ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಬಿರು ಬಿಸಿಲು: ಒಣಗಿದ ಕಾಡಿನ ಒಡಲು

ಬರಿದಾಗುತ್ತಿದೆ ಜೀವಜಲದ ಆವಾಸ: ಜೀವಜಗತ್ತಿನಲ್ಲಿ ತಲ್ಲಣ
Published 25 ಫೆಬ್ರುವರಿ 2024, 5:50 IST
Last Updated 25 ಫೆಬ್ರುವರಿ 2024, 5:50 IST
ಅಕ್ಷರ ಗಾತ್ರ

ಯಳಂದೂರು: ಬಿರು ಬಿಸಿಲು ನೆಲ, ಜಲ, ಜೀವ ಜಗತ್ತಿಗೂ ಬಿಸಿ ಮುಟ್ಟಿಸಿದೆ. ಕಾಡು-ನಾಡು ಎನ್ನದೆ ಎಲ್ಲೆಡೆಯೂ ತಾಪ ತಾಗುತ್ತಿದೆ. ನದಿ ಬರಿದಾಗಿದೆ. ಕೆರೆ, ಕಾಲುವೆ ತಳ ಮುಟ್ಟಿದೆ. ಬನದಲ್ಲೂ ಜೀವಜಲ ಕುಸಿಯುತ್ತಿದೆ. ಪರಿಸರದ ಗತಿಸ್ಥಿತಿಯೂ ಬದಲಾಗುತ್ತಿದೆ. ಸದಾ ಹಸಿರಿನಿಂದ ತುಂಬಿದ್ದ ಅಡವಿಯ ಜೀವನಾಡಿ ವೃಕ್ಷಗಳು ಬಹು ಬೇಗ ಎಲೆ ಉದುರಿಸಿದೆ. ಉಷ್ಣಾಂಶ ಏರಿಕೆಯ ಪರಿಣಾಮ ವೃಕ್ಷ ಕಪ್ಪಾಗಿ ವನ್ಯ ಜೀವಿಗಳ ಆವಾಸದಲ್ಲೂ ತಲ್ಲಣ ಉಂಟು ಮಾಡಿದೆ.  

ತಾಲ್ಲೂಕಿನ ಬಿಳಿಗಿರಿಯ ಶೃಂಗ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಗಮ. ಸದಾ ಜೀವ ತಳೆಯುವ ಹಲವು ನದಿ, ಜಲಮೂಲಗಳಿಗೆ ಜನ್ಮ ನೀಡುತ್ತದೆ. ಸಣ್ಣ ಹೊಳೆ, ಹಳ್ಳ, ಕೊಳ್ಳ, ನಾಲೆ, ಝರಿ, ಚಿಲುಮೆ, ಬುಗ್ಗೆ, ಭಾರ್ಗವಿ ನದಿಯ ಹರಿಯುವ ಜೀವಂತಿಕೆ ನಿನಾದ ನಿಂತಿದೆ. ಪುಟ್ಟ ಜಲಾವರಗಳಲ್ಲಿ ಅಲ್ಪಸ್ವಲ್ಪ ನೀರು ಬರಿದಾಗುವ ಮಟ್ಟ ತಲುಪಿದೆ. ಕಳೆದ ಬಾರಿ ಕೋಡಿ ಬಿದ್ದಿದ್ದ ಕಾಡಂಚಿನ ಡ್ಯಾಂಗಳಲ್ಲಿ ಮಾತ್ರ ನೀರು ಉಳಿದಿದೆ.

‘ಕಳೆದ ಮುಂಗಾರು ಋತುವಿನಲ್ಲಿ ವಾಡಿಕೆಯಂತೆ ವರ್ಷಧಾರೆ ಆಗಿದ್ದರೆ, ಗಿಡ ಮರಗಳಲ್ಲಿ ಹಸಿರು ಲಾಸ್ಯ ಆಡುತ್ತಿತ್ತು. ವನ್ಯ ಜೀವಿಗಳು ಅಭಯಾರಣ್ಯದ ಜಲಾವರಗಳಲ್ಲಿ ಸುಳಿದಾಡುತ್ತಿದ್ದವು. ಆದರೆ, ಅಣೆಕಟ್ಟೆ ಬಿಟ್ಟು, ಬಹುತೇಕ ಕೆರೆ, ಕಟ್ಟೆಗಳಲ್ಲಿ ಕೆಸರು ಕಾಣಿಸಿಕೊಂಡಿದ್ದು, ನೀರು ಪಾಚಿ ಬಣ್ಣಕ್ಕೆ ತಿರುಗುತ್ತಿದೆ. ಉಷ್ಣ ವಲಯದ ಕಾನು ವೃಕ್ಷಗಳು ಒಣಗುತ್ತಿದೆ. ಬಿಸಿಲಿನ ಝಳ ಇದೇ ರೀತಿ ಮುಂದುವರಿದಲ್ಲಿ ಜಲಾವೃತ ಪ್ರದೇಶ ಬಿರುಕು ಬಿಡಲಿದೆ. ಕಾಡು ಕಪ್ಪಾಗಿ, ನೀರು ಇಡಿದಿಟ್ಟುಕೊಳ್ಳವ ಸಾಮರ್ಥ್ಯ ಕಳೆದುಕೊಳ್ಳಲಿದೆ’ ಎನ್ನುತ್ತಾರೆ ಏಟ್ರೀ ಕ್ಷೇತ್ರಪಾಲಕ ಜಡೇಸ್ವಾಮಿ.

ಕಾಫಿ ಬೆಳೆಗಾರರಿಗೂ ಸಂಕಷ್ಟ: ನದಿ, ಕೆರೆಗಳಲ್ಲಿ ನೀರು ಬರಿದಾದರೆ ಅಂತರ್ಜಲ ಪಾತಾಳಕ್ಕೆ ಇಳಿಯಲಿದೆ. ಪೋಡಿನ ಸುತ್ತಮುತ್ತ ಬೆಳೆಸಿರುವ ಕಾಫಿ. ಮೆಣಸು, ಏಲಕ್ಕಿ ತೋಟಗಳು ಒಣಗುತ್ತವೆ. ಪೋಡಿನ ಕೃಷಿಕರು ತೋಟ ಉಳಿಸಿಕೊಳ್ಳವುದು ಸವಾಲಾಗಲಿದೆ. ನೈಸರ್ಗಿಕವಾಗಿ ಬೆಳೆಯುವ ಕಿತ್ತಳೆ, ಚಕ್ಕೋತ, ನೆಲ್ಲಿ, ಸೀಗೆ ಮೊದಲಾದ ವನ ಸಂಪತ್ತು ಕಡಿಮೆಯಾಗಲಿದೆ. ಶ್ರಮಿಕರಿಗೂ ಉದ್ಯೋಗ ಸಿಗದ ಆತಂಕವೂ ಇದೆ’ ಎನ್ನುತ್ತಾರೆ ಬಿಳಿಗಿರಿಬೆಟ್ಟದ ಬೊಮ್ಮಯ್ಯ.

ಬತ್ತುತ್ತಿರುವ ಕೆರೆ ಬದಿ ಆನೆಗಳು ದಾಹ ನೀಗಿಸಿಕೊಂಡು ವನಧಾಮದತ್ತ ಹೆಜ್ಜೆ ಇಟ್ಟ ಕ್ಷಣ
ಬತ್ತುತ್ತಿರುವ ಕೆರೆ ಬದಿ ಆನೆಗಳು ದಾಹ ನೀಗಿಸಿಕೊಂಡು ವನಧಾಮದತ್ತ ಹೆಜ್ಜೆ ಇಟ್ಟ ಕ್ಷಣ

ಮಳೆ ಕೊರತೆ;ಬೇಗ ಒಣಗಿದ ಗಿಡ ಮರ ಹರಿವು ನಿಲ್ಲಿಸಿದ ತೊರೆ, ಹಳ್ಳಗಳು ಜಲಮೂಲಗಳಲ್ಲೂ ಕುಸಿದ ನೀರಿನ ಮಟ್ಟ

ಕಳೆ ಕಳೆದುಕೊಂಡ ಕಾನನ

ನೈರುತ್ಯ ಮತ್ತು ಈಶಾನ್ಯ ಮಾರುತ ಎರಡರಿಂದಲೂ ಬಿಆರ್‌ಟಿ ಮಳೆ ಪಡೆಯುತ್ತದೆ. ವಾರ್ಷಿಕ 250 ಮಿ.ಮೀಟರ್ ಮಳೆ ಸುರಿದರೆ ವನ ವೈವಿಧ್ಯ ಅರಳುತ್ತದೆ. ಮರ ಗಿಡಗಳು ನೀರಿನ ಕಣಗಳನ್ನು ಹಿಡಿದಿಟ್ಟು ಬೇಸಿಗೆಯಲ್ಲೂ ನಳನಳಿಸುತ್ತವೆ. ‘ಬಿಆರ್‌ಟಿ ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದ ಸರಿಯಾಗಿ ಮಳೆ ಕಾಣಿಸಿಕೊಂಡಿಲ್ಲ. ತಾಪವೂ 10 ಡಿಗ್ರಿ ಸೆಲ್ಸಿಯಸ್‌ನಿಂದ 39 ಡಿಗ್ರಿ ತನಕ ವ್ಯತ್ಯಯವಾಗುತ್ತಿದೆ. ಈ ಬಾರಿ ಏಪ್ರಿಲ್‌ಗೂ ಮುನ್ನವೇ ಬಿರು ಬೇಸಿಗೆಗೆ ಕಾಡು ನಲುಗಿದೆ. ಐದಾರು ಸಾವಿರ ಅಡಿ ಎತ್ತರದ ಬೆಟ್ಟ ಗುಡ್ಡಗಳಿಂದ ಜಿನುಗುತ್ತಿದ್ದ ಒರತೆಯೂ ಬತ್ತಿದೆ. ಹಾಗಾಗಿ ಅರಣ್ಯ ಈಗ ಕಳಾಹೀನವಾಗಿದೆ’ ಎಂದು ಹೇಳುತ್ತಾರೆ ಪರಿಸರ ಪ್ರೇಮಿಗಳು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT