ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸೆರೆ ಹಿಡಿದ ಕೋತಿಗಳಿಗೆ ಆಹಾರ ನೀಡದ ಆರೋಪ, ರಾತ್ರೋ ರಾತ್ರಿ ಕಾಡಿಗೆ

Last Updated 8 ಆಗಸ್ಟ್ 2021, 6:13 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಕಾಗಲವಾಡಿ ಗ್ರಾಮದಲ್ಲಿ ಉಪಟಳ ಕೊಡುತ್ತಿದ್ದ ಕೋತಿಗಳನ್ನು ಆಹಾರ ನೀಡದೆ ಎರಡು ಬೋನುಗಳಲ್ಲಿ ಮೂರು ದಿನಗಳಿಂದ ಒತ್ತೊತ್ತಾಗಿ ಕೂಡಿ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದ ತಕ್ಷಣ ಅರಣ್ಯ‌ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಶನಿವಾರ ರಾತ್ರಿ ಗ್ರಾಮಕ್ಕೆ ಭೇಟಿ‌ ನೀಡಿ ಹಿಡಿದಿರುವ ಕೋತಿಗಳನ್ನು ಬಿಆರ್‌ಟಿ ಅರಣ್ಯಕ್ಕೆ ಬಿಡಲು ಕ್ರಮ ಕೈಗೊಂಡರು.

ಕಾಗಲವಾಡಿ ಗ್ರಾಮದಲ್ಲಿ ಜನರಿಗೆ ತೊಂದರೆ ನೀಡುತ್ತಿದ್ದ ಸುಮಾರು‌ 50ರಷ್ಟು ಕೋತಿಗಳನ್ನು ಗ್ರಾಮ ಪಂಚಾಯಿತಿ ಆಡಳಿತ, ಕೋತಿ ಹಿಡಿಯುವವರನ್ನು ಕರೆಸಿ ಸೆರೆ ಹಿಡಿಸಿತ್ತು. ಕೋತಿಗಳನ್ನು ಎರಡು ಕಿರಿದಾದ ಬೋನುಗಳಲ್ಲಿ ಒತ್ತೊತ್ತಾಗಿ ಕೂಡಿ ಹಾಕಲಾಗಿತ್ತು.

ಈ ಬಗ್ಗೆ ವಿಡಿಯೊ ಮಾಡಿದ್ದ ಸ್ಥಳೀಯ ಯುವಕರೊಬ್ಬರು, ಮೂರು ದಿನಗಳಿಂದ ಕೋತಿಗಳನ್ನು ಕೂಡಿ ಹಾಕಲಾಗಿದ್ದು, ಆಹಾರ ನೀಡಿಲ್ಲ ಎಂದು ಆರೋಪಿಸಿದ್ದರು. ಶನಿವಾರ ರಾತ್ರಿ ಈ ವಿಡಿಯೊ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿತ್ತು.

ವಿಷಯ ತಿಳಿಯುತ್ತಿದ್ದಂತೆ ಶನಿವಾರ ರಾತ್ರಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ, ಕೋತಿಗಳನ್ನು ಕಾಡಿಗೆ ಬಿಡುವುದಕ್ಕೆ ಕ್ರಮ ಕೈಗೊಂಡರು.

ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಗ್ರಾಮದ ಮುಖಂಡ ಕೆ.ಬಿ.ಸ್ವಾಮಿ ಅವರು, 'ಮಂಗಗಳ ಕಾಟದಿಂದ ಗ್ರಾಮಸ್ಥರು ಹೈರಾಣ ಆಗಿದ್ದರು. ಅರಣ್ಯ ಇಲಾಖೆಯ ಅನುಮತಿ ಪಡೆದೇ ಪಂಚಾಯಿತಿ ವತಿಯಿಂದ ಅವುಗಳನ್ನು ಹಿಡಿಯಲಾಗಿತ್ತು‌. ಮೊದಲ ದಿನ ಬಹುಪಾಲು ಕೋತಿಗಳು ಸಿಕ್ಕಿದ್ದವು. ಏಳೆಂಟು ಕೋತಿಗಳು ಬಾಕಿ ಇದ್ದವು. ಶನಿವಾರ ಅವನ್ನೂ ಹಿಡಿಯಲಾಗಿತ್ತು. ಭಾನುವಾರ ಬೆಳಿಗ್ಗೆ ಕಾಡಿಗೆ ಬಿಡಲು ನಿರ್ಧರಿಸಲಾಗಿತ್ತು. ಅಷ್ಟರಲ್ಲಿ ಹಿರಿಯ ಅಧಿಕಾರಿಗಳ ಸೂಚನೆಯ ವೇರೆಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಬಂದು ಪರಿಶೀಲಿಸಿದರು. ರಾತ್ರಿಯೇ ಬಿಆರ್ ಟಿ ಅರಣ್ಯಕ್ಕೆ ಬಿಡಲಾಯಿತು' ಎಂದರು.

ಪ್ರಕರಣದ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಆನಂದ್ ಅವರು, 'ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯವರು ಸೇರಿ ತೊಂದರೆ‌ ಕೊಡುತ್ತಿದ್ದ ಕೋತಿಗಳನ್ನು ಹಿಡಿಸಿದ್ದರು. ಇಕ್ಕಟ್ಟಾದ ಬೋನಿನಲ್ಲಿ ಕೂಡಿ ಹಾಕಲಾಗಿದೆ ಎಂಬ ಮಾಹಿತಿ ಬಂತು. ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಅವುಗಳನ್ನು ಕಾಡಿಗೆ ಬಿಡಲು ಕ್ರಮವಹಿಸಲಾಗಿದೆ' ಎಂದರು.

ಕೋತಿಗಳಿಗೆ ಆಹಾರ ನೀಡಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ್ದಕ್ಕೆ, 'ಬಾಳೆಹಣ್ಣು, ಬಿಸ್ಕತ್ತು.. ಮುಂತಾದ ಆಹಾರವನ್ನು ನೀಡಿದ್ದಾರೆ' ಎಂದು ಅವರು ಹೇಳಿದರು.

'ಮಂಗಗಳನ್ನು ಹಿಡಿಯುವ ಬಗ್ಗೆ ಇಲಾಖೆಯ ಗಮನಕ್ಕೆ ತಂದಿದ್ದರು. ಹಿಡಿದ ನಂತರ ಸ್ಥಳೀಯವಾಗಿ ಏನಾಗಿದೆ ಎಂಬ ಮಾಹಿತಿ ಇಲ್ಲ. ಶನಿವಾರ ರಾತ್ರಿ ನಮ್ಮ ಸಿಬ್ಬಂದಿ ತೆರಳಿ, ಕೋತಿಗಳನ್ನು ಕಾಡಿಗೆ ಬಿಡಿಸಿದ್ದಾರೆ' ಎಂದು ಬಿಆರ್ ಟಿ ಹುಲಿಸಂರಕ್ಷಿತ ಪ್ರದೇಶದ ಡಿಸಿಎಫ್ ಡಾ.ಜಿ. ಸಂತೋಷ್ ಕುಮಾರ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ರಸ್ತೆ ಬದಿಯಲ್ಲಿ 35 ಮಂಗಗಳ ಶವ ಹಾಗೂ ಜೀವನ್ಮರಣ ಸ್ಥಿತಿಯಲ್ಲಿದ್ದ 15 ಮಂಗಗಳು ಪತ್ತೆಯಾದ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಈ ಪ್ರಕರಣ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT