ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ತಲೆ ಎತ್ತಲಿದೆ ಬೃಹತ್‌ ಬುದ್ಧನ ಪ್ರತಿಮೆ

ಒಡೆಯರಪಾಳ್ಯ: ಟಿಬೆಟನ್ನರ ನಿರಾಶ್ರಿತರ ಶಿಬಿರದಲ್ಲಿ ಪ್ರತಿಷ್ಠಾಪನೆ
Published 2 ಜುಲೈ 2023, 3:59 IST
Last Updated 2 ಜುಲೈ 2023, 3:59 IST
ಅಕ್ಷರ ಗಾತ್ರ

ಹನೂರು: ತಾಲೂಕಿನ ಒಡೆಯರಪಾಳ್ಯ ಸಮೀಪವಿರುವ ಟಿಬೆಟನ್ನರ ನಿರಾಶ್ರಿತರ ಶಿಬಿರದಲ್ಲಿ 113 ಅಡಿ ಧ್ಯಾನಸ್ಥ ಬುದ್ಧನ ಪ್ರತಿಮೆ ತಲೆ ಎತ್ತಲಿದೆ. 

ಟಿಬೆಟಿಯನ್ ಸಮುದಾಯದ ವತಿಯಿಂದ ಇದನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಅಡಿಪಾಯ ಹಾಕಲಾಗಿದೆ. ಧ್ಯಾನಸ್ಥ ಬುದ್ಧನ ಪ್ರತಿಮೆಯನ್ನು ಭೂತಾನ್‌ನಲ್ಲಿ ತಯಾರಿಸಿ ಇಲ್ಲಿಗೆ ತಂದು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ಐದು ದಶಕಗಳ ಹಿಂದೆ ಟಿಬೆಟ್‌ನಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದವರಿಗೆ ರಾಜ್ಯದ ಮುಂಡಗೋಡು, ಬೈಲುಗುಪ್ಪೆ ಹಾಗೂ ಒಡೆಯರಪಾಳ್ಯ ಬಳಿ ಸ್ಥಳ ನೀಡಿ ಶಿಬಿರ ನಿರ್ಮಿಸಲಾಗಿತ್ತು.  ಅಂದಿನಿಂದ ತಮ್ಮ ಸಂಸ್ಕೃತಿ ಜತೆಗೆ ರಾಜ್ಯದ ಆಚಾರ ವಿಚಾರಗಳಲ್ಲೂ ಭಾಗಿಯಾಗುವ ಮೂಲಕ ಟಿಬೆಟನ್ನರು ಸ್ಥಳೀಯರೊಂದಿಗೆ ಸೌರ್ಹಾರ್ದಯುವಾಗಿ ಬದುಕು ಸಾಗಿಸುತ್ತಿದ್ದಾರೆ.

₹6 ಕೋಟಿ ವೆಚ್ಚ: ಶಿಬಿರದಲ್ಲಿರುವ ಬುದ್ಧ ಮಂದಿರದ ಬಳಿ ಬುದ್ಧನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಿದ್ಧತೆ ಮಾಡಲಾಗಿದೆ.

‘ತಾಮ್ರದಿಂದ ಪ್ರತಿಮೆಯನ್ನು ತಯಾರಿಸಲಾಗುತ್ತದೆ. ನಂತರ ಅದಕ್ಕೆ ಚಿನ್ನದ ಬಣ್ಣದ ಲೇಪನ ಮಾಡಲಾಗುತ್ತದೆ.  ಪ್ರತಿಮೆಯ ಭಾಗಗಳನ್ನು ಬಿಡಿ ಬಿಡಿಯಾಗಿ ತಯಾರಿಸಿ, ಇಲ್ಲಿ ಜೋಡಿಸಲಾಗುತ್ತದೆ. ಪ್ರತಿಮೆಯನ್ನು ಭೂತಾನ್‌ನಿಂದ ತರಿಸಲಾಗುತ್ತಿದೆ. ಅಂದಾಜು ₹6 ಕೋಟಿಯಷ್ಟು ವೆಚ್ಚವಾಗಲಿದೆ’ ಎಂದು ಹೇಳುತ್ತಾರೆ ಶಿಬಿರದ ಅಧಿಕಾರಿಗಳು.

ಪ್ರವಾಸಿ ತಾಣ: ಒಡೆಯರಪಾಳ್ಯ ಬಳಿ ಇರುವ ನಿರಾಶ್ರಿತರ ಶಿಬಿರವು ಈಗ ಬೈಲುಗುಪ್ಪೆ, ಮುಂಡಗೋಡು ಮಾದರಿಯಲ್ಲಿ ಪ್ರವಾಸಿ ತಾಣವಾಗಿ ರೂಪುಗೊಂಡಿದೆ.

ಬಿಳಿಗಿರಿರಂಗನಾಥ ಸ್ವಾಮಿ ಹುಲಿರಕ್ಷಿತಾಣ್ಯಕ್ಕೆ ಹೊಂದಿಕೊಂಡಿರುವ ಈ ಶಿಬಿರವು ಸುತ್ತಲೂ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು, ಸುಂದರ ಪರಿಸರದ ನಡುವೆ ಇದೆ. ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳ ಜನರನ್ನೂ ಆಕರ್ಷಿಸುತ್ತಿದೆ. ಇಲ್ಲಿರುವ ಬುದ್ಧ ಮಂದಿರಗಳಲ್ಲಿ ಬಾಲ ಬೌದ್ಧ ಬಿಕ್ಕುಗಳು ಬರುವ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಾರೆ.

ಐದು ಬೌದ್ಧ ದೇವಾಲಯಗಳಿದ್ದು, ಪ್ರತಿಯೊಂದು ಮಂದಿರದಲ್ಲೂ ಬುದ್ಧನ ಮೂರ್ತಿಗಳಿವೆ. ಬರುವ ಪ್ರವಾಸಿಗರು ಮೂರ್ತಿಗಳ ಮುಂದೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾರೆ. ವಾರಾಂತ್ಯದಲ್ಲಿ ಕುಟುಂಬ ಸಮೇತ ಭೇಟಿ ನೀಡುವ ಪ್ರವಾಸಿಗರು ದಿನವಿಡೀ ಶಿಬಿರದಲ್ಲಿರುವ ಬುದ್ಧ ಮಂದಿರಗಳಿಗೆ ಭೇಟಿ ನೀಡುತ್ತಾರೆ. ಸ್ಥಳೀಯರಿಗೆ ಒಂದು ದಿನದ ಪ್ರವಾಸಕ್ಕೆ ಇದು ಯೋಗ್ಯವಾದ ಸ್ಥಳವೆನಿಸಿದೆ. ದಿನದಿಂದ ದಿನಕ್ಕೆ ಇಲ್ಲಿಗೆ ಆಗಮಿಸುತ್ತಿರುವವರ ಪ್ರವಾಸಿಗರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ಈಗಾಗಲೇ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತಿರುವ ಈ ಶಿಬಿರದಲ್ಲಿ ಬುದ್ಧನ ಮೂರ್ತಿ ಪ್ರತಿಷ್ಠಾಪನೆಯಾದರೆ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.  ರಾಜ್ಯದಲ್ಲೇ ಅತಿ ಎತ್ತರದ ಬುದ್ಧನ ಪ್ರತಿಮೆ ಹೊಂದಿರುವ ಸ್ಥಳ ಎಂಬ ಹೆಗ್ಗಳಿಕೆಗೂ ಒಡೆಯರಪಾಳ್ಯದ ಶಿಬಿರ ಪಾತ್ರವಾಗಲಿದೆ.

ಒಡೆಯರಪಾಳ್ಯ ಶಿಬಿರದಲ್ಲಿರುವ ಬೌದ್ಧ ಮಂದಿರದಲ್ಲಿರುವ ಬುದ್ಧನ ವಿಗ್ರಹ
ಒಡೆಯರಪಾಳ್ಯ ಶಿಬಿರದಲ್ಲಿರುವ ಬೌದ್ಧ ಮಂದಿರದಲ್ಲಿರುವ ಬುದ್ಧನ ವಿಗ್ರಹ

ಎರಡು ವರ್ಷಗಳಲ್ಲಿ ಪೂರ್ಣ ‘ನಮ್ಮ ಶಿಬಿರದಲ್ಲಿ ಬುದ್ಧನ ಬೃಹತ್‌ ಮೂರ್ತಿಯನ್ನು ಪ್ರತಿಷ್ಠಾಪಿಸಲು ವರ್ಷದ ಹಿಂದೆಯೇ ಭೂಮಿಪೂಜೆ ನೆರವೇರಿಸಲಾಯಿತು. ಈಗ ಅಡಿಪಾಯ ಹಾಕಲಾಗಿದೆ. ಪ್ರತಿಮೆಯನ್ನು ಇಲ್ಲಿಗೆ ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎರಡು ವರ್ಷದೊಳಗೆ ಪ್ರತಿಷ್ಠಾಪನೆ ಕಾರ್ಯ ಸಂಪೂರ್ಣವಾಗಿ ಮುಗಿಯಲಿದೆ’ ಎಂದು ಟಿಬೆಟಿಯನ್ನರ ಶಿಬಿರದ ಕಾರ್ಯದರ್ಶಿ ಗೆಲಕ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT