇವೆಗಳಲ್ಲಿ ಬ್ಯಾಕ್‌ಲಾಗ್‌ ಹುದ್ದೆ ಹುದ್ದೆಗಳಿಗೆ ಮುಂಬಡ್ತಿ ನೀಡುವ ಪ್ರಕ್ರಿಯೆನ್ನು ಸರ್ಕಾರ ಆರಂಭಿಸಿದ್ದು  ಅದರಲ್ಲಿ ಮೀಸಲಾತಿಯ ನಿಯಮವನ್ನು ಪಾಲಿಸಿಲ್ಲ. 33 ಹುದ್ದೆಗಳಿಗೆ ಒಂದು ವೃತ್ತವನ್ನಾಗಿ ಮಾಡಿ, ಎಸ್‌ಸಿ ಎಸ್‌ಟಿಗೆ 9 ಹುದ್ದೆಗಳು ಮೀಸಲಾಗಿತ್ತು. ಕಳೆದ ವರ್ಷ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಿದ ನಂತರ ಇನ್ನೆರಡು ಹುದ್ದೆಗಳು ಜಾಸ್ತಿಯಾಗಿವೆ. ಅಂದರೆ 33 ಹುದ್ದೆಗಳ ಪೈಕಿ 11 ಹುದ್ದೆಗಳು ಎಸ್‌ಸಿ, ಎಸ್‌ಟಿಗೆ ಮೀಸಲಾಗಿರಬೇಕು. ಕಾಂಗ್ರೆಸ್‌ ಸರ್ಕಾರ 100 ಹುದ್ದೆಗಳನ್ನು ಒಂದು ಗುಂಪನ್ನಾಗಿ ಮಾಡಿದೆ. ‌ಎಸ್‌ಸಿ, ಎಸ್‌ಟಿಗಳಿಗೆ 18 ಹುದ್ದೆಗಳನ್ನು ಮಾತ್ರ ತೋರಿಸಲಾಗಿದೆ’ ಎಂದು ದೂರಿದರು. 

‘ದಲಿತರು ಎಚ್ಚೆತ್ತುಕೊಂಡು ‘ಸಿದ್ದರಾಮಯ್ಯ ಇಳಿಸಿ, ದಲಿತರನ್ನು ಬೆಳೆಸಿ’ ಅಭಿಯಾನ ಪ್ರಾರಂಭಿಸದಿದ್ದರೆ ದಲಿತರಿಗೆ, ಸಮುದಾಯದ ನಾಯಕರಿಗೆ ಉಳಿಗಾಲ ಇಲ್ಲ’ ಎಂದು ಹೇಳಿದರು. 

ಮುಖಂಡರಾದ ಸಿಂಗನಲ್ಲೂರು ನಾಗಲಕ್ಷ್ಮಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಸಮರ್ಪಕ ಅನುಷ್ಠಾನವಾಗಿಲ್ಲ. ಅಧಿಕಾರಿಗಳು ಮಹಿಳೆಯರನ್ನು ಅನಗತ್ಯವಾಗಿ ಅಲೆದಾಡುಸುತ್ತಿದ್ದಾರೆ. ಅವರಿಗೆ ಅಗೌರವ ತೋರುತ್ತಿದ್ದಾರೆ’ ಎಂದು ದೂರಿದರು. 

ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಪದ್ಮಾ ಮಾತನಾಡಿ, ‘ರಾಜ್ಯ ಸರ್ಕಾರದ ಯುವನಿಧಿ ಯೋಜನೆಯಿಂದ ನಿಜವಾದ ನಿರುದ್ಯೋಗಿಗಳಿಗೆ ಪ್ರಯೋಜನ ಇಲ್ಲ. ಈ ವರ್ಷ ಪದವಿ, ಡಿಪ್ಲೊಮಾ ಮಾಡಿದರು, ಉನ್ನತ ಶಿಕ್ಷಣ ಪಡೆಯಲು ಹೋಗುತ್ತಾರೆ. ಅಂತಹವರಿಗೆ ₹2000, ₹3000 ನೀಡಿ ಅವರ ಬದುಕನ್ನೇ ಹಾಳು ಮಾಡಲು ಸರ್ಕಾರ ಹೊರಟಿದೆ’ ಎಂದು ದೂರಿದರು. 

ಎಸ್‌ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್, ಹನೂರುಮಂಡಲ ಅಧ್ಯಕ್ಷ ಕೊತ್ತನೂರು ರಾಜಶೇಖರ್,  , ಮುಖಂಡ ಬಾನುಪ್ರಕಾಶ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT