ಮಂಗಳವಾರ, ಏಪ್ರಿಲ್ 20, 2021
25 °C

ಸಾರಿಗೆ ನೌಕರರ ಮುಷ್ಕರಕ್ಕೆ ಬಿಎಸ್‌ಪಿ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಇದೇ 7ರಿಂದ ಆರಂಭಿಸುವ ಮುಷ್ಕರಕ್ಕೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎನ್.ನಾಗಯ್ಯ ಅವರು ಸೋಮವಾರ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರಿಗೆ ನೌಕರರು ಡಿಸೆಂಬರ್‌ನಲ್ಲಿ 3 ದಿನಗಳ ಕಾಲ ನಡೆಸಿದ ಮುಷ್ಕರ ಸಂದರ್ಭದಲ್ಲಿ ಸರ್ಕಾರವು ಲಿಖಿತ ರೂಪದಲ್ಲಿ ನೌಕರರ ಎಲ್ಲ 9 ಬೇಡಿಕೆಗಳನ್ನು ಮೂರು ತಿಂಗಳೊಳಗೆ ಈಡೇರಿಸುವುದಾಗಿ ಭರವಸೆ ನೀಡಿತ್ತು. ಆರನೇ ವೇತನ ಆಯೋಗದ ಶಿಫಾಸಿನಂತ ವೇತನ ನೀಡಬೇಕು ಎಂಬುದು ಅವರ ಪ್ರಮುಖ ಬೇಡಿಕೆ. ಸರ್ಕಾರ 7ರ ಒಳಗಾಗಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಅವರು ನಡೆಸುವ ಮುಷ್ಕರದಿಂದ  ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗಲಿದೆ’ ಎಂದರು. 

ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಮೇಲೆ ಬಸವನಗೌಡ ಪಾಟೀಲ ಯತ್ನಾಳ್ ಅವರು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವರ ನಡುವೆ ಸಾಮರಸ್ಯ ಇಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಯತ್ನಾಳ ಮಾಡಿರುವ ಆರೋಪ ಹಾಗೂ ಈಶ್ವರಪ್ಪ ಅವರು ರಾಜ್ಯಪಾಲರಿಗೆ ಪತ್ರ ಬರೆಯಲು ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಯಬೇಕು. ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಸ್‌ನ ಹಾಲಿ ನ್ಯಾಯಮೂರ್ತಿ ಅವರಿಂದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. 

ರಮೇಶ್ ‌ಜಾರಕಿಹೊಳಿ ಬಂಧಿಸಿ: ‘ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿಯನ್ನು ಎಸ್‌ಐಟಿ ತಕ್ಷಣ ಬಂಧಿಸಬೇಕು. ಯುವತಿ ದೂರು ನೀಡಿದ ತಕ್ಷಣ ಅವರು ಎಲ್ಲಿಯೂ ಕಾಣಿಸಿ ಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ‘ ಎಂದರು. 

‘ಈ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು’ ಎಂದು ನಾಗಯ್ಯ ಅವರು ಆಗ್ರಹಿಸಿದರು. 

ಪಕ್ಷದ ಸಂಯೋಜಕ ಕೃಷ್ಣಯ್ಯ, ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಅಮಚವಾಡಿ ಪ್ರಕಾಶ್ ಇದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು