ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಸೋಂಕಿತ ವಿದ್ಯಾರ್ಥಿ ಚೇತರಿಕೆ

ಸರ್ಕಾರದ ಮಾನದಂಡಗಳಂತೆ ಚಿಕಿತ್ಸೆ, ಕೇಳಿದ ಆಹಾರವೂ ಪೂರೈಕೆ
Last Updated 10 ಜೂನ್ 2020, 16:40 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ ವೈರಸ್‌ ಸೋಂಕು ತಗುಲಿರುವ ಮುಂಬೈನ ವೈದ್ಯಕೀಯ ವಿದ್ಯಾರ್ಥಿಗೆ ನಗರದ ಕೋವಿಡ್‌–19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಚೇತರಿಸುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

‘ಸರ್ಕಾರದ ಮಾನದಂಡಗಳಂತೆ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನೇ ನೀಡಲಾಗುತ್ತಿದೆ. ರೋಗಿ ಕೇಳಿದ ಆಹಾರವನ್ನೂ ಪೂರೈಸುತ್ತಿದ್ದೇವೆ. ಸಾಮಾನ್ಯ ಆಹಾರದ ಜೊತೆಗೆ ಮೊಟ್ಟೆ, ಹಾಲು ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೂವರು ನೇರ ಸಂಪರ್ಕ: ವೈದ್ಯಕೀಯ ವಿದ್ಯಾರ್ಥಿಯೊಂದಿಗೆ ಆತನ ತಾಯಿ, ಅಣ್ಣ ಹಾಗೂ ಮಾವ ನೇರ ಸಂಪರ್ಕಕ್ಕೆ ಬಂದಿದ್ದಾರೆ. ಹಾಗಾಗಿ, ಮೂರು ಜನರನ್ನೂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಈಗಾಗಲೇ ತಾಯಿ ಹಾಗೂ ಅಣ್ಣನಿಗೆ ಕೋವಿಡ್‌–19 ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್‌ ಬಂದಿದೆ. ಮಾವ ಅವರಲ್ಲೂ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಅಣ್ಣನನ್ನು, ಬುಧವಾರ ಹಾಸ್ಟೆಲ್‌ಗೆ ವರ್ಗಾಯಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಪರೋಕ್ಷವಾಗಿ ಸಂಪರ್ಕಕ್ಕೆ ಬಂದಿರುವ 23 ಮಂದಿಯನ್ನು ಗುರುತಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಯ ಮಾವ ಅವರ ಕುಟುಂಬವನ್ನೂ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತ ವ್ಯಕ್ತಿಯನ್ನು ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ವಾಹನದಲ್ಲಿ ಕರೆದೊಯ್ದ ಸಿಬ್ಬಂದಿ ಹಾಗೂ ಇತರರನ್ನು ಕ್ವಾರಂಟೈನ್‌ ಮಾಡಲಾಗಿಲ್ಲ. ಆದಷ್ಟೂ ಮನೆಯಲ್ಲೇ ಇರುವಂತೆ ಹಾಗೂ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಯಾರಲ್ಲೂ ರೋಗ ಲಕ್ಷಣ ಇಲ್ಲದಿರುವುದರಿಂದ ಆತಂಕ ಪಡಬೇಕಾಗಿಲ್ಲ’ ಎಂದು ಡಾ.ಎಂ.ಸಿ.ರವಿ ಅವರು ತಿಳಿಸಿದ್ದಾರೆ.

66 ಜನರ ವರದಿ ನೆಗೆಟಿವ್

ಕೋವಿಡ್‌–19 ಪರೀಕ್ಷೆಗಾಗಿ ಮಂಗಳವಾರ (ಜೂನ್ 9) ಕಳುಹಿಸಲಾಗಿದ್ದ 66 ಜನರ ಗಂಟಲಿನ ದ್ರವ ಮಾದರಿಗಳ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ.

ಬುಧವಾರ 46 ಜನರ ಗಂಟಲಿನ ದ್ರವ ಮಾದರಿಗಳನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಬಂದಿರುವ 58 ಜನರನ್ನು ವಿವಿಧ ಹಾಸ್ಟೆಲ್‍ಗಳಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT