ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾತ್ರೆಗೆ ಹೆದರೆವು, ರಾಹುಲ್‌ ಪ್ರಶ್ನೆಗೆ ಉತ್ತರಿಸಲಿ: ಪ್ರಣಯ್‌

ಜೋಡೋ ಪಾದಯಾತ್ರೆ ಸಾಗುವ ದಾರಿಯುದ್ಧಕ್ಕೂ ಪೋಸ್ಟರ್‌ ಅಳವಡಿಸಿ ರಾಹುಲ್‌ ಗಾಂಧಿಗೆ ಪ್ರಶ್ನೆ
Last Updated 28 ಸೆಪ್ಟೆಂಬರ್ 2022, 5:48 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕಾಂಗ್ರೆಸ್‌ ಭಾರತವನ್ನು ವಿಭಜಿಸಿದೆಯೇ ವಿನಾ ಜೋಡಣೆ ಮಾಡಿಲ್ಲ. ರಾಹುಲ್‌ ಗಾಂಧಿ ಅವರು ಜಿಲ್ಲೆಯ ಗುಂಡ್ಲುಪೇಟೆಯ ಮೂಲಕ ರಾಜ್ಯದಲ್ಲಿ ನಡೆಸಲಿರುವ ಭಾರತ್‌ ಜೋಡೋ ಯಾತ್ರೆಗೆ ಬಿಜೆಪಿ, ಪಕ್ಷದ ಕಾರ್ಯಕರ್ತರು ಹೆದರುವುದಿಲ್ಲ. ಅದನ್ನು ಸಮರ್ಥವಾಗಿ ಎದುರಿಸುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಚ್‌.ಎಂ.ಪ್ರಣಯ್‌ ಮಂಗಳವಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾತ್ರೆಯ ಸಂದರ್ಭದಲ್ಲಿ ನಾವು ರಾಹುಲ್‌ ಗಾಂಧಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಅವರು ಮಾಡುವ ಪಾದಯಾತ್ರೆ ಉದ್ದಕ್ಕೂ ಪೋಸ್ಟರ್‌, ಫ್ಲೆಕ್ಸ್‌ಗಳನ್ನು ಹಾಕಲಿದ್ದೇವೆ. ರಾಹುಲ್‌ ಗಾಂಧಿ ಈ ‍ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದರು.

‘ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಇಡೀ ದೇಶವನ್ನು ಒಂದು ಗೂಡಿಸುತ್ತಿದ್ದಾರೆ. ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ. ಬೇರೆ ಬೇರೆ ದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಭಾರತದ ಮಧ್ಯಸ್ಥಿಕೆಗೆ ಮನವಿ ಮಾಡುತ್ತಿದ್ದಾರೆ. ಹೀಗಿರುವಾರ ಯಾವ ಉದ್ದೇಶಕ್ಕಾಗಿ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗಿದೆ?ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಹಾಗೂ ಕುಟುಂಬದ ವಿರುದ್ಧ ಭ್ರಷ್ಟಾಚಾರ ನಡೆಸಿರುವ ಆರೋಪ ಇದೆ. ಪ್ರಕರಣವೂ ದಾಖಲಾಗಿದೆ. ಇದರ ಬಗ್ಗೆ ಅವರು ಏನು ಹೇಳುತ್ತಾರೆ? ಯುಪಿಎ ಅವಧಿಯಲ್ಲಿ 2ಜಿ, ಕಾಮನ್‌ವೆಲ್ತ್‌, ಆದರ್ಶ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಾಂಗ್ರೆಸ್‌ ಹಲವು ಮುಖಂಡರು ಹಾಗೂ ಗಾಂಧಿ ಕುಟುಂಬ ಭಾಗಿಯಾಗಿದೆ. ಇದಕ್ಕೆ ಅವರ ಉತ್ತರ ಏನು’ ಎಂದು ಪ್ರಶ್ನಿಸಿದರು.

‘1947ರಲ್ಲಿ ಸ್ವಾತಂತ್ರ್ಯ ಆಧಾರದ ಮೇಲೆ ಮತದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನ ಎಂದು ದೇಶವನ್ನು ವಿಭಜಿಸಿದ್ದು ಕಾಂಗ್ರೆಸ್‌. ಸಂವಿಧಾನ 371ನೇ ವಿಧಿ ಜಾರಿ ಮಾಡಿ ಕಾಶ್ಮೀರವನ್ನು ಭಾರತದಿಂದ ದೂರ ಮಾಡಿದ್ದು ಕಾಂಗ್ರೆಸ್‌. 1962ರಲ್ಲಿ ಹಿಮಾಲಯದಲ್ಲಿ ಚೀನಾಗೆ 32 ಸಾವಿರ ಚದಕ ಕಿ.ಮೀ ಭೂಭಾಗ ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. 1984ರಲ್ಲಿ ನಡೆದ ಸಿಖ್‌ ನರಮೇಧದಲ್ಲಿ 3000ಕ್ಕೂ ಹೆಚ್ಚು ಸಿಖ್ಖರನ್ನು ಕೊಲ್ಲಲು ಕಾರಣವಾಗಿದ್ದು ಇದೇ ಕಾಂಗ್ರೆಸ್‌. ಇದುವರೆಗೆ ಕಾಂಗ್ರೆಸ್‌ ದೇಶವನ್ನು ವಿಭಜಿಸಿದೆಯೇ ವಿನಾ ಒಂದು ಗೂಡಿಸಿಲ್ಲ. ಈ ವಿಷಯಗಳ ಬಗ್ಗೆ ಅವರು ಉತ್ತರಿಸಲಿ’ ಎಂದರು.

ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯಕುಮಾರ್‌, ಲೋಕೇಶ್‌, ಜಿಲ್ಲಾ ಉಪಾಧ್ಯಕ್ಷ ಶಿವು, ನಗರ ಮಂಡಲ ಅಧ್ಯಕ್ಷ ಆನಂಧ ಭಗೀರಥ, ಕಾರ್ಯದರ್ಶಿ ಅಶ್ವಿನ್‌, ಸುನಿಲ್‌ ಇದ್ದರು.

‘ದೇಶ ಒಡೆಯುತ್ತೇವೆ ಎಂದವರ ಜೊತೆ ಹೆಜ್ಜೆ’

‘ಭಾರತ್‌ ತೇರೇ ತುಕಡೇ ಹೋಂಗೆ ಎಂದು ಹೇಳಿದ್ದ ಕನ್ಹಯ್ಯಕುಮಾರ್‌, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ್ದ ಅಮೂಲ್ಯ ಅವರು ರಾಹುಲ್‌ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ದೇಶವನ್ನು ತುಂಡು ತುಂಡು ಮಾಡುತ್ತೇವೆ ಎಂದು ಹೇಳಿದವರ ಜೊತೆ ಹೆಜ್ಜೆ ಹಾಕುವ ಇವರು ದೇಶವನ್ನು ಹೇಗೆ ಒಂದು ಗೂಡಿಸುತ್ತಾರೆ. ಹಲವು ದಶಕಗಳ ಕಾಲ ಆಡಳಿತದಲ್ಲಿದ್ದರೂ, ಕಾಶ್ಮೀರದಲ್ಲಿ ತ್ರಿವರ್ಣಧ್ವಜ ಹಾರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ’ ಎಂದು ಪ್ರಣಯ್‌ ದೂರಿದರು.

‘ದೇಶ ಈಗಾಗಲೇ ಒಂದಾಗಿರುವಾಗ ಜೋಡೊ ಯಾತ್ರೆ ಮಾಡುವ ಉದ್ದೇಶವಾದರೂ ಏನು? ಗುಜರಾತ್‌, ಉತ್ತರ ಪ್ರದೇಶಗಳಲ್ಲಿ ಕಡಿಮೆ ದಿನಗಳ ನಡೆಯುವ ಈ ಪಾದಯಾತ್ರೆ ರಾಜ್ಯದಲ್ಲಿ 22 ದಿನಗಳ ಕಾಲ ನಡೆಯುತ್ತಿದೆ. ಚುನಾವಣೆಯ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT