ಸೋಮವಾರ, ಅಕ್ಟೋಬರ್ 18, 2021
22 °C
ಯಳಂದೂರು: 4269.12 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಿ ಅಧಿಸೂಚನೆ

ಬಿಆರ್‌ಟಿ ಹುಲಿ ಕಾಡು ಮತ್ತಷ್ಟು ವಿಸ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಯಳಂದೂರು ತಾಲ್ಲೂಕಿನ ಅಗರ ಮತ್ತು ಕಸಬಾ ಹೋಬಳಿಯ ಯರಗಂಬಳ್ಳಿ, ಗುಂಬಳ್ಳಿ, ಗೌಡಹಳ್ಳಿ ವ್ಯಾಪ್ತಿಯ ಕೆಲ ಗ್ರಾಮಗಳ ಕಂದಾಯ ಭೂಮಿಯ 4,269.12 ಎಕರೆ ಸರ್ಕಾರಿ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆಯೊಂದಿಗೆ ಬಿಆರ್‌ಟಿ ಅರಣ್ಯದ ಪ್ರದೇಶದ ವಿಸ್ತಾರ ಇನ್ನಷ್ಟು ಹೆಚ್ಚಾಗಲಿದೆ. 

ತಾಲ್ಲೂಕಿನ ಕಸಬಾ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳ ಕಂದಾಯ ಭೂಮಿಯನ್ನು ಗುರುತಿಸಲಾಗಿದೆ. ಗುರುತಿಸಿದ ಭೂಮಿ ಸರ್ವೆ ನಂಬರ್ ಮತ್ತು ವಿಸ್ತೀರ್ಣವನ್ನು ಅಳತೆ ಮಾಡಿ ವರದಿ ತಯಾರಿಸಲಾಗಿದೆ. ಕರ್ನಾಟಕ ಅರಣ್ಯ ಹಕ್ಕು ಕಾಯ್ದೆ 1963 ಸೆಕ್ಷನ್ 4ರಂತೆ ಶ್ರೀಬಿಳಿಗಿರಿರಂಗಸ್ವಾಮಿ ದೇವಸ್ಥಾನದ ಬಡಾವಣೆ ಬ್ಲಾಕ್-1ರಂತೆ ಈ ಪ್ರದೇಶಗಳನ್ನು ಮೀಸಲು ಅರಣ್ಯವೆಂದು ಅಧಿಸೂಚನೆ ಹೊರಡಿಸಲಾಗಿದೆ.

ಯಾವ ಗ್ರಾಮದಲ್ಲಿ ಎಷ್ಟು‌?: ಗುಂಬಳ್ಳಿ ಗ್ರಾಮದ ಸರ್ವೆ ನಂಬರ್ 218, 185, 186, 187 187ಗಳ ಒಟ್ಟು 814.50 ಹೆಕ್ಟೇರ್ (2012.24 ಎಕರೆ), ಯರಗಂಬಳ್ಳಿ ವ್ಯಾಪ್ತಿಯ ಸರ್ವೆ ನಂಬರ್ 357, 270ರಲ್ಲಿ 324.44 ಹೆಕ್ಟೇರ್ (801.28 ಎಕರೆ) ಹಾಗೂ ಗೌಡಹಳ್ಳಿಯ ಸರ್ವೆ ನಂಬರ್ 63, 64,
70ರಲ್ಲಿ 588.83 ಹೆಕ್ಟೇರ್ (1,455 ಎಕರೆ) ಪ್ರದೇಶವನ್ನು ಗುರುತಿಸಲಾಗಿದ್ದು, ಒಟ್ಟು 1,727.77 ಹೆಕ್ಟೇರ್ (4269.12 ಎಕರೆ) ಪ್ರದೇಶವನ್ನು ಮೀಸಲು ಅರಣ್ಯ ಇಂದು ಗುರುತಿಸಲಾಗಿದೆ.

ಆಕ್ಷೇಪಣೆಗೆ ಅವಕಾಶ: ಈ ಮಧ್ಯೆ, ಜಿಲ್ಲಾಡಳಿತವು ಘೋಷಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದೆ. 

ಕರ್ನಾಟಕ ಅರಣ್ಯ ಹಕ್ಕು ಕಾಯ್ದೆ 1964 ಸೆಕ್ಷನ್ 17ರ ಅಧಿಸೂಚನೆ ಸಂಬಂಧ ಪ್ರಸ್ತಾಪಿತ ಜಮೀನಿನ ಹಿತಾಸಕ್ತಿದಾರರು ಹಕ್ಕು ಬಾಧ್ಯತೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಭೂಮಿಗೆ ಸಂಬಂಧಿಸಿದ ದಾಖಲಾತಿಗಳನ್ನು 90 ದಿನಗಳ ಒಳಗೆ ಕೊಳ್ಳೇಗಾಲ ಅರಣ್ಯ ವ್ಯವಸ್ಥಾಪನಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅವರಿಗೆ ಸಲ್ಲಿಸಬಹುದು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಆರ್‌.ಜಯಪ್ರಕಾಶ್‌ ಅವರು, 'ಉಪ ವಿಭಾಗಾಧಿಕಾರಿಗಳ ಆದೇಶದಂತೆ ಕಚೇರಿಗಳಲ್ಲಿ ಮೀಸಲು ಅರಣ್ಯ ಘೋಷಣೆಯ ಅಧಿಸೂಚನೆಯ ಮಾಹಿತಿಯನ್ನು ಪ್ರಕಟಿಸಲಾಗಿದೆ. ಭೂ ಮಾಲಿಕತ್ವದ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಅವಕಾಶ ಇದೆ, ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ' ಎಂದು ಹೇಳಿದರು.

‘2002ರಿಂದಲೇ ಪ್ರಕ್ರಿಯೆ ಚಾಲನೆಯಲ್ಲಿ’ 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್‌ ಕುಮಾರ್‌ ಅವರು, ‘ಮೀಸಲು ಅರಣ್ಯ ಘೋಷಣೆಗೂ ಮೊದಲು ಕೆಲವು ಅಧಿಸೂಚನೆಗಳನ್ನು (ಸೆಕ್ಷನ್ 17) ಪೂರ್ಣಗೊಳಿಸಬೇಕಿದೆ. ಇದು ಕಂದಾಯ ಭೂಮಿಯಲ್ಲ. ಈಗ ಗುರುತಿಸಿರುವ ಪ್ರದೇಶ ಅರಣ್ಯ ಇಲಾಖೆ ನಿಯಂತ್ರಣದಲ್ಲಿ ಈಗಲೂ ಇದೆ. 2002-03ರಿಂದಲೇ ಈ ಪ್ರಕ್ರಿಯೆ ಚಾಲನೆಯಲ್ಲಿ ಇದೆ. ಈಗಾಗಲೇ ಸೆಕ್ಷನ್ 4ರ ಪ್ರಕ್ರಿಯೆಗಳು ಮುಗಿದಿದ್ದು, ಯಾರ ಹಸ್ತಕ್ಷೇಪವೂ ಕಂಡುಬಂದಿಲ್ಲ. ಒಂದು ವೇಳೆ ಭೂ ಒಡೆತನದ ಬಗ್ಗೆ ದೂರುಗಳಿದ್ದಲ್ಲಿ ಅವರಿಗೆ ಪರಿಹಾರ ನೀಡಬಹುದು. ಅರಣ್ಯದ ಹೊರ ವಲಯಕ್ಕೆ ಭೂಮಿಯನ್ನು ಸ್ಥಳಾಂತರಿಸಲು ಅವಕಾಶ ಇದೆ. ಆಕ್ಷೇಪಿತ ಪ್ರದೇಶ ಬಿಟ್ಟು ಮೀಸಲು ಅರಣ್ಯ ಘೋಷಿಸಬಹುದು. ಈ ಘೋಷಣೆಯಿಂದಾಗಿ ಬಿಆರ್‌ಟಿ ಅರಣ್ಯ ವಲಯ ವಿಸ್ತಾರ ಆಗಲಿದೆ’ ಎಂದು ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.