ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಲ್‌ ಅಧ್ಯಕ್ಷ ಗಾದಿ ಯಾರಿಗೆ?

ಶೀಲಾ ಪುಟ್ಟರಂಗಶೆಟ್ಟಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ, ಬಿಜೆಪಿಯಿಂದ ಬಸವರಾಜು
Last Updated 28 ಜೂನ್ 2022, 16:11 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್‌) ಅಧ್ಯಕ್ಷರ ಆಯ್ಕೆಗಾಗಿ ಬುಧವಾರ (ಜೂನ್‌ 29) ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಗಾದಿಯನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಒಕ್ಕೂಟದ ಒಂಬತ್ತು ನಿರ್ದೇಶಕರ ಸ್ಥಾನಗಳಿಗೆ ಇದೇ 14ರಂದು ಚುನಾವಣೆ ನಡೆದಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.ಕಾಂಗ್ರೆಸ್‌ ಬೆಂಬಲಿತರು ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ಬೆಂಬಲಿತರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇಬ್ಬರು ಹಾಗೂ ಇನ್ನೊಬ್ಬರು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದರು.

ಚುನಾವಣೆಯಲ್ಲಿ ಆಯ್ಕೆಯಾದ ಒಂಬತ್ತು ಸೇರಿದಂತೆ ಚಾಮುಲ್‌ನಲ್ಲಿ ಒಟ್ಟು 15 ನಿರ್ದೇಶಕರಿದ್ದಾರೆ. 13 ಮಂದಿ ಮತದಾನ ಮಾಡುತ್ತಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ನಿರ್ದೇಶಕರು, ಏಳು ಮಂದಿಯ ಬೆಂಬಲ ಗಳಿಸಬೇಕು. ಯಾವುದೇ ಪಕ್ಷದ ಬೆಂಬಲಿತರು ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಗಳಿಸದೇ ಇರುವುದರಿಂದ ಅಧ್ಯಕ್ಷರ ಚುನಾವಣೆ ಗಮನ ಸೆಳೆದಿದೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಚಾಮುಲ್‌ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿವೆ. ಚಾಮುಲ್‌ನ ಮಹಿಳಾ ಮೀಸಲು ಕ್ಷೇತ್ರದಿಂದ ಗೆದ್ದಿರುವ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಮಗಳು ಶೀಲಾ ಅವರು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಾರು ಎಂದು ಇನ್ನೂ ಅಧಿಕೃತವಾಗಿ ಘೋಷಣೆಯಾ
ಗಿಲ್ಲ. ಸ್ಥಳೀಯ ಮುಖಂಡರು ವರಿಷ್ಠರ ಗಮನಕ್ಕೆ ತಂದಿದ್ದು, ಅವರು ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. ಚಾಮರಾಜನಗರ ತಾಲ್ಲೂಕಿನಿಂದ ಗೆದ್ದಿರುವ ಎಚ್‌.ಎಸ್‌.ಬಸವರಾಜು ವಿ.ಸಿ.ಹೊಸೂರು ಅವರ ಹೆಸರು ಬಹುತೇಕ ಅಂತಿಮವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗುಂಡ್ಲುಪೇಟೆ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಂ.ಪಿ.ಸುನಿಲ್‌ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಮುಖಂಡರು ಹಿರಿಯರಾಗಿ
ರುವ ಬಸವರಾಜು ಅವರತ್ತ ಒಲವು ತೋರಿದಿದ್ದಾರೆ ಎಂದು ಗೊತ್ತಾಗಿದೆ.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ನಿರ್ದೇಶಕರಾಗಿ ಆಯ್ಕೆಯಾದವರು ಎಲ್ಲರೂ ಸಭೆ ಸೇರಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿದ್ದಾರೆ ಎಂದು ಜಿಲ್ಲಾ ಘಟಕದ ಮುಖಂಡರು ತಿಳಿಸಿದ್ದಾರೆ.

ಬೆಂಬಲ ಪಡೆಯಲು ಕಸರತ್ತು: ಶಾಸಕ ಸಿ.ಪುಟ್ಟರಂಗಶಟ್ಟಿ ಅವರು ಮಗಳು ಶೀಲಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಕಸರತ್ತು ನಡೆಸುತ್ತಿದ್ದಾರೆ. ತಮ್ಮ ‘ಪ್ರಭಾವ’ ಬಳಸಿಕೊಂಡು ಗೆಲ್ಲಲು ಬೇಕಾದಷ್ಟು ನಿರ್ದೇಶಕರ ಬೆಂಬಲ ಪಡೆಯಲು ಹಲವು ತಂತ್ರಗಳನ್ನು ಹೂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ.

ಇತ್ತ ಬಿಜೆಪಿ ಪಾಳಯವೂ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸುತ್ತಿದೆ. ಅಧ್ಯಕ್ಷ ಅಭ್ಯರ್ಥಿಯ ಹೆಸರನ್ನು ಬಹಿರಂಗ ಪಡಿಸದಿದ್ದರೂ, ನಿರ್ದೇಶಕರನ್ನು ಸಂಪರ್ಕಿಸಿ ಬೆಂಬಲ ಕೋರಿದೆ.

ಸ್ವತಂತ್ರ ನಿರ್ದೇಶಕರು, ಅಧಿಕಾರಿಗಳೇ ನಿರ್ಣಾಯಕ

ಚಾಮುಲ್‌ ಆಡಳಿತ ಮಂಡಳಿಯಲ್ಲಿ 15 ನಿರ್ದೇಶಕರಿರುತ್ತಾರೆ.ಚುನಾವಣೆಯಲ್ಲಿ ಗೆದ್ದ ಒಂಬತ್ತು ನಿರ್ದೇಶಕರು, ಸರ್ಕಾರದಿಂದ ನಾಮನಿರ್ದೇಶನವಾಗಿರುವ ಒಬ್ಬ ನಿರ್ದೇಶಕ, ಸಹಕಾರ ಇಲಾಖೆಗಳ ಪ್ರತಿನಿಧಿ (ಉಪ ರಿಜಿಸ್ಟ್ರಾರ್‌), ಜಿಲ್ಲಾ ಪಶುಪಾಲನೆ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ, ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಪ್ರತಿನಿಧಿ, ಕೆಎಂಎಫ್‌ ಪ್ರತಿನಿಧಿ ಹಾಗೂ ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ.

ಈ ಪೈಕಿ ಅಧ್ಯಕ್ಷರ ಚುನಾವಣೆಯಲ್ಲಿ ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಮತದಾನದ ಹಕ್ಕು ಇಲ್ಲ.ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಪ್ರತಿನಿಧಿಗೆ ಹಕ್ಕು ಇದ್ದರೂ, ರಾಜಕೀಯದಿಂದ ದೂರ ಉಳಿಯುವ ಆಡಳಿತ ಮಂಡಳಿಯ ತೀರ್ಮಾನದಂತೆ ಅವರು ಮತದಾನ ಮಾಡುವುದಿಲ್ಲ. 13 ಮಂದಿ ಮಾತ್ರ ಮತದಾನ ಮಾಡಲಿದ್ದಾರೆ. ಅಧ್ಯಕ್ಷ ಸ್ಥಾನ ಪಡೆಯಬೇಕಾದರೆ ಏಳು ಮತಗಳು ಬೇಕು. ಹಾಗಾಗಿ, ಪಕ್ಷಗಳ ಬೆಂಬಲವಿಲ್ಲದೇ ಗೆದ್ದಿರುವ ನಿರ್ದೇಶಕರು ಹಾಗೂ ಅಧಿಕಾರಿಗಳ ಮತ ನಿರ್ಣಾಯಕವಾಗಲಿದೆ.

ಮಧ್ಯಾಹ್ನದ ಒಳಗೆ ಫಲಿತಾಂಶ

ತಾಲ್ಲೂಕಿನ ಕುದೇರಿನಲ್ಲಿರುವ ಚಾಮುಲ್‌ ಆಡಳಿತ ಕಚೇರಿಯಲ್ಲಿಅಧ್ಯಕ್ಷರ ಆಯ್ಕೆಯ ಚುನಾವಣಾ ಪ್ರಕ್ರಿಯೆ ನಡೆಯಲಿದೆ.

ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ನಿರ್ದೇಶಕರ ಹಾಜರಾತಿ ಹಾಗೂ ಕೋರಂ ಪರಿಶೀಲನಾ ಕಾರ್ಯ 11ರಿಂದ 11.15ರವರೆಗೆ ನಡೆಯಲಿದೆ. ನಂತರ ನಾಮಪತ್ರ ಪರಿಶೀಲನೆ ನಡೆಯಲಿದೆ. 12.30ರ ಒಳಗಾಗಿ ನಾಮಪತ್ರ ವಾಪಸ್‌ ಪಡೆಯಲು ಅವಕಾಶ ಇದೆ. ಮಧ್ಯಾಹ್ಬ 1 ಗಂಟೆಗೆ ಮತದಾನ ನಡೆಯಲಿದೆ.

‘ಒಂದೇ ದಿನ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಮತ ಫಲಿತಾಂಶವೂ ಹೊರ ಬೀಳಲಿದೆ’ ಎಂದು ಚುನಾವಣಾಧಿಕಾರಿ ರಾಜೇಂದ್ರ ಪ್ರಸಾದ್‌ ಅವರು ತಿಳಿಸಿದರು.

--

ಪಕ್ಷ ಬೆಂಬಲಿತ ಅಭ್ಯರ್ಥಿಯ ತೀರ್ಮಾನವಾಗಿಲ್ಲ. ಬುಧವಾರ 9 ಗಂಟೆಗೆ ಘೋಷಿಸುತ್ತೇವೆ. ಚಾಮುಲ್‌ ಅಧಿಕಾರ ನಾವು ಹಿಡಿಯಲಿದ್ದೇವೆ

ಆರ್‌.ಸುಂದರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

---

ಶೀಲಾ ಪುಟ್ಟರಂಗಶೆಟ್ಟಿ ಅವರನ್ನು ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿ ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಚುನಾವಣೆಯಲ್ಲಿ ಅವರು ಗೆಲ್ಲಲಿದ್ದಾರೆ

ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT