ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಟಿ.ಹೀರಾಲಾಲ್ ‘ಸರ್ಕಾರದ ಅಧಿಸೂಚನೆಯಂತೆ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಕ್ರಮ ನಡೆದಿಲ್ಲ. ಚಾಮರಾಜನಗರ ವೃತ್ತದಲ್ಲಿ 27 ವಾಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಲಿಖಿತ ಪರೀಕ್ಷೆ ಇಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕದ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದೆ’ ಎಂದು ಹೇಳಿದರು. ‘27 ಹುದ್ದೆಗಳಿಗೆ 16 ಸಾವಿರದಷ್ಟು ಅರ್ಜಿಗಳು ಬಂದಿತ್ತು. ಹಲವರು ಅರ್ಜಿ ಶುಲ್ಕ ಪಾವತಿಸಿರಲಿಲ್ಲ. 14 ಸಾವಿರ ಅರ್ಜಿಗಳನ್ನು ಪರಿಶೀಲನೆ ಮಾಡಿ ಹೆಚ್ಚಿನ ಅಂಕ ಪಡೆದಿರುವವನ್ನು 1:20 ಅನುಪಾತದಲ್ಲಿ 540 ಮಂದಿಯನ್ನು ದೈಹಿಕ ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು’ ಎಂದರು. ‘ಗುರುವಾರ ನಡೆದ ದೈಹಿಕ ಪರೀಕ್ಷೆಗೆ 368 ಅಭ್ಯರ್ಥಿಗಳು ಬಂದಿದ್ದರು. ಇವರಲ್ಲಿ 258 ಮಂದಿ ಅರ್ಹತೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ 1:3ರ ಅನುಪಾತದಲ್ಲಿ 81 ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. 30 ಜನರ ಮೂರು ತಂಡವನ್ನಾಗಿ ಮಾಡಿ ಮೂರು ದಿನಗಳ ಕಾಲ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಆಯ್ಕೆಯಾದವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದೇವೆ. ಕೆಲವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರಿಗೆ ಮತ್ತೆ ಕರೆ ಮಾಡಿ ಪರೀಕ್ಷೆ ನಡೆಸಲಾಗುವುದು’ ಎಂದು ಹೀರಾಲಾಲ್ ಹೇಳಿದರು. ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಸಂತೋಷ್ ಕುಮಾರ್ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪ್ ಜೆ. ಕಾಂಟ್ರ್ಯಾಕ್ಟರ್ ಇದ್ದರು.