ಭಾನುವಾರ, ಆಗಸ್ಟ್ 1, 2021
26 °C
ಬದಲಾಗದ ಸ್ಥಾನ, ವಿದ್ಯಾರ್ಥಿನಿಯರು, ನಗರ ಪ್ರದೇಶ ವಿದ್ಯಾರ್ಥಿಗಳ ಮೇಲುಗೈ

ದ್ವಿತೀಯ ಪಿಯು ಫಲಿತಾಂಶ: ಜಿಲ್ಲೆಗೆ 12ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: 2019–20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಗಡಿ ಜಿಲ್ಲೆ ಚಾಮರಾಜನಗರ ಈ ವರ್ಷವೂ 12ನೇ ಸ್ಥಾನ ಗಳಿಸಿದೆ. ಶೇ 69.29 ಫಲಿತಾಂಶ ದಾಖಲಾಗಿದೆ. 

ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 72.67) ಈ ವರ್ಷ ಶೇಕಡವಾರು ಫಲಿತಾಂಶದಲ್ಲಿ ಕುಸಿತವಾಗಿದೆ. 5,686 ವಿದ್ಯಾರ್ಥಿಗಳು (ಖಾಸಗಿ, ಪುನರಾವರ್ತಿತರನ್ನು ಬಿಟ್ಟು) ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 3,940 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ವಿದ್ಯಾರ್ಥಿನಿಯರ ಮೇಲುಗೈ: ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರಲ್ಲಿ ಶೇ 69.57ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ. ಶೇ 52.84ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಪರೀಕ್ಷೆ ಬರೆದ 3,674 ಹೆಣ್ಣುಮಕ್ಕಳ ಪೈಕಿ 2,556 ಹಾಗೂ 3,119 ಗಂಡು ಮಕ್ಕಳ ಪೈಕಿ 1,648 ಮಂದಿ ಉತ್ತೀರ್ಣರಾಗಿದ್ದಾರೆ. 

ಕಲಾವಿಭಾಗದಲ್ಲಿ ಕುಸಿದ ಫಲಿತಾಂಶ: ವಿಭಾಗವಾರು ಫಲಿತಾಂಶವನ್ನು ಪರಿಶೀಲಿಸಿದರೆ, ಕಲಾವಿಭಾಗದ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 2,329 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,857 ಮಂದಿ ಉತ್ತೀರ್ಣರಾಗಿ ಶೇ 79.73ರಷ್ಟು ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 1,266 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 960 ಮಂದಿ ಪಾಸಾಗಿ, ಶೇ 75.83ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದ 2,091 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, 1,123 ಮಂದಿಯಷ್ಟೇ ಉತ್ತೀರ್ಣರಾಗಿದ್ದಾರೆ. ಶೇಕಡವಾರು 53.71ರಷ್ಟು ಫಲಿತಾಂಶ ಬಂದಿದೆ. 

ನಗರ ಪ್ರದೇಶದವರು ಮುಂದು: ನಗರ ಪ್ರದೇಶದಲ್ಲಿ ಶೇ 71.31 ಫಲಿತಾಂಶ ಬಂದಿದೆ. 3,876ರ ವಿದ್ಯಾರ್ಥಿಗಳ ಪೈಕಿ 2,764 ಮಂದಿ ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಪ್ರದೇಶದ 1,810 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,176 ಮಂದಿ ಉತ್ತೀರ್ಣರಾಗಿ ಶೇ 64.97 ಫಲಿತಾಂಶ ದಾಖಲಾಗಿದೆ. 

‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇಕಡವಾರು ಫಲಿತಾಂಶದಲ್ಲಿ ಕೊಂಚ ಇಳಿಕೆಯಾಗಿದೆ. ಕಲಾ ವಿಭಾಗದಲ್ಲಿ ಫಲಿತಾಂಶ ಕಡಿಮೆ ಬಂದಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಸ್‌.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಖಾಸಗಿ, ಪುನರಾವರ್ತಿತರ ಫಲಿತಾಂಶವೂ ಕಡಿಮೆ

ಜಿಲ್ಲೆಯಲ್ಲಿ ಖಾಸಗಿಯಾಗಿ 257 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 57 ಮಂದಿಯಷ್ಟೇ ತೇರ್ಗಡೆಯಾಗಿದ್ದಾರೆ. ಶೇ 22.18 ಫಲಿತಾಂಶ ಬಂದಿದೆ. 

850 ಮಂದಿ ಪುನರಾವರ್ತಿತರರು ಪರೀಕ್ಷೆ ಬರೆದಿದ್ದು, 207 ಜನ ಉತ್ತೀರ್ಣರಾಗಿದ್ದಾರೆ. ಶೇ 24.35ರಷ್ಟು ಫಲಿತಾಂಶ ಬಂದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು