ಸೋಮವಾರ, ಸೆಪ್ಟೆಂಬರ್ 26, 2022
20 °C
ಯಳಂದೂರು: ಪ್ರವಾಸ ವೈವಿಧ್ಯಕ್ಕೆ ಹತ್ತಾರು ಸಾಂಸ್ಕೃತಿಕ ಮುಖ

ಯಳಂದೂರು: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಪ್ರವಾಸೋದ್ಯಮ!

ನಾ.ಮಂಜುನಾಥಸ್ವಾಮಿ‌ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಪ್ರಸಿದ್ಧ ಧಾರ್ಮಿಕ ತಾಣ, ಚಾರಿತ್ರಿಕ ಪಂಚಲಿಂಗಗಳ ಪ್ರಾಂಗಣ, ಕಲೆ, ಸಂಸ್ಕೃತಿ, ಸೊಗಡಿನ ಬಲೆಯಲ್ಲಿ ಅರಳಿದ ಬಳೆ ಮಂಟಪ, ಸುಂದರ ಘಟ್ಟಗಳ ಸಾಲು, ಐತಿಹಾಸಿಕ ಪೂರ್ಣಯ್ಯ ಬಂಗಲೆಗಳು, ನದಿ, ತೊರೆ, ಝರಿ, ಜೀವ ವೈವಿಧ್ಯದ ಬನದ ಸಾಲು, ಕೆರೆ, ಅಣೆಕಟ್ಟೆಗಳ ಪ್ರಾಕೃತಿಕ ಸೌಂದರ್ಯ ಹೀಗೆ... ಒಂದೇ ಎರಡೇ!

ರಮಣೀಯ ನಿಸರ್ಗ ಸಿರಿಯ ಗಿರಿ ಶಿಖರಗಳು, ಐತಿಹಾಸಿಕ ಸ್ಥಳಗಳನ್ನು ಹೊಂದಿ, ಕವಿ, ಕಲಾವಿದರ ಬೆಚ್ಚನೆಯ ನೆನಪಿನ ಮೆರವಣಿಗೆಯಲ್ಲಿ ಮೈದುಂಬಿಕೊಂಡು ನಳನಳಿಸುತ್ತಿದೆ ಯಳಂದೂರು ತಾಲ್ಲೂಕು.

ಆದರೆ, ಇಲ್ಲಿ ಪ್ರವಾಸೋದ್ಯಮ ಮಾತ್ರ ಹೇಳಿಕೊಳ್ಳುವಂತಿಲ್ಲ. ಅಭಿವೃದ್ಧಿಗೆ ಸಿಗಬೇಕಾದ ಮನ್ನಣೆ ಈವರೆಗೆ ದಕ್ಕಿಲ್ಲ. ಪರಿಣಾಮ ಎಲ್ಲವೂ ಇದ್ದು, ಏನೂ ಇಲ್ಲದಂತೆ ಭಾಸವಾಗುತ್ತಿದೆ ತಾಲ್ಲೂಕಿನ ಸುಂದರ ಪರಿಸರ.

ಜಿಲ್ಲೆಯ ಏಕೈಕ ವಸ್ತು ಸಂಗ್ರಹಾಲಯ ಜಹಗೀರ್ದಾರ್ ಬಂಗಲೆ ಪಟ್ಟಣದಲ್ಲಿದೆ. ಇದಕ್ಕೆ ಹೊಂದಿಕೊಂಡಂತೆ ಚರಿತ್ರೆ ಬಿಂಬಿಸುವ ಶಾಸನ ಮತ್ತು ಕಲೆಯ ವೈಭವ ಮನವನ್ನು ಅರಳಿಸುತ್ತದೆ. ಷಡಕ್ಷರ ದೇವರ ಗದ್ದುಗೆ ಕೂಗಳತೆ ದೂರದಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಚೋಳ, ಗಂಗಾ, ಹದಿನಾಡು, ಪಾಳೇಗಾರ ಹಾಗೂ ವಿಜಯನಗರದ ಅರಸರ ದೇವಾಲಯ ಹಾಗೂ ಬೇರೆಲ್ಲೂ ಕಾಣಸಿಗದ ಬಿಆರ್‌ಟಿ ವನ್ಯಧಾಮದ ಸಾಲು... ದಿನಪೂರ್ತಿ ನೋಡಿ ನಲಿಯುವ ತಾಣಗಳು.

ಪರಿಸರ ಪ್ರವಾಸೋದ್ಯಮ, ಜಲ ಸಂಚಾರ, ಸಫಾರಿ ಮತ್ತು ಧಾರ್ಮಿಕ ಪ್ರವಾಸೋದ್ಯ‌ಮ ಸೇರಿ ಹತ್ತು ಹಲವು ಆಯಾಮಗಳಲ್ಲಿ ಪ್ರವಾಸ ಮಾಡಲು ವಿಪುಲ ಅವಕಾಶ ತಾಲ್ಲೂಕಿಗೆ ವರ ಪ್ರಸಾದವಾಗಿದೆ. ಆದರೂ, ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯಲು ಈ ಪ್ರದೇಶಗಳು ವಿಫಲವಾಗಿವೆ.

ದೇಶ, ವಿದೇಶದ ಪ್ರವಾಸಿಗರನ್ನು ಸೆಳೆಯುವ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಿಲ್ಲ ಎಂಬ ಕೊರಗು ಸ್ಥಳೀಯರದ್ದು.

ಶೈವ ಮತ್ತು ಜೈನ ಸ್ಥಳ ಅನಾಥ: ‘ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ಅದರದ್ದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಪಾಳೆಗಾರರು ಕಟ್ಟಿದ ಗ್ರಾಮಗಳಿವೆ. ಯಳಂದೂರು ಮತ್ತು ಯರಗಂಬಳ್ಳಿಯಲ್ಲಿ ಷಡಕ್ಷರ ಮತ್ತು ಮುಪ್ಪಿನ ಷಡಕ್ಷರರು ನೆಲೆಸಿದ್ದ ಸ್ಥಳಗಳು ಅನಾಥವಾಗಿವೆ. ಜಿಲ್ಲೆಯ ಏಕೈಕ ವಸ್ತು ಸಂಗ್ರಹಾಲಯದಲ್ಲಿ ವಿದ್ಯಾರ್ಥಿ ಮತ್ತು ಆಸಕ್ತರ ಆಕರ್ಷಣೆ ಹೆಚ್ಚಿಸುವ ಕೆಲಸ ನಡೆದಿಲ್ಲ. ಜಪದಕಟ್ಟೆ, ಜೈನ ಮತ್ತು ಶೈವ ಕೇಂದ್ರಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಹಾಗಾಗಿ, ಬಿಳಿಗಿರಿ ರಂಗನಬೆಟ್ಟ ಮತ್ತು ತಾಲ್ಲೂಕು ಕೇಂದ್ರಗಳ ಬಂಗಲೆಗಳನ್ನು ಮತ್ತು ಬ್ರಿಟಿಷರು ಶಿಕಾರಿ ಮಾಡಿದ್ದ ಸ್ಥಳ ವೈಭವಗಳನ್ನು ತಿಳಿಸಿಕೊಡುವ ಬಗ್ಗೆ ಜಿಲ್ಲಾಡಳಿತ ರಜತ ಮಹೋತ್ಸವ ಸಂದರ್ಭದಲ್ಲಿ ಕ್ರಮ ವಹಿಸಲಿ’ ಎಂದು ಬರಹಗಾರ ಕೆಸ್ತೂರು ಪ್ರಸನ್ನ ಒತ್ತಾಯಿಸಿದರು.

ನೋಡ ಬನ್ನಿ ಪಕ್ಷಿ ಕಾಶಿ: ‘ಬಿಆರ್‌ಟಿ ಅರಣ್ಯದಲ್ಲಿ 200ಕ್ಕೂ ಹೆಚ್ಚು ಪಕ್ಷಿಗಳಿವೆ. ಕರಡಿ, ಚಿರತೆಗಳ ನೆಲೆ, ನವಿಲು, ಕಮಲ, ವ್ಯಾಘ್ರಗಳ ಆವಾಸವಾಗಿದೆ. ಸುಂದರ ಸರೋವರಗಳ ನಿಸರ್ಗ ತಾಣ. ಜೀವ ವೈವಿಧ್ಯತೆ, ಔಷಧೀಯ ಗಿಡಗಳ ಆಗರ. ಅನಾದಿ ಕಾಲದ ಶಿಲಾ ಸಮಾಧಿಗಳ ಸಂಗಮ ಸ್ಥಳ... ಹೀಗೆ ತಾಲ್ಲೂಕಿನ ಪ್ರವಾಸ ವೈವಿಧ್ಯಕ್ಕೆ ಹತ್ತಾರು ಮುಖಗಳಿವೆ. ಗ್ರಾಮೀಣ ಜನರ ಜನಪದ, ಸೋಲಿಗರ ಹಾಡು, ಹಸೆ, ಕುಣಿತವನ್ನು ಒಂದೇ ಮೂಸೆಯಲ್ಲಿ ಕಟ್ಟಿಕೊಡಬಹುದು. ಒಂದೆರಡು ದಿನಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ಪ್ರಾಕೃತಿಕ ಸೊಬಗಿನ ಹಿನ್ನೆಲೆ ಇರುವ ಜಿಲ್ಲೆಯ ಏಕೈಕ ತಾಣವೂ ಹೌದು’ ಎನ್ನುತ್ತಾರೆ ಸೋಲಿಗ ಮುಖಂಡ ಮಾದೇಗೌಡ.

ಐತಿಹಾಸಿಕ ತಾಣ ಪರಿಚಯಿಸಿ
ಯಳಂದೂರು, ಯರಿಯೂರು, ಮದ್ದೂರು, ಅಗರ ಹಾಗೂ ಮಾಂಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಾರು ಐತಿಹಾಸಿಕ ತಾಣಗಳಿವೆ. ಸಾವಿರಾರು ವರ್ಷದ ಶಿಲ್ಪಕಲ್ಪಗಳನ್ನು ಪ್ರವಾಸಿಗರಿಗೆ ತೆರೆದಿಡುವ ಪ್ರಯತ್ನ ಆಗಬೇಕು. ಮೈಸೂರು ಅರಸರ ಜೊತೆಗಿನ ರಾಜ ಸಂಬಂಧಗಳ ಜೊತೆ ಬದುಕಿ ಬಾಳಿದ ಅಗರಂ ರಂಗಯ್ಯ, ಸಂಸ ಹಾಗೂ ಕವಯತ್ರಿಯರು ಬಾಳಿ ಬದುಕಿದ್ದ ಸ್ಥಳಗಳನ್ನು ಪರಿಚಿಯಿಸುವ ಕೆಲಸ ತುರ್ತಾಗಿ ಆಗಬೇಕಿದೆ.
–ಶಾಂತಮೂರ್ತಿ, ಅಧ್ಯಾಪಕ, ಮಾಂಬಳ್ಳಿ

*

ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ
ತಾಲ್ಲೂಕಿನ ಪೂರ್ವದ ಶೇ 20ರಷ್ಟು ಭಾಗವನ್ನು ಬಿಳಿಗಿರಿಬನ ಆವರಿಸಿದೆ. ರಂಗನಾಥನ ದೇವಳವನ್ನು ಕೇಂದ್ರವಾಗಿಸಿ, ಪರಿಸರ, ವನ್ಯಜೀವಿ ಹಾಗೂ ಜಲ ತಾಣಗಳನ್ನು ಪರಿಸರ ಪ್ರವಾಸೋದ್ಯಮಕ್ಕೆ ಒಳಪಡಿಸಬಹುದು. ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಿರುವ ಸಾಂಸ್ಕೃತಿಕ ವೈವಿಧ್ಯವನ್ನು ಪ್ರವಾಸಿಗರಿಗೆ ಕಟ್ಟಿಕೊಡುವ ಬಗ್ಗೆ ಯೋಜನೆ ರೂಪಿಸಬೇಕು.
–ವಿನಯ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ, ಯಳಂದೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು