ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ಬಂಧ: ಅಘೋಷಿತ ಬಂದ್‌ ವಾತಾವರಣ

ಜನರ, ವಾಹನಗಳ ಸಂಚಾರ ಕಡಿಮೆ, ಕೆಎಸ್‌ಆರ್‌ಟಿಸಿ ಬಸ್‌ಗಳಿಗೂ ಪ್ರಯಾಣಿಕರಿಲ್ಲ
Last Updated 23 ಏಪ್ರಿಲ್ 2021, 14:54 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌ ಎರಡನೇ ಅಲೆ ತಡೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶುಕ್ರವಾರ ಅಘೋಷಿತ ಬಂದ್‌ ವಾತಾವರಣ ಕಂಡು ಬಂತು. ಜನ ಸಂಚಾರವೂ ಕಡಿಮೆ ಇತ್ತು.

ಅಗತ್ಯ ಸೇವೆಗಳನ್ನು ಒದಗಿಸುವ ಔಷಧ ಅಂಗಡಿಗಳು, ದಿನಸಿ ಅಂಗಡಿಗಳು, ಬೇಕರಿ, ತರಕಾರಿ, ಹಣ್ಣಿನ ಅಂಗಡಿ, ಹೋಟೆಲ್‌, ಬಾರ್‌, ಹಾಲಿನ ಕೇಂದ್ರಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಳಿಗೆ, ಬ್ಯೂಟಿ ಪಾರ್ಲರ್‌, ಸೆಲೂನ್‌ ಸೇರಿದಂತೆ ಸರ್ಕಾರ ಪಟ್ಟಿ ಮಾಡಿರುವ ಮಳಿಗೆಗಳು ಮಾತ್ರ ತೆರೆದಿದ್ದವು. ಜವಳಿ, ಎಲೆಕ್ಟ್ರಾನಿಕ್ಸ್‌, ಪಾತ್ರೆ, ಮೊಬೈಲ್‌, ಚಿನ್ನಾಭರಣ, ಪಾದರಕ್ಷೆಗಳು, ಹಾರ್ಡ್‌ವೇರ್‌ ಅಂಗಡಿಗಳು ಮುಚ್ಚಿದ್ದವು.

ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಹೆಚ್ಚಿನ ಅಂಗಡಿ ಮುಂಗಟ್ಟುಗಳು ತೆರೆಯದೇ ಇದ್ದುದರಿಂದ ಗ್ರಾಹಕರ ಸಂಖ್ಯೆಯೂ ಕಡಿಮೆ ಇತ್ತು. ಜವಳಿ, ಪಾತ್ರೆ ಸೇರಿದಂತೆ ಇತರ ವಸ್ತುಗಳ ಖರೀದಿಗಾಗಿ ಗ್ರಾಮೀಣ ಭಾಗದಿಂದ ಬಂದಿದ್ದ ಕೆಲವರು ನಿರಾಸೆಯಿಂದ ವಾ‍ಪಸ್‌ ತೆರಳಿದರು. ಮದುವೆ ಸೇರಿದಂತೆ ಇನ್ನಿತರ ಶುಭ ಸಮಾರಂಭಗಳಿಗಾಗಿ ಆಭರಣಗಳನ್ನು ಮಾಡಲು ಕೊಟ್ಟಿದ್ದವರು, ಅವುಗಳನ್ನು ಪಡೆಯಲು ಬಂದಿದ್ದರು. ಆದರೆ, ಅಂಗಡಿಗಳು ಮುಚ್ಚಿದ್ದರಿಂದ ಬರಿಕೈಯಲ್ಲಿ ತೆರಳಬೇಕಾಯಿತು.

ಜನರ ಓಡಾಟ ಕಡಿಮೆ ಇದ್ದುದರಿಂದ ತೆರೆದಿದ್ದ ಅಂಗಡಿಗಳಲ್ಲೂ ಹೆಚ್ಚಿನ ವ್ಯಾಪಾರ ಆಗಲಿಲ್ಲ.

ಪ್ರಯಾಣಿಕರ ಸಂಖ್ಯೆಯೂ ಕಡಿಮೆ: ಬಸ್‌ ಹಾಗೂ ವಾಹನಗಳಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇತ್ತು.

ಕೆಎಸ್‌ಆರ್‌ಟಿಸಿ ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿಲ್ಲ. ತುಂಬಾ ಸಮಯ ಕಾಯ್ದರೂ ಪ್ರಯಾಣಿಕರು ಬರುತ್ತಿರಲಿಲ್ಲ. ಬಂದ ಜನರನ್ನು ಹತ್ತಿಸಿಕೊಂಡು ಬಸ್‌ಗಳು ಸಂಚರಿಸಿದವು.

‘ಸರ್ಕಾರ ವಾಣಿಜ್ಯ ಚಟುವಟಿಕೆಗಳಿಗೆ ಭಾಗಶಃ ನಿರ್ಬಂಧ ಹೇರಿರುವುದರಿಂದ ನಗರ, ಪಟ್ಟಣ ಹಾಗೂ ವಿವಿಧ ಕಡೆಗಳಿಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ವಿಭಾಗದ ವ್ಯಾಪ್ತಿಯಲ್ಲಿ ಶೇ 70ರಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಶುಕ್ರವಾರ 280 ಬಸ್‌ಗಳು ಕಾರ್ಯಾಚರಿಸಿವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಷ್ಕರ ಅಂತ್ಯಗೊಂಡ ಬಳಿಕ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದರೆ ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡದೇ ಇರುವುದರಿಂದ ಎಲ್ಲ ನೌಕರರ ಅಗತ್ಯವಿಲ್ಲ. ಹಾಗಾಗಿ, ಕೆಲವರಿಗೆ ವೇತನ ಸಹಿತ ರಜೆ ನೀಡಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

ಮದುವೆಗೆ ಷರತ್ತು: ತಹಶೀಲ್ದಾರ್‌ ಕಚೇರಿಗೆ ದೌಡು

ಮೇ 4ರವರೆಗೆ ಮದುವೆ ಸಮಾರಂಭಗಳಿಗೂ ಹಲವು ಷರತ್ತುಗಳನ್ನು ಸರ್ಕಾರ ವಿಧಿಸುವುದರಿಂದ, ಜನರು ಅನುಮತಿ ಪಡೆಯುವುದಕ್ಕಾಗಿ ತಹಶೀಲ್ದಾರ್‌ ಕಚೇರಿಗೆ ಎಡತಾಕುತ್ತಿದ್ದಾರೆ.

ಮದುವೆ ಸಮಾರಂಭ ನಡೆಯುವ ಸ್ಥಳಗಳಲ್ಲಿ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ, ಗರಿಷ್ಠ 50 ಜನರು ಭಾಗವಹಿಸಲು ಮಾತ್ರ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕಾಗಿ ತಾಲ್ಲೂಕು ಕಚೇರಿಯಿಂದ ಅನುಮತಿಯನ್ನೂ ಪಡೆಯಬೇಕಾಗಿದೆ.

‘ಮೇ 1 ಮತ್ತು 2ರಂದು ಅಣ್ಣನ ಮಗಳ ಮದುವೆ ನಿಶ್ಚಯಿಸಿದ್ದೆವು. ಮೈಸೂರಿನಲ್ಲಿ ಕಲ್ಯಾಣ ಮಂಟ‍ಪವನ್ನೂ ಕಾಯ್ದಿರಿಸಿದ್ದೆವು. 2,000 ಆಮಂತ್ರಣ ಪತ್ರ ಮುದ್ರಿಸಿದ್ದೆವು. ಸರ್ಕಾರದ ಹೊಸ ಆದೇಶದಂತೆ 50ಕ್ಕಿಂತ ಹೆಚ್ಚು ಜನರು ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ. ಹಾಗಾಗಿ, ಕಲ್ಯಾಣ ಮಂಟಪವನ್ನು ರದ್ದುಪಡಿಸಿ ನಮ್ಮ ಊರಿನಲ್ಲಿಯೇ ಮದುವೆ ಮಾಡಲು ತೀರ್ಮಾನಿಸಿದ್ಧೇವೆ’ ಎಂದು ತಾಲ್ಲೂಕಿನ ವೀರನಪುರದ ಮಹಾಲಿಂಗಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಹಶೀಲ್ದಾರ್‌ ಕಚೇರಿಯಿಂದ ಅನುಮತಿ ಪಡೆದಿದ್ದೇವೆ. ಪಾಲಿಸಬೇಕಾದ ನಿಯಮಗಳನ್ನು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ನಿಯಮಗಳನ್ನು ಅನುಸರಿಸಿ ಮದುವೆ ಮಾಡುತ್ತೇವೆ. ಜನರ ಮಿತಿ ಇರುವುದರಿಂದ ನೆಂಟರಿಷ್ಟರು, ನೆರೆಹೊರೆಯವರವನ್ನು ಕರೆಯುವುದಕ್ಕೆ ಆಗುತ್ತಿಲ್ಲ ಎಂಬ ಬೇಸರ ಇದೆ. ಅದರ ಜೊತೆಗೆ, ಸರಳವಾಗಿ ಮದುವೆ ನಡೆಯುವುದರಿಂದ ಮೂರ್ನಾಲ್ಕು ಲಕ್ಷ ರೂಪಾಯಿ ಹಣವೂ ಉಳಿತಾಯವಾಗಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT