ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಗೂಲಿ ಶಾಲೆಗೆ ಅಭಿವೃದ್ಧಿ ಭಾಗ್ಯ

ಗುಂಡ್ಲುಪೇಟೆ: ಕಾಯಕಲ್ಪಕ್ಕೆ ಕಾದಿವೆ ಶತಮಾನ ಕಂಡ 9 ಶಾಲೆಗಳು
Last Updated 10 ಏಪ್ರಿಲ್ 2021, 13:40 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಒಂಬತ್ತು ಸರ್ಕಾರಿ ಶಾಲೆಗಳು ಸ್ಥಾಪನೆಗೊಂಡು 100ಕ್ಕಿಂತ ಹೆಚ್ಚು ವರ್ಷಗಳಾಗಿದ್ದು, ಅಭಿವೃದ್ಧಿ ಹಾಗೂ ಕಾಯಕಲ್ಪಕ್ಕಾಗಿ ಕಾಯುತ್ತಿವೆ.

ಪಟ್ಟಣದ ಊಟಿ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ, ಕಬ್ಬಹಳ್ಳಿ ಶಾಲೆ, ದೇವರಹಳ್ಳಿ ಶಾಲೆ, ಕೋಟೆಕೆರೆ ಶಾಲೆ, ಬಾಚಹಳ್ಳಿ ಶಾಲೆ, ಮಾಡ್ರಹಳ್ಳಿ ಶಾಲೆ, ಕಬ್ಬಹಳ್ಳಿ ಶಾಲೆಗಳು ತಾಲ್ಲೂಕಿನಲ್ಲಿರುವ ಶತಮಾನ ಕಂಡ ಶಾಲೆಗಳು.

ಜಿಲ್ಲಾಡಳಿತದ ಮಹತ್ವಾಕಾಂಕ್ಷೆಯ ಶತಮಾನ ಕಂಡ ಶಾಲೆಗಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮೊದಲ ಹಂತದಲ್ಲಿ ಹಸಗೂಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.

ಗಣಿ ಇಲಾಖೆಯ ಜಿಲ್ಲಾ ಖನಿಜ ನಿಧಿಯಿಂದ ₹26.5 ಲಕ್ಷ ವೆಚ್ಚದಲ್ಲಿ ಶಾಲೆ ಅಭಿವೃದ್ಧಿಯಾಗಲಿದೆ.ಕಟ್ಟಡಗಳಿಗೆ ಸುಣ್ಣ ಬಣ್ಣ, ಗ್ರಂಥಾಲಯ, ಉದ್ಯಾನವನ, ಸ್ಮಾರ್ಟ್‌ ಕ್ಲಾಸ್, ಕಂಪ್ಯೂಟರ್‌ಗಳು, ಪೀಠೋಪಕರಣಗಳು, ಆಟದ ಮೈದಾನ ಸಮತಟ್ಟು ಮಾಡುವ ಯಂತ್ರ, ಕ್ರೀಡಾ ಸಾಮಗ್ರಿಗಳು, ಅಕ್ಷರ ದಾಸೋಹ ಅಡಿಗೆ, ಊಟದ ಹಾಲ್, ಶುದ್ಧ ಕುಡಿಯುವ ನೀರಿನ ಘಟಕ ಮುಂತಾದ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಮಾಡಲು ಹಣ ಬಿಡುಗಡೆ ಮಾಡಲಾಗಿದೆ. ಕಳೆದ ವಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ಖುದ್ದಾಗಿ ಸ್ಥಳ ಭೇಟಿ ಮಾಡಿ ಶಾಲೆಯನ್ನು ವೀಕ್ಷಣೆ ಮಾಡಿ ಯಾವ ಕೆಲಸಗಳು ಆಗಬೇಕಿದೆ ಎಂಬುದನ್ನು ಶಿಕ್ಷಕರೊಂದಿಗೆ ಚರ್ಚೆ ಮಾಡಿದ್ದಾರೆ.

ಹಸಗೂಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1914ರಲ್ಲಿ ಸ್ಥಾಪನೆಯಾಗಿದ್ದು 106 ವರ್ಷಗಳನ್ನು ಪೂರೈಸಿದೆ. ಈ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 132 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆರು ಮಂದಿ ಶಿಕ್ಷಕರಿದ್ದಾರೆ, ಮೂರು ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇದ್ದು ಶಾಲೆ ಕಾಂಪೌಂಡ್ ಸುಸಜ್ಜಿತವಾಗಿದೆ. ಕೆಲವು ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ.

ಶಾಲೆಗೆ ಹೆಚ್ಚುವರಿ ಕೊಠಡಿಗಳು, ರಂಗಮಂದಿರ, ಗ್ರಂಥಾಲಯ, ಉದ್ಯಾನವನ, ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್‌, ಪೀಠೋಪಕರಣಗಳು, ಕ್ರೀಡಾ ಸಾಮಗ್ರಿಗಳು, ಅಕ್ಷರ ದಾಸೋಹ ಅಡಿಗೆ, ಊಟದ ಹಾಲ್, ಶುದ್ಧ ಕುಡಿಯುವ ನೀರಿನ ಘಟಕ ಮುಂತಾದ ಸೌಕರ್ಯಗಳು ಅಗತ್ಯವಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

‘ಉಳಿದ ಶತಮಾನ ಕಂಡ ಶಾಲೆಗಳಿಗೆ ಕಾಯಕಲ್ಪಕ್ಕೆ ಕಾಯುತ್ತಿದೆ. ಕೆಲ ಶತಮಾನ ಕಂಡ ಶಾಲೆಗಳು ಸೌಕರ್ಯಗಳಿಂದ ವಂಚಿತವಾಗಿದೆ
ದಾನಿಗಳು, ಶಾಲೆ ಹಿರಿಯ ವಿದ್ಯಾರ್ಥಿಗಳ ನೆರವನ್ನು ಪಡೆದುಕೊಂಡು ಅಭಿವೃದ್ಧಿ ಮಾಡಿ ಎಂದು ಈಗಾಗಲೇ ಮುಖ್ಯ ಶಿಕ್ಷಕರಿಗೆ ಹೇಳಲಾಗಿದೆ. ಕೆಲ ಶಾಲೆಗಳಿಗೆ ದಾನಿಗಳು ಮುಂದೆ ಎಂದು ಬಂದಿದ್ದಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಅವರು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಮಾದರಿ ಶಾಲೆ’

‘ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸಮಿತಿ ಶಾಲೆಯ ಅಭಿವೃದ್ಧಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಸರ್ಕಾರದಿಂದಲೂ ಅಭಿವೃದ್ಧಿಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇದು ಮಾದರಿ ಶಾಲೆಯಾಗಲಿದೆ. ಶತಮಾನೋತ್ಸವ ಸಮಿತಿ ರಚನೆ ಮಾಡಿಕೊಂಡು ಎಲ್ಲರ ಗಮನಕ್ಕೆ ತಂದು ಅಭಿವೃದ್ಧಿ ಮಾಡಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಎಚ್.ಕೆ.ಗುರುಮಲ್ಲಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT