ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಐದು ವರ್ಷ ನಂತರ ಸಂಕ್ರಾಂತಿ ತೇರು

ಜ.16 ರಂಗಧಾಮನ ಚಿಕ್ಕ ಜಾತ್ರೆ: ನೆಲಹಾಸು ಕಾಮಗಾರಿ ವಾರದಲ್ಲಿ ಮುಕ್ತಾಯ
Last Updated 31 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ಚಿಕ್ಕ ರಥೋತ್ಸವ ಜ.16ಕ್ಕೆ ಜರುಗಲಿದೆ. ದೇವಾಲಯ ನವೀಕರಣ ಉದ್ದೇಶದಿಂದ ಏಳು ವರ್ಷಗಳಿಂದ ಸ್ಥಗಿತವಾಗಿದ್ದ ಸಂಕ್ರಾತಿ ತೇರಿನ ಉತ್ಸವಗಳನ್ನು ಈ ಬಾರಿ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.

ಶುಭಕೃತ ನಾಮ ಸಂವತ್ಸರದ ಉತ್ತರಾಯಣ ಹೇಮಂತ ಋತು ಪುಷ್ಯ ಕೃಷ್ಣಪಕ್ಷ ನವಮಿ ಮಕರ ಮಾಸದಲ್ಲಿ ಆಗಮೋಕ್ತ ಪ್ರಕಾರವಾಗಿ ಉತ್ಸವಗಳು ನಡೆಯಲಿವೆ.

2017ರಲ್ಲಿ ಕೊನೆಯ ಬಾರಿಗೆ ಚಿಕ್ಕ ಜಾತ್ರೆ ನಡೆದಿತ್ತು. ನಂತರ ದೇವಳ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಎರಡು ಬಾರಿ ಕೋವಿಡ್ ಸೋಂಕಿನಿಂದ ತೇರಿಗೆ ಚಾಲನೆ ಸಿಕ್ಕಿರಲಿಲ್ಲ. ಈ ಬಾರಿ ಜಾತ್ರೆ ನಡೆಯುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

‘ದೇವಾಲಯ ನವೀಕರಣ ಸಂಪೂರ್ಣ ಮುಗಿದಿದ್ದು, ದೇವಳದ ಸುತ್ತಲೂ ನೆಲಹಾಸು ಹಾಕುವ ಕೆಲಸ ವಾರದೊಳಗೆ ಪೂರ್ಣಗೊಳ್ಳಲಿದೆ. ದಾರಿಗೆ ಅಡ್ಡವಾಗಿದ್ದ ಬಂಡೆ ತೆರವುಗೊಳಿಸಲಾಗಿದೆ. ಚಿಕ್ಕ ರಥವನ್ನು ಹೊರಗೆ ತಂದು, ಪರಿಕರಗಳನ್ನು ಪರೀಕ್ಷಿಸಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಭೆ ನಡೆಸಿ, ರಥೋತ್ಸವ ಸಿದ್ಧತೆಗೆ ವೇಗ ನೀಡಲಾಗುತ್ತದೆ’ ಎಂದು ದೇಗುಲ ಆಡಳಿತಾಧಿಕಾರಿ ವೈ.ಎನ್.ಮೋಹನ್ ಕುಮಾರ್ ಹೇಳಿದರು.

ಜಾತ್ರೋತ್ಸವ ವಿಶೇಷ: ‘ಮಕರ ಸಂಕ್ರಾತಿ ಜ.15ಕ್ಕೆ ಆರಂಭವಾಗುತ್ತದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತಿರುಗುತ್ತಾನೆ. ಜಾತ್ರೆಯ ದಿನದಂದು ಕೃಷಿಕರು ಮೊದಲು ಕೊಯ್ಲು ಮಾಡಿದ ಪಡಿತರವನ್ನು ದೇವರಿಗೆ ಅರ್ಪಿಸುತ್ತಾರೆ. ತಳಿರು ತೋರಣಗಳಿಂದ ರಥಕ್ಕೆ ಅಲಂಕರಿಸಿ, ಧವಸ ಧಾನ್ಯ ತೂರಿ, ರಂಗನಾಥನ ಗುಣಗಾನ ಮಾಡುತ್ತಾರೆ. ಸ್ವಾಮಿಯ ಉತ್ಸವಮೂರ್ತಿ ರಥಾರೋಹಣ ಮಾಡಿ ದೇವಾಲಯದ ಸುತ್ತಲೂ ರಥ ಎಳೆಯುತ್ತಾರೆ. ಸ್ಥಳೀಯ ಗ್ರಾಮಸ್ಥರು, ಸೋಲಿಗರು ವಿಶೇಷ ಸೇವೆ ಸಲ್ಲಿಸಲ್ಲಿದ್ದಾರೆ. ದಾಸರು ಬ್ಯಾಟಮಣೆ ಉತ್ಸವದಲ್ಲಿ ಎಳ್ಳು, ಬೆಲ್ಲ, ಅಕ್ಕಿಯ ನೈವೇದ್ಯ ಮಾಡಿ, ನೆರೆದವರಿಗೆ ಹಂಚುತ್ತಾರೆ’ ಎಂದು ದೇವಾಲಯದ ಪಾರುಪತ್ಯಗಾರ ರಾಜು ಹೇಳಿದರು.

ಈ ಬಾರಿ ಅದ್ಧೂರಿ: ‘ಸಂಕ್ರಾತಿ ಜಾತ್ರೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ. ರಥದ ದೃಢತೆ ಮತ್ತು ಕಾಮಗಾರಿ ಪೂರೈಕೆಗೆ ಅಗತ್ಯ ಕ್ರಮ ವಹಿಸಲು ಸೂಚಿಸಲಾಗುವುದು. ಶುದ್ಧ ನೀರು, ಆರೋಗ್ಯ ಸೇವೆ ಮತ್ತು ಪೊಲೀಸ್ ಬಂದೋಬಸ್ತ್ ಹಾಗೂ ದೇವಾಲಯ ಆಡಳಿತ ಮಂಡಳಿ, ಅಧಿಕಾರಿಗಳ ಸಭೆ ಆಯೋಜಿಸಿ ಸಂಕ್ರಾತಿ ರಥೋತ್ಸವ ವೈಭವದಿಂದ ಆಯೋಜಿಸಲಾಗುವುದು’ ಎಂದು ಶಾಸಕ ಎನ್.ಮಹೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಕರ ಸಂಕ್ರಾತಿ ಉತ್ಸವ ವಿಶೇಷ
ಬೆಟ್ಟದಲ್ಲಿ ಜ.13ರಿಂದ 18ರವರೆಗೆ ಸಂಕ್ರಾಂತಿ ಜಾತ್ರೋತ್ಸವ ನಡೆಯಲಿದೆ. ಜ.13ರಂದು ಅಂಕುರಾರ್ಪಣ, ರಾತ್ರಿ ಕೊಠಾರೋತ್ಸವ, 14ರಂದು ಅಭಿಷೇಕ, ಧ್ವಜಾರೋಹಣ, ರಾತ್ರಿ ರಂಗ ಮಂಟಪೋತ್ಸವ, 15ಕ್ಕೆ ಸ್ವರ್ಗದ ಬಾಗಿಲು ತೆಗೆಯುವುದು ನಡೆಯಲಿದೆ.

16 ಬೆಳಿಗ್ಗೆ 10.46 ರಿಂದ 10.57ರೊಳಗೆ ಸಲ್ಲುವ ಶುಭ ಮೀನ ಲಗ್ನದ ಕನ್ಯಾಬುಧ ನವಾಂಶದ ಶುಭ ಮೂಹೂರ್ತದಲ್ಲಿ ಉತ್ಸವಮೂರ್ತಿಯ ರಥಾರೋಹಣ ಮಹೋತ್ಸವ ಜರುಗಲಿದೆ. ನಂತರ ತೇರಿಗೆ ಚಾಲನೆ ಸಿಗಲಿದೆ. ಸಂಜೆ ಸಂಧಾನೋತ್ಸವ, ಮಂಟಪೋತ್ಸವ, ಅಲಂಕಾರ ಸೇವೆ, ಕಲ್ಯಾಣೋತ್ಸವ, ಮುಯ್ಯಿ ಸಮರ್ಪಣೆ ನಡೆಯಲಿದೆ.

17 ರಂದು ಗರುಡೋತ್ಸವ, ಶಯನೋತ್ಸವ ಹಾಗೂ 18 ರಂದು ಮಂಗಳಸ್ನಾನ, ಧ್ವಜ ಅವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT