ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಎಪಿಎಂಸಿ: ಅಧಿಕಾರಕ್ಕೇರಲು ಕಸರತ್ತು

ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ಗೆ ಕೊಂಚ ಹಿನ್ನಡೆ, ಬಿಜೆಪಿ ಅಧಿಕಾರಕ್ಕೆ ಖಚಿತ
Last Updated 21 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಎಪಿಎಂಸಿಗಳ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಮಿಶ್ರಫಲವನ್ನು ತಂದುಕೊಟ್ಟಿದೆ.

ಚಾಮರಾಜನಗರದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕಾಂಗ್ರೆಸ್‌ ಮರ್ಯಾದೆ ಉಳಿಸಿಕೊಂಡರೆ, ಗುಂಡ್ಲುಪೇಟೆಯಲ್ಲಿ ಬಿಜೆಪಿಯೊಂದಿಗೆ ಸಮಬಲ ಸಾಧಿಸಿದ್ದರೂ ಹಿನ್ನಡೆ ಅನುಭವಿಸಿದೆ. ಸರ್ಕಾರ ಮೂವರನ್ನು ನಾಮನಿರ್ದೇಶನ ಮಾಡುವುದರಿಂದ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವುದು ನಿಚ್ಚಳವಾಗಿದೆ.

ಚಾಮರಾಜನಗರದಲ್ಲಿ ಮಾತ್ರ ಅಧಿಕಾರ ಪಡೆಯಲು ಎರಡೂ ಪಕ್ಷಗಳು ಕಸರತ್ತು ನಡೆಸಬೇಕಾಗಿದೆ. ಎಪಿಎಂಸಿ ಆಡಳಿತ ಮಂಡಳಿ ಚುಕ್ಕಾಣಿ ಹಿಡಿಯಲು 9 ಸ್ಥಾನಗಳು ಬೇಕು. ಸದ್ಯ ಕಾಂಗ್ರೆಸ್‌ ಬಳಿ ಏಳು ಸದಸ್ಯರಿದ್ದಾರೆ. ಬಿಜೆಪಿ ಬಳಿ ನಾಲ್ಕು, ತೆಂಗು ಸಂಸ್ಕರಣ ಸಂಘದ ಪ್ರತಿನಿಧಿ ಸೇರಿ ಐವರು ಇದ್ದಾರೆ. ಸರ್ಕಾರ ನಾಮನಿರ್ದೇಶನ ಮಾಡುವ ಮೂರು ಸದಸ್ಯರನ್ನು ಸೇರಿಸಿದರೆ ಸದಸ್ಯರ ಸಂಖ್ಯೆ 8ಕ್ಕೆ ಏರಲಿದೆ.

ಅಧಿಕಾರಕ್ಕೆ ಏರಬೇಕಾದರೆ ಕಾಂಗ್ರೆಸ್‌ಗೆ ಇಬ್ಬರು ಹಾಗೂ ಬಿಜೆಪಿ ಒಬ್ಬರ ಬೆಂಬಲ ಬೇಕು. ಎರಡೂ ಪಕ್ಷಗಳ ಮುಖಂಡರು ಈಗಾಗಲೇ ತಂತ್ರ ಹೆಣೆಯುವುದರಲ್ಲಿ ನಿರತರಾಗಿದ್ದಾರೆ. ವರ್ತಕರ ಕ್ಷೇತ್ರದಿಂದ ಗೆದ್ದಿರುವ ವೆಂಕಟರಾವ್‌ ಅವರು ನಿರ್ಣಾಯಕ ಪಾತ್ರ ವಹಿಸಲಿದ್ದು, ಅವರನ್ನು ಸೆಳೆಯಲು ಮುಖಂಡರು ಯತ್ನಿಸುತ್ತಿದ್ದಾರೆ.

ಚಾಮರಾಜನಗರದಲ್ಲಿ 12 ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದಾರೆ. ಕಳೆದ ಬಾರಿ 9 ಸ್ಥಾನಗಳಲ್ಲಿ ಗೆದ್ದಿದ್ದರು. ಉಮ್ಮತ್ತೂರು ಕ್ಷೇತ್ರದಲ್ಲಿ ಕೇವಲ 2 ಮತಗಳಿಂದ ಸೋತಿದ್ದರೆ, ಅಮಚವಾಡಿಯಲ್ಲಿ 24 ಮತಗಳಿಂದ ಪರಾಭಾವಗೊಂಡಿದೆ.

‘ಈ ಎರಡೂ ಕ್ಷೇತ್ರಗಳನ್ನು ಗೆದ್ದಿದ್ದರೆ ನಾವೇ ಸುಲಭವಾಗಿ ಅಧಿಕಾರ ಹಿಡಿಯುತ್ತಿದ್ದೆವು’ ಎಂಬುದು ಕಾಂಗ್ರೆಸ್‌ ಮುಖಂಡ ಮಾತು.

ವಿಧಾನಸಭಾ ಕ್ಷೇತ್ರವಾರು ನೋಡಿದರೆ, ಎಪಿಎಂಸಿಯ ಹರವೆ ಕೃಷಿಕ ಕ್ಷೇತ್ರ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದಾರೆ. ಉಮ್ಮತ್ತೂರು, ಯಳಂದೂರು ಕಸಬಾ ಹಾಗೂ ಅಗರ ಕೃಷಿ ಕ್ಷೇತ್ರಗಳು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಎರಡಲ್ಲಿ ಕಾಂಗ್ರೆಸ್‌ ಗೆದ್ದಿದೆ.

‘ಸರ್ಕಾರ ಬಿಜೆಪಿಯದ್ದೇ ಇದೆ. ನಾಮನಿರ್ದೇಶಿತ ಸದಸ್ಯರು ಅವರ ಪಕ್ಷದವರೇ ಇರುತ್ತಾರೆ. ಹಾಗಿರುವಾಗ ಅಧಿಕಾರಕ್ಕೆ ಏರುವುದು ಸುಲಭ. ನಾವು ನಮ್ಮ ಬಹುತೇಕ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದೇವೆ. ಒಂದು ಕ್ಷೇತ್ರ ಎರಡು ಮತಗಳ ಅಂತರದಿಂದ ತಪ್ಪಿ ಹೋಗಿದೆ. ಎಪಿಎಂಸಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿಲ್ಲ’ ಎಂದು ಹೇಳುತ್ತಾರೆ ಕಾಂಗ್ರೆಸ್‌ ಮುಖಂಡರು.

ವರ್ತಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೊದಲು ಸುರೇಶ್‌ ಅವರಿಗೆ ಬೆಂಬಲ ಘೋಷಿಸಿತ್ತು. ಕೊನೆ ಕ್ಷಣದಲ್ಲಿ ಅದನ್ನು ವಾಪಸ್‌ ಪಡೆದು ವೆಂಕಟ್‌ರಾವ್‌ ಅವರಿಗೆ ಬೆಂಬಲ ನೀಡಿತ್ತು. ವೆಂಕಟರಾವ್‌ ಗೆದ್ದಿದ್ದು, ಅವರು ಪಕ್ಷಕ್ಕೆ ಬೆಂಬಲ ಕೊಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಮುಖಂಡರಿದ್ದಾರೆ.

ಸಂಘಟಿತರಾಗದ ಬಿಜೆಪಿ ಮುಖಂಡರು:ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಯೂ ಪಕ್ಷದ ಆಡಳಿತ ಇರುವುದರಿಂದ ಬಿಜೆಪಿಗೆ ಎರಡೂ ಕಡೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಸಿಕ್ಕಿದೆ. ಗುಂಡ್ಲುಪೇಟೆಯಲ್ಲಿ ಶಾಸಕ ನಿರಂಜನಕುಮಾರ್‌ ಅವರ ನಾಯಕತ್ವದಲ್ಲಿ ಸಂಘಟಿತರಾಗಿ ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಿದ್ದರೆ, ಚಾಮರಾಜನಗರದಲ್ಲಿ ನಾಯಕತ್ವ ವಿಚಾರದಲ್ಲಿ ಗೊಂದಲ ಇದ್ದಂತೆ ಕಂಡು ಬಂತು. ಬೆರಳೆಣಿಕೆಯ ಮುಖಂಡರಷ್ಟೆ ನಿಷ್ಠೆಯಿಂದ ಪ್ರಚಾರದಲ್ಲಿ ತೊಡಗಿದ್ದರು.

‘ಚಾಮರಾಜನಗರದಲ್ಲಿ ಬಿಜೆಪಿ ಹೆಚ್ಚು ಸಂಘಟಿತವಾಗಿ ಕೆಲಸ ಮಾಡಲಿಲ್ಲ. ಕೆಲವು ಮುಖಂಡರು ಪ್ರಚಾರಕ್ಕೆ ಚಾಲನೆ ನೀಡಿದರೇ ವಿನಾ, ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ. ಒಂದು ವೇಳೆ, ಸಂಘಟಿತರಾಗಿ ಕೆಲಸ ಮಾಡಿದ್ದರೆ ಇನ್ನೂ ಎರಡು ಮೂರು ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು’ ಎಂದು ಬೆಂಬಲಿತ ಅಭ್ಯರ್ಥಿಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

‘ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಬದನಗುಪ್ಪೆ ಹಾಗೂ ಹರದನಹಳ್ಳಿ ಕ್ಷೇತ್ರಗಳಲ್ಲಿ ಕ್ರಮವಾಗಿ 140 ಹಾಗೂ 115 ಮತಗಳ ಅಂತರದಿಂದ ಸೋತಿದ್ದಾರೆ. ಸ್ವಲ್ಪ ಹೆಚ್ಚು ಶ್ರಮ ಹಾಕಿದ್ದರೆ ಈ ಎರಡೂ ಕ್ಷೇತ್ರಗಳನ್ನು ಗೆದ್ದು, ಸುಲಭವಾಗಿ ಅಧಿಕಾರಕ್ಕೆ ಬರಬಹುದಿತ್ತು‘ ಎಂದು ಹೇಳುತ್ತಾರೆ ಕಾರ್ಯಕರ್ತರು.

ಗುಂಡ್ಲುಪೇಟೆಯಲ್ಲಿ ‘ಕೈ’ಕೊಟ್ಟ ಆತ್ಮವಿಶ್ವಾಸ

ಗುಂಡ್ಲುಪೇಟೆ ಎಪಿಎಂಸಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಇದುವರೆಗೆ ಕಾಂಗ್ರೆಸ್‌ ಬೆಂಬಲಿತರೇ ಅಲ್ಲಿ ಅಧಿಕಾರಕ್ಕೆ ಬಂದಿದ್ದಾರೆ.

ಮುಖಂಡ ಗಣೇಶ್‌ ಪ್ರಸಾದ್‌ ನಾಯಕತ್ವದಲ್ಲಿ ಅಲ್ಲಿ ಚುನಾವಣೆ ಎದುರಿಸಲಾಗಿತ್ತು. 12 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳನ್ನು ಮಾತ್ರ ಗೆಲ್ಲಲು ಕಾಂಗ್ರೆಸ್‌ ಬೆಂಬಲಿತರು ಯಶಸ್ವಿಯಾಗಿದ್ದಾರೆ.

ಕಬ್ಬಹಳ್ಳಿ ಹಾಗೂ ವರ್ತಕರ ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆಯನ್ನು ಮುಖಂಡರು ಇಟ್ಟುಕೊಂಡಿದ್ದರು. ಆದರೆ, ಅಲ್ಲಿ ಅಭ್ಯರ್ಥಿಗಳು ಸೋತಿದ್ದಾರೆ. ‘ಅತಿಯಾದ ಆತ್ಮವಿಶ್ವಾಸದಿಂದ ಸೋಲಾಗಿದೆ’ ಎಂದು ಗಣೇಶ್‌ ಪ್ರಸಾದ್‌ ಅವರೇ ಸ್ವತಃ ಒಪ್ಪಿಕೊಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಿಜೆಪಿ ಪ್ರಬಲವಾಗುತ್ತಿದ್ದು, ಎಪಿಎಂಸಿ ಚುನಾವಣೆಯಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಐದು ಕಡೆಗಳಲ್ಲಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಸೋತಿರುವ ಕ್ಷೇತ್ರಗಳಲ್ಲಿ ಮತಗಳ ಅಂತರ ಕಡಿಮೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT