ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಭ್ರಷ್ಟಾಚಾರದ ಪಿತಾಮಹ, ಕೆಂಪಣ್ಣ ಜೊತೆ ಸಿದ್ದರಾಮಯ್ಯ ಜೈಲಿಗೆ: ಕಟೀಲ್‌

Last Updated 29 ಡಿಸೆಂಬರ್ 2022, 10:32 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್‌ ಸುಳ್ಳು ಆರೋಪ ಮಾಡಿರುವಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಕೆಂಪಣ್ಣ ಅವರೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಗುರುವಾರ ಹೇಳಿದರು.

ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರದ ಪಿತಾಮಹ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದರು. ಈಗ ಬಸವರಾಜ ಬೊಮ್ಮಾಯಿಯವರು ಅದಕ್ಕೆ ಶಕ್ತಿ ತುಂಬುತ್ತಿದ್ದಾರೆ’ ಎಂದರು.

‘ರಾಜ್ಯ ಸರ್ಕಾರದ ಮೇಲೆ ಶೇ 40ರಷ್ಟು ಕಮಿಷನ್‌ ಪಡೆಯುವ ಆರೋಪವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಆರೋಪಗಳ ಬಗ್ಗೆ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಲಿ. ಇದುವರೆಗೆ ಯಾರೊಬ್ಬರೂ ಒಂದೇ ಒಂದು ದಾಖಲೆಯನ್ನೂ ಪ್ರದರ್ಶಿಸಿಲ್ಲ. ಸರ್ಕಾರ, ಸಚಿವರ ವಿರುದ್ಧ ಆರೋಪ ಮಾಡಿದ್ದ ಕೆಂಪಣ್ಣ ವಿರುದ್ಧವೇ ಪ್ರಕರಣ ದಾಖಲಾಗಿ ಅವರು ಜೈಲಿಗೂ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಕೆಂಪಣ್ಣ ಅವರೊಂದಿಗೆ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗಲಿದ್ದಾರೆ’ ಎಂದರು.

ಭಯೋತ್ಪಾದನೆಗೆ ಕಾಂಗ್ರೆಸ್‌ ಕಾರಣ: ‘ಭಯೋತ್ಪಾದನೆಯ ಇನ್ನೊಂದು ಮುಖವೇ ಕಾಂಗ್ರೆಸ್‌. ಈ ದೇಶವನ್ನು ತುಂಡು ಮಾಡಿದ್ದು ಕಾಂಗ್ರೆಸ್‌. ನೆಹರು ಅವರು ಪ್ರಧಾನಿಯಾಗಬೇಕು ಎಂಬ ಕಾರಣಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶ ವಿಭಜಿಸಿ ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರ ರಚನೆ ಮಾಡಲು ಕಾರಣರಾದರು. ಅಲ್ಲಿಂದಲೇ ಆತಂಕವಾದ ಸೃಷ್ಟಿಯಾಯಿತು. ಇಂದಿರಾ ಗಾಂಧಿ ಕಾಲದಲ್ಲಿ ಭಯೋತ್ಪಾದನೆ ಹೆಚ್ಚಾಯಿತು. ಖಲಿಸ್ತಾನವಾದ, ಕಾಶ್ಮೀರದಲ್ಲಿ ಉಗ್ರವಾದ ಆರಂಭವಾಯಿತು. ಭಯೋತ್ಸಾದನೆ ಪರವಾಗಿ ಕಾಂಗ್ರೆಸ್‌ ನಿಂತಿದೆ. ಸೈನಿಕರು ಹುತಾತ್ಮರಾದರೆ ಕಾಂಗ್ರೆಸ್‌ಗೆ ಕಣ್ಣೀರು ಬರುವುದಿಲ್ಲ. ಭಯೋತ್ಪಾದಕರ ಪರವಾಗಿ ಮಾತನಾಡುತ್ತದೆ’ ಎಂದು ನಳಿನ್‌ ಕುಮಾರ್‌ ವಾಗ್ದಾಳಿ ನಡೆಸಿದರು.

‘ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್‌ ಮಾಡಿದ ವ್ಯಕ್ತಿಯ ಪರವಾಗಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರು ಮಾತನಾಡುತ್ತಾರೆ. ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಪಸ್‌ ಪಡೆಯುತ್ತದೆ. ಅದೇ ಸಂಘಟನೆಯ ಕಾರ್ಯಕರ್ತರು ಮೈಸೂರಿನಲ್ಲಿ ಕಾಂಗ್ರೆಸ್‌ ಶಾಸಕರಿಗೆ ಚೂರಿಯಿಂದ ಇರಿಯುತ್ತಾರೆ. ಇಂತಹ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈ ದೇಶದ ಸ್ಥಿತಿ ಏನಾಗಬಹುದು’ ಎಂದು ಅವರು ಪ್ರಶ್ನಿಸಿದರು.

ಖಾನ್‌ ಜಾಗದಲ್ಲಿ ಗಾಂಧಿ: ‘ಭಯೋತ್ಪಾದನೆ, ಭ್ರಷ್ಟಾಚಾರದಂತೆ ಪರಿವಾರವಾದ ಕೂಡ ಕಾಂಗ್ರೆಸ್‌ ಕೊಡುಗೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಕಾಂಗ್ರೆಸ್‌, ಸ್ವಾತಂತ್ರ್ಯ ನಂತರ ಅಧಿಕಾರಕ್ಕಾಗಿ ಗಾಂಧಿ ಹೆಸರನ್ನು ಅವಲಂಬಿಸಿತು. ಇಂದಿರಾ ಗಾಂಧಿಗೂ ಮಹಾತ್ಮ ಗಾಂಧಿ ಅವರಿಗೆ ಏನು ಸಂಬಂಧ? ಇಂದಿರಾ ಗಾಂಧಿ ಯಾರು‘ ಎಂದು ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನಿಸಿದರು.

ಸಭೆಯಲ್ಲಿದ್ದವರು, ‘ಫಿರೋಝ್‌ ಖಾನ್‌ ಪತ್ನಿ’ ಎಂದಾಗ, ‘ಹಾಗಿದ್ದಾಗ, ಇಂದಿರಾ ಹೆಸರು ಏನಾಗಬೇಕಿತ್ತು? ಗಾಂಧಿ ಜಾಗದಲ್ಲಿ ಖಾನ್‌ ಇರಬೇಕಿತ್ತು. ರಾಜೀವ್‌ ಗಾಂಧಿ ಹೆಸರಿನಲ್ಲಿ ಗಾಂಧಿ ಜಾಗದಲ್ಲಿ ಖಾನ್‌ ಇರಬೇಕಿತ್ತು. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹೆಸರಿನಲ್ಲೂ ಗಾಂಧಿ ಬದಲಿಗೆ ಖಾನ್‌ ಇರಬೇಕಿತ್ತು. ಖಾನ್‌ ಆಗಬೇಕಿದ್ದ ಕಡೆ ಗಾಂಧಿ ಹೇಗೆ ಬರುತ್ತದೆ? ಕಾಂಗ್ರೆಸ್‌ ಪರಿವಾರವಾದದ ಹೆಸರಿನಲ್ಲಿ ಆಡಳಿತ ಮಾಡಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT