ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಲ್‌ ಅಧ್ಯಕ್ಷ ಚುನಾವಣೆ: ನಂಜುಂಡ ಪ್ರಸಾದ್‌ಗೆ ಒಲಿದ ಅದೃಷ್ಟ

ಬಿಜೆಪಿಯಿಂದ ಕಣಕ್ಕಿಳಿದ ರವಿ ಶಂಕರ್‌, ಲಾಟರಿ ಮೂಲಕ ಆಯ್ಕೆ
Last Updated 13 ಫೆಬ್ರುವರಿ 2020, 9:06 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್) ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ಎಸ್‌.ನಂಜುಂಡಪ್ರಸಾದ್‌ ಅವರಿಗೆ ಅದೃಷ್ಟ ಒಲಿದಿದೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆದ ಸಮಬಲದ ಹೋರಾಟದಲ್ಲಿ ಲಾಟರಿ ಎತ್ತುವ ಅಧ್ಯಕ್ಷರ ಹೆಸರನ್ನು ಘೋಷಿಸಲಾಯಿತು. ಲಾಟರಿಯಲ್ಲಿ ನಂಜುಂಡ ಪ್ರಸಾದ್‌ ಅವರ ಹೆಸರು ಬಂತು.

ಹಿಂದಿನ ಅಧ್ಯಕ್ಷರಾದ ಸಿ.ಎಸ್‌.ಗುರುಮಲ್ಲಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕುದೇರಿನಲ್ಲಿರುವ ಚಾಮುಲ್‌ ಕಚೇರಿಯಲ್ಲಿ ಬುಧವಾರ ಚುನಾವಣೆ ನಡೆಯಿತು. 12 ಸದಸ್ಯ ಬಲದ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ಎಸ್‌.ನಂಜುಂಡಪ್ರಸಾದ್‌ ಹಾಗೂ ಬಿಜೆಪಿ ಬೆಂಬಲಿತ ರವಿಶಂಕರ್‌ ಅವರು ಉಮೇದುವಾರಿಕೆ ಸಲ್ಲಿಸಿದ್ದರು.

ಎಂಟು ಜನ ಚುನಾಯಿತ ನಿರ್ದೇಶಕರಲ್ಲದೆ, ಒಬ್ಬರು ನಾಮನಿರ್ದೇಶಿತ ನಿರ್ದೇಶಕರು ಹಾಗೂ ಸರ್ಕಾರದಿಂದ ನೇಮಕವಾಗಿರುವ ಮೂವರು ನಿರ್ದೇಶಕರಿಗೆ ಮತದಾನ ಮಾಡಲು ಅವಕಾಶ ಇತ್ತು.

ಗೋಪ್ಯವಾಗಿ ನಡೆದ ಮತದಾನದಲ್ಲಿ ನಂಜುಂಡಪ್ರಸಾದ್‌ ಹಾಗೂ ರವಿಶಂಕರ್‌ ಅವರು ತಲಾ ಆರು ಮತಗಳನ್ನು ಪಡೆದರು. ಅಂತಿಮವಾಗಿ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರವಿ ಕುಮಾರ್‌ ಅವರು ಲಾಟರಿ ಎತ್ತುವ ಮೂಲಕ ಹೊಸ ಅಧ್ಯಕ್ಷರ ಹೆಸರನ್ನು ಘೋಷಿಸಿದರು.

ಅಚ್ಚರಿಯ ಅಭ್ಯರ್ಥಿ: ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದು, ನಿರ್ದೇಶಕರಾಗಿದ್ದ ಕಿಲಗೆರೆ ಬಸವರಾಜು ಅವರು ಬಿಜೆಪಿ ಬೆಂಬಲ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ರವಿಶಂಕರ್‌ ಅವರು ನಾಮಪತ್ರ ಸಲ್ಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೆ ಕೆಡವಿದರು.

‘ಬಸವರಾಜು ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದು ನಿಜ. ಪಕ್ಷದ ವರಿಷ್ಠರ ಸಲಹೆಯ ಮೇರೆಗೆ ಕೊನೆ ಕ್ಷಣದಲ್ಲಿ ಬಸವರಾಜು ಅವರ ಬದಲು ರವಿಶಂಕರ್‌ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಮುಂದಿನ ಎರಡೂವರೆ ವರ್ಷದ ಅವಧಿಗೆ ನಂಜುಂಡ ಪ್ರಸಾದ್‌ ಅವರು ಚಾಮುಲ್‌ ಅಧ್ಯಕ್ಷರಾಗಲಿದ್ದಾರೆ.

ಚಾಮುಲ್ ನಿರ್ದೇಶಕರಾದ ಗುರುಮಲ್ಲಪ್ಪ, ಮಾದಪ್ಪ, ನಂಜುಂಡಸ್ವಾಮಿ, ಮಾದಪ್ಪ ಪ್ರಮೋದ ಶಂಕರಮೂರ್ತಿ, ಬಸವರಾಜು, ನಾಮ ನಿರ್ದೇಶಿತ ನಿರ್ದೇಶಕ ಕಿಲಗೆರೆ ಶಶಿಕುಮಾರ್, ಕೆಎಂಎಫ್‌ನ ಅಧಿಕಾರಿ ಡಾ. ರಮೇಶ್, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ರಮೇಶ್, ಪಶುಪಾಲನೆ ಇಲಾಖೆಯ ಉಪ ನಿರ್ದೇಸಕ ವೀರಭದ್ರಯ್ಯ, ಇದ್ದರು. ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್, ಆಡಳಿತಾಧಿಕಾರಿ ಶ್ರೀಕಾಂತ್ ಇದ್ದರು.

ಅಭಿನಂದನೆ: ನೂತನ ಅಧ್ಯಕ್ಷ ನಂಜುಂಡ ಪ್ರಸಾದ್ ಅವರನ್ನು ಕಾಂಗ್ರೆಸ್‌ ಮುಖಂಡ ಎ.ಆರ್. ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್‌.ಮಹೇಶ್, ಸದಸ್ಯ ನವೀನ್, ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ಮುಖಂಡ ಗಣೇಶ್ ಪ್ರಸಾದ್ ಮತ್ತಿತರರು ಅಭಿನಂದಿಸಿದರು.

‘ಚಾಮುಲ್‌ ಅಭಿವೃದ್ಧಿಗೆ ಯತ್ನ’
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ನಂಜುಂಡ ಪ್ರಸಾದ್ ಅವರು, ‘ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಕಾರಣರಾದ ಎಚ್.ಎಸ್.ಮಹದೇವಪ್ರಸಾದ್ ಅವರ ಆಶೀರ್ವಾದದಿಂದ ಈ ಗೆಲುವು ಸಿಕ್ಕಿದೆ. ಹೈನುಗಾರಿಕೆಯನ್ನು ಅವಲಂಬಿಸಿರುವ ರೈತಾಪಿ ವರ್ಗದ ಅಭಿವೃದ್ಧಿಗೆ ಶ್ರ‌ಮಿಸುತ್ತೇನೆ. ಈಗಾಗಲೇ ಪ್ರತಿ ಲೀಟರ್ ಹಾಲಿನ ಖರೀದಿ ದರ ₹2 ಹೆಚ್ಚಿಸಲಾಗಿದೆ. ಜತೆಗೆ ಒಕ್ಕೂಟದಿಂದ ಮತ್ತೆ ₹1 ಹೆಚ್ಚಿಸಲಾಗುವುದು. ಎಲ್ಲರ ಸಹಕಾರದಿಂದ ಚಾಮುಲ್‌ ಅನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ’ ಎಂದರು.

ಬಿಜೆಪಿಗೆ ಉತ್ತಮ ಭವಿಷ್ಯ:ಪರಾಜಿತ ಅಭ್ಯರ್ಥಿ ರವಿಶಂಕರ್ ಅವರು ಮಾತನಾಡಿ, ‘ಚಾಮುಲ್‌ ಆಡಳಿತ ಮಂಡಳಿಯಲ್ಲಿರುವ ಏಕೈಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾಂಗ್ರೆಸ್‍ಗೆ ಸಮಬಲದ ಪೈಪೋಟಿ ನೀಡಿರುವುದು ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸದೃಢವಾಗಿದೆ ಎಂಬುದನ್ನು ತೋರಿಸುತ್ತದೆ. ಅಲ್ಲದೇ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರೂ ನನ್ನನ್ನು ಬೆಂಬಲಿಸಿರುವುದರಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಲದಿಂದ ಹೈನುಗಾರರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT