ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮೋದಿ ಸರ್ಕಾರದ ಸಾಧನೆ ಮನೆ ಮನೆಗೆ

ಕರಪತ್ರ ಹಂಚುವುದಕ್ಕೆ ಚಾಲನೆ ನೀಡಿದ ಬಿಜೆಪಿ, ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ
Last Updated 6 ಜೂನ್ 2020, 20:13 IST
ಅಕ್ಷರ ಗಾತ್ರ

ಚಾಮರಾಜನಗರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಗಳನ್ನು ಜಿಲ್ಲೆಯ ಜನರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಘಟಕವು ಶನಿವಾರ ಚಾಲನೆ ನೀಡಿದೆ.

ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಬರೆದ ಪತ್ರ ಹಾಗೂ ಸರ್ಕಾರ ಈ ಅವಧಿಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಮಾಹಿತಿಗಳನ್ನು ಒಳಗೊಂಡ ಕರ ಪತ್ರವನ್ನು ಜಿಲ್ಲೆಯ ಪ್ರತಿ ಮನೆಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಲುಪಿಸಲಿದ್ದಾರೆ.

ಈ ಕಾರ್ಯಕ್ಕೆ ಶನಿವಾರ ಚಾಮರಾಜನಗರ ಸಮೀಪದ ಕರಿನಂಜನಪುರದಲ್ಲಿ ಚಾಲನೆ ಸಿಕ್ಕಿದೆ. ಇದೇ 14ರವರೆಗೂ ಕರ ಪತ್ರಗಳ ಹಂಚಿಕೆ ನಡೆಯಲಿದೆ.

ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮೋದಿ ಸರ್ಕಾರದ ಸಾಧನೆ ಹಾಗೂ ಕರಪತ್ರ ಹಂಚುವ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ನೀಡಿದರು.

‘ನರೇಂದ್ರ ಮೋದಿ ಅವರ ಮೊದಲ ಐದು ವರ್ಷಗಳ ಆಡಳಿತ, ಸಾಧನೆ ಹಾಗೂ ಜನಪರ ಯೋಜನೆಗಳನ್ನು ಕಂಡು ಜನರು ಎರಡನೇ ಅವಧಿಗೆ ಪ್ರಚಂಡ ಬಹುಮತಗಳಿಂದ ಆಯ್ಕೆ ಮಾಡಿದ್ದಾರೆ. ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಜನಪರ ಕಾರ್ಯಕ್ರಮಗಳನ್ನು ಅವರು ರೂಪಿಸಿದ್ದಾರೆ’ ಎಂದು ಸಿ.ಎಸ್‌.ನಿರಂಜನಕುಮಾರ್‌ ಅವರು ಹೇಳಿದರು.

‘ಜನಧನ ಖಾತೆ ಯೋಜನೆ ಆರಂಭಿಸುವಾಗ ಎಲ್ಲರೂ ಟೀಕಿಸಿದ್ದರು. ಈಗ ಅದರ ಪ್ರಯೋಜನ ಎಲ್ಲರಿಗೂ ತಿಳಿಯುತ್ತಿದೆ. ಈ ಖಾತೆಯಿಂದಾಗಿ ಸರ್ಕಾರ ನೀಡುವ ನೆರವು ನೇರವಾಗಿ ಫಲಾನುಭವಿ ಖಾತೆಗಳಿಗೆ ಜಮೆ ಆಗುತ್ತಿದೆ’ ಎಂದರು.

‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370 ಕಲಂ ರದ್ದು ಮಾಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸ್ಥಾಪನೆ, ತ್ರಿವಳಿ ತಲಾಖ್‌ ವಿರುದ್ಧ ಕಾನೂನು ಜಾರಿ, ಕರ್ತಾರ್‌ಪುರ ಕಾರಿಡಾರ್‌ ಯೋಜನೆ, ಮೂರು ಸೇನೆಗಳಿಗೆ ಮುಖ್ಯಸ್ಥರ ನೇಮಕ, ಕೋವಿಡ್‌–19 ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಿದ್ದು, ಸಂಕಷ್ಟದಲ್ಲಿರುವವರಿಗೆ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಸೇರಿದಂತೆ, ಮೋದಿ ನೇತೃತ್ವದ ಸರ್ಕಾರ ಒಂದು ವರ್ಷದಲ್ಲಿ ಹಲವು ಸಾಧನೆಗಳನ್ನು ಮಾಡಿದೆ’ ಎಂದು ಅವರು ಹೇಳಿದರು.

‘ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪಕ್ಷ ಮಾಡಲಿದೆ. ಶನಿವಾರದಿಂದ ಆರಂಭಗೊಂಡು ಮುಂದಿನ ಭಾನುವಾರದವರೆಗೂ ಮನೆ ಮನೆಗೂ ತೆರಳಿ ಜನರಿಗೆ ಮಾಹಿತಿ ನೀಡಲಿದೆ’ ಎಂದು ನಿರಂಜನಕುಮಾರ್‌ ಅವರು ಹೇಳಿದರು.

ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್‌, ಮುಖಂಡರಾದ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಸಿ.ಗುರುಸ್ವಾಮಿ ಇದ್ದರು.

ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ

ಆರ್.ಸುಂದರ್‌ ಅವರು ಮಾತನಾಡಿ, ‘ಮೋದಿ ಸರ್ಕಾರದ ಯೋಜನೆಗಳನ್ನು ಹಾಗೂ ಸಾಧನೆಗಳನ್ನು ಜನರಿಗೆ ವಿವರಿಸಿ ಅವರಿಗೆ ತಲುಪಿಸುವ ಪ್ರಯತ್ನವನ್ನು ಪಕ್ಷ ಮಾಡಲಿದೆ’ ಎಂದರು.

ಜಿಲ್ಲೆಯಾದ್ಯಂತ ಪ್ರತಿ ಮನೆಗೆ ಪಕ್ಷದ ಇಬ್ಬರು ಅಥವಾ ಮೂವರು ಕಾರ್ಯಕರ್ತರು ಭೇಟಿ ನೀಡಿ, ಕರಪತ್ರವನ್ನು ನೀಡಿ ಒಂದು ವರ್ಷದಲ್ಲಿ ಕೈಗೊಂಡ ನಿರ್ಧಾರಗಳನ್ನು ಹಾಗೂ ಅದರಿಂದ ಜನರಿಗೆ ಆದ ಅನುಕೂಲಗಳನ್ನು ವಿವರಿಸಿಲಿದ್ದಾರೆ’ ಎಂದರು.

ಇದೇ 16ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಎಲ್ಲ ಜಿಲ್ಲಾ ಘಟಕದ‍ಪದಾಧಿಕಾರಿಗಳೊಂದಿಗೆ ಮಾತನಾಡಲಿದ್ದಾರೆ. ಆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಕ್ಷ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT