ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಬಾಲಕಿಯನ್ನು ಚುಡಾಯಿಸಿದ ಇಬ್ಬರು, ಸಹಕಾರ ನೀಡಿದ ವ್ಯಕ್ತಿಗೆ ಶಿಕ್ಷೆ

Last Updated 11 ಫೆಬ್ರುವರಿ 2021, 14:39 IST
ಅಕ್ಷರ ಗಾತ್ರ

ಚಾಮರಾಜನಗರ: ಶಾಲಾ ಬಾಲಕಿಯನ್ನು ಹಿಂಬಾಲಿಸಿ ಆಕೆಯನ್ನು ರೇಗಿಸಿದ ಇಬ್ಬರು ಯುವಕರಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ ಕೃತ್ಯಕ್ಕೆ ಸಹಕಾರ ನೀಡಿದಕ್ಕಾಗಿ ಒಬ್ಬ ಯುವಕನ ತಂದೆಗೆ ಒಂದು ವರ್ಷ ಜೈಲು ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ನಾಗೇಂದ್ರ (21), ಆನಂದ (20) ಹಾಗೂ ಆನಂದನ ತಂದೆ ಮಾದಪ್ಪ ಅವರು ಶಿಕ್ಷೆಗೆ ಗುರಿಯಾದವರು. 2018ರ ಮಾರ್ಚ್‌ 30ರಂದು ಹನೂರು ತಾಲ್ಲೂಕಿನ ರಾಮಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.

ಬಾಲಕಿಯು ಶಾಲೆಯಿಂದ ವಾಪಸ್‌ ಆಗುತ್ತಿದ್ದ ವೇಳೆ ನಾಗೇಂದ್ರ ಮತ್ತು ಆನಂದ ಅವರು ದ್ವಿಚಕ್ರ ವಾಹನದಲ್ಲಿ ಬಾಲಕಿಯನ್ನು ಹಿಂಬಾಲಿಸುತ್ತಾ, ಆಕೆಯ ಮನೆಯ ಮುಂದೆ ಚುಡಾಯಿಸಿದ್ದರು. ಆಕೆ ಕೂಗಾಡಿದಾಗ ನೆರೆ ಹೊರೆಯವರು ರಕ್ಷಣೆಗೆ ಧಾವಿಸಿದ್ದರು. ಅಷ್ಟರಲ್ಲೇ ಇಬ್ಬರೂ ಯುವಕರು ವಾಹನವನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದರು.

ಮರುದಿನ ಬೆಳಗ್ಗೆ ಆನಂದನ ತಂದೆ ಮಾದಪ್ಪ ಅವರು ಬಾಲಕಿ ಹಾಗೂ ಆಕೆಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದರು. ಈ ಸಂಬಂಧ, ರಾಮಾಪುರ ಪೊಲೀಸ್‌ ಠಾಣೆಯಲ್ಲಿ ಪೊಕ್ಸೊ ಅಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಮೂವರ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಿದ್ದರು.

ಆರೋಪಗಳು ಸಾಬೀತಾಗಿರುವುದರಿಂದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಮೂವರನ್ನೂ ತಪ್ಪಿತಸ್ಥರು ಎಂದು ಘೋಷಿಸಿದ್ದು, ಯುವಕರಿಗೆ ತಲಾ ಆರು ತಿಂಗಳು ಕಾರಾಗೃಹ ಶಿಕ್ಷೆ ಹಾಗೂ ತಲಾ ₹6,000 ದಂಡ ವಿಧಿಸಿ ಬುಧವಾರ ಆದೇಶಿಸಿದ್ದಾರೆ.

ಕೃತ್ಯ ಎಸಗಲು ಮಗನಿಗೆ ಪರೋಕ್ಷವಾಗಿ ಸಹಕರಿಸಿದ ಕಾರಣಕ್ಕೆಆನಂದನ ತಂದೆ ಮಾದಪ್ಪ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಮೂವರೂ ಕಟ್ಟುವ ದಂಡವನ್ನು ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ ನೀಡಬೇಕು ಎಂದೂ ಅವರು ಆದೇಶದಲ್ಲಿ ಹೇಳಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಯೋಗೇಶ್‌ ಅವರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT