ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಕೊಲೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ, ಕಠಿಣ ಶಿಕ್ಷೆಗೆ ಆಗ್ರಹ

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಗೆ ಖಂಡನೆ, ಬಿಜೆಪಿ, ವಿಎಚ್‌ಪಿ–ಬಜರಂಗದಳ ಪ್ರತ್ಯೇಕ ಪ್ರತಿಭಟನೆ
Published 23 ಏಪ್ರಿಲ್ 2024, 4:47 IST
Last Updated 23 ಏಪ್ರಿಲ್ 2024, 4:47 IST
ಅಕ್ಷರ ಗಾತ್ರ

ಚಾಮರಾಜನಗರ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹೀರೇಮಠ ಹತ್ಯೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮತ್ತು ವಿಶ್ವ ಹಿಂದೂ ಪರಿಷತ್‌ –ಬಜರಂಗ ದಳದಿಂದ ಪ್ರತ್ಯೇಕವಾಗಿ ನಗರದಲ್ಲಿ ಪ್ರತಿಭಟನೆಗಳು ನಡೆದವು. 

ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ನೀಡಲು ಆಗ್ರಹಿಸಿದರು. 

ಬಿಜೆಪಿ ಪ್ರತಿಭಟನೆ: ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಸೇರಿ, ಅಲ್ಲಿಂದ ಭುವನೇಶ್ವರಿ ವೃತ್ತದ ವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆ ಉದ್ದಕ್ಕೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಗೂ ಆರೋಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ್‌, ‘ ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್ಸಿನಲ್ಲಿ ನಡೆದ ಬರ್ಬರ ಹತ್ಯೆಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ಹತ್ಯೆಯು ಲವ್‌ ಜಿಹಾದೋ ಅಥವಾ ಬೇರೆ ಏನೋ ತನಿಖೆ ಆಗಲಿ. ಆದರೆ, ಚಾಕುವಿನಲ್ಲಿ 20 ಬಾರಿ ಚುಚ್ಚಿ ಸಾಯಿಸಿರುವುದು ಲೋಕಕ್ಕೆ ಗೊತ್ತಾಗಿದೆ. ಕರ್ನಾಟಕದಲ್ಲಿ ದೇಶದಲ್ಲಿ ಏನಾಗುತ್ತಿದೆ ಎಂದು ಎಲ್ಲರೂ ನೋಡುತ್ತಾ ಇದ್ದಾರೆ’ ಎಂದರು. 

‘ಘಟನೆಯ ಬಗ್ಗೆ ಮಾಧ್ಯಮದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪ್ರಶ್ನೆ ಕೇಳಿದರೆ ಇವರು ತೀರ್ಪನ್ನೇ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಮುಖ್ಯಮಂತ್ರಿಯವರಿಗೆ ಪ್ರತಿ ದಿನ ಬೆಳಿಗ್ಗೆ ಪೊಲೀಸ್‌ ಗುಪ್ತಚರ ವಿಭಾಗದ ಐಜಿಯವರು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಘಟನೆ ಬಗ್ಗೆ  ಗುಪ್ತಚರ ಇಲಾಖೆ ಐಜಿ ಏನು ಹೇಳಿದ್ದಾರೆ ಎಂಬುದನ್ನು ಬಹಿರಂಗ ಪಡಿಸಿ. ಅದು ಬಿಟ್ಟು ಇದು ವೈಯಕ್ತಿಕ ಕಾರಣಕ್ಕೆ ಆಗಿರುವುದು ಎಂದು ಹೇಳುತ್ತಿದ್ದೀರಲ್ಲಾ? ಅದು ನಿಮ್ಮ ಅಭಿಪ್ರಾಯ ಅಲ್ಲ. ತೀರ್ಪು. ತೀರ್ಪು ಕೊಡಲು ನೀವು ಯಾರು? ತನಿಖೆ ಹಾದಿ ಎಲ್ಲಿಗೆ ಹೋಗುತ್ತದೆ ಮತ್ತು ಇದರ ಪರಿಣಾಮ ಹೋಗುತ್ತದೆ ಎಂಬುದು ನಿಮಗೆ ಗೊತ್ತಿಲ್ಲ. ಹೆಣ್ಣು ಮಗಳ ಕುಟುಂಬಕ್ಕೆ ನ್ಯಾಯ ಕೊಡಿಸುವುದು ಬಿಟ್ಟು ತೀರ್ಪು ಕೊಡುತ್ತಿದ್ದಾರೆ. ಯಾರನ್ನೋ ಓಲೈಸುವುದಕ್ಕಾಗಿ ಈ ರೀತಿಯ ಹೇಳಿಕೆ ಕೊಡುತ್ತಿದ್ದೀರಿ ಎಂದು ಅನಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.  

‘ಇದರ ಪರಿಣಾಮವಾಗಿ ಅಪರಾಧಿ ಮನಃಸ್ಥಿತಿ ಇರುವವರು ಬೆಳೆಯುತ್ತಾರೆ. ಇದಕ್ಕೆ ಅವಕಾಶ ಕೊಡುತ್ತಿದ್ದೀರಾ? ನಾವು ವಿರೋಧ ಪಕ್ಷದವರು ಸಾವಿರ ಮಾತನಾಡುತ್ತೇವೆ. ಆದರೆ, ಸರ್ಕಾರದವರು ಸರಿಯಾಗಿ ಮಾತನಾಡಬೇಕಲ್ಲ. ‘ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ. ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ’ ಎಂದು ಹೇಳಬೇಕು. ಅದು ಬಿಟ್ಟು, ಲವ್‌ ಅಫೇರ್‌ ಇರಬೇಕು ಎಂದೆಲ್ಲ ಹೇಳುವುದೇ’ ಎಂದು ಕಿಡಿ ಕಾರಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್‌ ಮಾತನಾಡಿದರು. 

ಲೋಕಸಭಾ ಕ್ಷೇತ್ರದ ಉಸ್ತುವಾರಿ ಫಣೀಶ್‌ ಸಂಚಾಲಕ ಪ್ರೊ.ಮಲ್ಲಿಕಾರ್ಜುನಪ್ಪ, ನೂರೊಂದು ಶೆಟ್ಟಿ, ನಟರಾಜು, ಸುದರ್ಶನ್‌ಗೌಡ, ಆನಂದ್‌ ಭಗೀರಥ, ನಗರಸಭಾ ಸದಸ್ಯರು ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. 

ನೇಹಾ ಕೊಲೆ ಖಂಡಿಸಿ ವಿಎಚ್‌ಪಿ ಬಜರಂಗ ದಳದ ಕಾರ್ಯಕರ್ತರು ಚಾಮರಾಜನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ನೇಹಾ ಕೊಲೆ ಖಂಡಿಸಿ ವಿಎಚ್‌ಪಿ ಬಜರಂಗ ದಳದ ಕಾರ್ಯಕರ್ತರು ಚಾಮರಾಜನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು

ಕಠಿಣ ಶಿಕ್ಷೆಗೆ ಆಗ್ರಹ

ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಪದಾಧಿಕಾರಿಗಳು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಸೇರಿದ ಪ್ರತಿಭಟನಕಾರರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರು. ಸ್ಥಳಕ್ಕೆ ಬಂದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು. 

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ದಿನದಿಂದಲೂ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಾರೆಂದು ಕೆಲವು ಮುಸ್ಲಿಂ ಯುವಕರು ಅಂಗಡಿಗೆ ನುಗ್ನಿ ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಬನಶಂಕರಿಯ ಪ್ರಗತಿಪುರದಲ್ಲಿ ಕೆಲವು ಮುಸ್ಲಿಮರು ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆಸಲಾಗಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಮನವಮಿ ಆಚರಣಗೆ ಕಾರಿನಲ್ಲಿ ಹೋಗುತ್ತಿದ್ದ ಹಿಂದೂಗಳನ್ನು ಅಡ್ಡಗಟ್ಟಿ ಜೈ ಶ್ರೀರಾಮ್‌ ಅಲ್ಲ  ಅಲ್ಲಾಹು ಅಕ್ಬರ್‌ ಎಂದು ಹಲ್ಲೆ ಮಾಡಲಾಗಿದೆ. 

ಮಡಿಕೇರಿಯಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಕಾರು ಹರಿಸಿ ಹತ್ಯೆಮಾಡಲಾಗಿದೆ. ಬೆಂಗಳೂರಿನ ಪ್ರೇಜರ್ ಟೌನ್‌ ನಟಿ ಹರ್ಷಿಕಾ ಪೂಣಚ್ಚ ಮತ್ತು ಕುಟುಂಬದವರ ಮೇಲೆ ಜಿಹಾದಿಗಳು ಹಲ್ಲೆ ಮಾಡಿದ್ದಾರೆ. ಮೈಸೂರಿನಲ್ಲಿ ಯೂಟ್ಯೂಬರ್ ಮೇಲೆ ಹಲ್ಲೆ ಮಾಡಿದ್ದಲ್ಲದೇ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿ ಸಿಗರೇಟ್ನಿಂದ ಸುಟ್ಟು ದೌರ್ಜನ್ಯ ಎಸಗಲಾಗಿದೆ’ ಎಂದು ಆರೋಪಿಸಿದರು. 

  ‘ಬೆಳಕಿಗೆ ಬಂದಿರುವುದು ಇಷ್ಟು. ಬಹಳಷ್ಟು ಪ್ರಕರಣಗಳು ಬೆಳಕಿಗೆ ಬಂದಿಲ್ಲ. ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯೇ ಇದಕ್ಕೆಲ್ಲ ಕಾರಣ. ‘ಸರ್ಕಾರವು ಅಲ್ಪಸಂಖ್ಯಾತ ಕೋಮಿನ ಪಕ್ಷವೆಂಬಂತೆ ವರ್ತಿಸುತ್ತಾ ಬಹುಸಂಖ್ಯಾತ ಹಿಂದೂಗಳ ಮೇಲೆ ಇಷ್ಟು ದೌರ್ಜನ್ಯ ನಡೆಯುತ್ತಿದ್ದರೂ ಸುಮ್ಮನಿರುವುದು ಸಂವಿಧಾನಕ್ಕೆ ವಿರುದ್ಧ. ಇಷ್ಟು ಸಾಲದೆಂಬಂತೆ ಅಲ್ಪ ಸಂಖ್ಯಾತರನ್ನು ಮತ್ತಷ್ಟು ಓಲೈಸಲು ಇದೇ ಸರ್ಕಾರ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ರಘು ಸಕಲೇಶಪುರ ಬಜರಂಗದಳ ಕಾರ್ಯಕರ್ತರಾದ ಶಿವು ಭರತ್ ಕುಮೇಲ್ ಮಂಗಳೂರಿನ ಜಯಪ್ರಕಾಶ್ ಚಿಕ್ಕಮಗಳೂರು ಜಿಲ್ಲೆಯ ಮಂಜು ತುಡುಕೂರ್ ಮುಂತಾದ ಕಾರ್ಯಕರ್ತರ ಮೇಲೆ ಮೇಲೆ ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಿ ಹತ್ತಿಕುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.   ವಿಶ್ವ ಹಿಂದೂ ‍ಪರಿಷತ್ತಿನ ರಮೇಶ್‌ ನಾಯಕ್‌ ಎಂ.ಎಸ್‌.ಪೃಥ್ವಿರಾಜ್‌ ಸೇರಿದಂತೆ ಎರಡೂ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT