ಮಹದೇಶ್ವರ ಬೆಟ್ಟ: ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವಿವಿಧ ಸ್ಥಳಗಳ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಬಕಾರಿ ಡಿಸಿ ಏಕಕಾಲದಲ್ಲಿ ದಾಳಿ ನಡೆಸಿ ಏಳು ಜನರನ್ನು ವಶಕ್ಕೆ ಪಡೆದು ಪ್ರತ್ಯೇಕವಾಗಿ 5 ಪ್ರಕರಣ ದಾಖಲಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ಎಸ್ಪಿ ಬಿ.ಟಿ.ಕವಿತಾ ಹಾಗೂ ಅಬಕಾರಿ ಡಿಸಿ ನಾಗಶಯನ, ವಿಶೇಷ ಪೊಲೀಸ್ ತಂಡ ಬೆಟ್ಟದಲ್ಲಿ ನಡೆಯುತ್ತಿದ್ದ ದಂಧೆ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದರು.
ಬೆಟ್ಟ ಹಾಗೂ ಸುತ್ತ ಮುತ್ತ ಮಾರಾಟ ಮಾಡುವವರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತಿದ್ದರೂ ಅಬಕಾರಿ ತಂಡ ದಾಳಿ ನಡೆಸುವ ಸಂದರ್ಭದಲ್ಲಿ ₹35ಕ್ಕೆ 90 ಎಂಎಲ್ ಪೌಚನ್ನು ₹100 ರಿಂದ ₹150ಗಳಿಗೆ ಮಾರಾಟ ಮಾಡಿ ದುಪ್ಪಟ್ಟು ಸಂಪಾದನೆ ಮಾಡುತ್ತಿದ್ದರು.
ಇದರಿಂದ ಮದ್ಯ ಪ್ರಿಯರಿಗೆ ಪ್ರತಿ ನಿತ್ಯವೂ ಸರಬರಾಜಾಗುತ್ತಿತ್ತು. ಜೊತೆಗೆ ದೇವಾಲಯಕ್ಕೆ ಬರುವ ಭಕ್ತರು ಮದ್ಯಕ್ಕೆ ದಾಸರಾಗಿ ಕುಡಿದು ಅಲ್ಲಲ್ಲಿ ರಸ್ತೆಯಲ್ಲೇ ಬಿದ್ದ ಪ್ರಸಂಗಗಳಿವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡ ಜಿಲ್ಲಾ ಪೋಲೀಸರ ತಂಡ ಭಾನುವಾರ ಹಾಗೂ ಸೋಮವಾರ ದೇಗುಲದ ಸುತ್ತಮುತ್ತ ದಾಳಿ ನಡೆಸಿದರು.
ಸ್ಥಳಿಯರಾದ ಲಕ್ಷ್ಮಿ ಎಂಬುವರ ಮನೆಯಲ್ಲಿ ಸಾಲೂರು ಮಠಕ್ಕೆ ತೆರಳುವ ರಸ್ತೆಯ ಸಿದ್ದಪ್ಪ, ರಾಚಪ್ಪ ಎಂಬುವರು ವಿವಿಧ ಕಂಪನಿಯ ಅಕ್ರಮ ಮದ್ಯದ 13 ಬಾಕ್ಸ್ ₹20 ಸಾವಿರ ನಗದು ಸೇರಿ ₹1.6ಲಕ್ಷ ಬೆಲೆಯ ಮದ್ಯ ವಶಕ್ಕೆ ಪಡೆಯಲಾಗಿದೆ.
ಪುದೂರು ಗ್ರಾಮದ ಕುಮಾರ್ ಮನೆಯಲ್ಲಿ 1 ಬಾಕ್ಸ್ 30 ಪೌಚ್ ₹3 ಸಾವಿರ ನಗದು ಜನತಾ ಕಾಲೋನಿಯ ಚಂದ್ರು ಮತ್ತು ಸಂಗಡಿಗರು ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಮಹೇಶ್, ಬಾಬು ಪೂಜಾರಿ ಅಕ್ರಮ ದಾಸ್ತಾನು ಮಾಡಿದ್ದ 2 ಬಾಕ್ಸ್ 20 ಪೌಚ್, ತಂಬಡಗೇರಿ ಮಹಾದೇವಿ ಮನೆಯಲ್ಲಿ ದಾಸ್ತಾನು ಇಟ್ಟಿದ್ದ ಒಂದು ಬಾಕ್ಸ್ 20 ಪೌಚ್, ಪುಟ್ಟಮ್ಮ ಹುಲಿಗೂಡು ಮನೆಯಲ್ಲಿಟ್ಟಿದ್ದ ಒಂದು ಬಾಕ್ಸ್ 20 ಪೌಚ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿ ಪುಟ್ಟಮ್ಮ ತಲೆಮರೆಸಿಕೊಂಡಿದ್ದು ಇವರ ಪತ್ತೆಗೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಟ್ಟದಲ್ಲಿ ಮದ್ಯ ಮಾರಾಟವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಬೆಟ್ಟದ ಠಾಣಾ ವ್ಯಾಪ್ತಿಯಲ್ಲಿ ಹನೂರು ಇನ್‌ಸ್ಪೆಕ್ಟರ್ ಶಶಿಕುಮಾರ್, ಪಿಎಸ್ಐ ಮಂಜುನಾಥ್ ರಾಮಾಪುರ ಪಿಎಸ್ಐ ಈಶ್ವರ ಸೇರಿ ಒಟ್ಟು ಐದು ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲು ಮಾಡಲಾಗಿದೆ. ಎಂಟು ಜನರ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಶಶಿಕುಮಾರ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್ ಪ್ರಸಾದ್, ಈಶ್ವರ್, ಪೇದೆಗಳಾದ ಸಿಂಗಂ ನಾಗರಾಜು, ಜೈ ಶಂಕರ್ ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.