ಭಾನುವಾರ, ಫೆಬ್ರವರಿ 23, 2020
19 °C
ನಂಜುಂಡ ಪ್ರಸಾದ್‌, ಕಿಲಗೆರೆ ಬಸವರಾಜು ಮುಂಚೂಣಿಯಲ್ಲಿ

ಚಾಮುಲ್‌ ಅಧ್ಯಕ್ಷ ಸ್ಥಾನ ಯಾರಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್‌) ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದ್ದು, ಯಾರು ಅಧ್ಯಕ್ಷರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. 

ಹಿಂದೆ ಅಧ್ಯಕ್ಷರಾಗಿದ್ದ ಗುರುಮಲ್ಲಪ್ಪ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ದಿವಂಗತ ಮಹದೇವ ಪ್ರಸಾದ್‌ ಅವರ ತಮ್ಮ ಎಚ್‌.ಎಸ್‌.ನಂಜುಂಡ ಪ್ರಸಾದ್‌ ಹಾಗೂ ಹಿಂದೆ ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಕಿಲಗೆರೆ ಬಸವರಾಜು ಅವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.  

12 ಸದಸ್ಯ ಬಲದ ಆಡಳಿತ ಮಂಡಳಿಯಲ್ಲಿ ಎಂಟು ಮಂದಿ ಚುನಾಯಿತ ನಿರ್ದೇಶಕರಿದ್ದಾರೆ. ಇವರೊಂದಿಗೆ ಸರ್ಕಾರದ ಒಬ್ಬರು ನಾಮನಿರ್ದೇಶಿಸಿದ ಸದಸ್ಯರು ಹಾಗೂ ಸರ್ಕಾರ ನೇಮಿಸಿರುವ ಮೂವರು ನಾಮ ನಿರ್ದೇಶಕರಿದ್ದಾರೆ (ಅಧಿಕಾರಿಗಳು) ಇವರಿಗೂ ಮತದಾನದ ಹಕ್ಕು ಇದೆ. 

ಚುನಾಯಿತ ನಿರ್ದೇಶಕರಲ್ಲಿ ಕಾಂಗ್ರೆಸ್‌ ಬೆಂಬಲಿತ ಆರು ಮಂದಿ ಇದ್ದಾರೆ. ಬಿಜೆಪಿಯ ಒಬ್ಬರಿದ್ದಾರೆ. ಕಿಲಗೆರೆ ಬಸವರಾಜು ಅವರು ಬಿಜೆಪಿಯ ರವಿಶಂಕರ್‌ ಹಾಗೂ ಇತರ ನಾಲ್ವರ ಬೆಂಬಲಗಳಿಸಿದರೆ ಆರು ಸದಸ್ಯರ ಬೆಂಬಲ ಪಡೆದಂತೆ ಆಗುತ್ತದೆ. ಹಾಗಾದರೆ, ಇಬ್ಬರ ನಡುವೆಯೂ ಸಮಬಲದ ಹೋರಾಟ ನಡೆಯಲಿದೆ. ಅಂತಿಮವಾಗಿ ಲಾಟರಿ ಮೂಲಕ ಆಯ್ಕೆ ನಡೆಯಲಿದೆ. ಅದೃಷ್ಟ ಇದ್ದವರು ಅಧ್ಯಕ್ಷರಾಗಲಿದ್ದಾರೆ.

ಮೈಸೂರು ಹಾಲು ಒಕ್ಕೂಟದಿಂದ ಬೇರ್ಪಟ್ಟು ಪ್ರತ್ಯೇಕ ಒಕ್ಕೂಟ ಸ್ಥಾಪನೆಯಾದ ನಂತರ ರಚನೆಯಾದ ಆಡಳಿತ ಮಂಡಳಿಯ ಮೊದಲ ಅಧ್ಯಕ್ಷ ಸ್ಥಾನವನ್ನು ಗುರುಮಲ್ಲಪ್ಪ ಅಧ್ಯಕ್ಷರಾಗಿದ್ದರು.

ಆ ಸಂದರ್ಭದಲ್ಲಿ ಬಹುಮತ ತನ್ನ ಕಡೆಗೆ ಇರುವುದರಿಂದ ಐದು ವರ್ಷಗಳ ಆಡಳಿತವನ್ನು ಇಬ್ಬರು ತಲಾ ಎರಡೂವರೆ ವರ್ಷಗಳ ಹಂಚಿಕೊಳ್ಳುವುದು ಎಂದು ಕಾಂಗ್ರೆಸ್‌ನಲ್ಲಿ ಆಂತರಿಕ ಒಪ್ಪಂದ ನಡೆದಿತ್ತು. ಮೊದಲ ಅವಧಿಯಲ್ಲಿ ಗುರುಮಲ್ಲಪ್ಪ ಅವರು ಹಾಗೂ ಎರಡನೇ ಅವಧಿಯಲ್ಲಿ ಎಚ್‌.ಎಸ್‌.ನಂಜುಂಡ ಪ್ರಸಾದ್‌ ಅವರು ಅಧ್ಯಕ್ಷರಾಗುವುದು ಎಂಬ ಮಾತಾಗಿತ್ತು.

ಅದರಂತೆ ಮೊದಲ ಅವಧಿಗೆ ಗುರುಮಲ್ಲಪ್ಪ ಅಧ್ಯಕ್ಷರಾಗಿದ್ದರು. ಈ ವರ್ಷದ ಜನವರಿ 13ರವರೆಗೂ ಅವರ ಅಧಿಕಾರವಧಿ ಇತ್ತು. ಚಾಮುಲ್‌ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಅವಧಿಗಿಂತಲೂ 11 ದಿನ ಮೊದಲೇ ಅವರು ರಾಜೀನಾಮೆ ನೀಡಿದ್ದರು. 

ಒಪ್ಪಂದದಂತೆ ಎರಡನೇ ಅವಧಿಗೆ ನಂಜುಂಡ ಪ್ರಸಾದ್‌ ಅವರು ಅಧ್ಯಕ್ಷರಾಗಬೇಕು. ಆದರೆ, ಕಿಲಗೆರೆ ಬಸವರಾಜು ಅವರು ಕೂಡ ಸ್ಪರ್ಧಿಸುವ ಇಂಗಿತವನ್ನು ಕಾಂಗ್ರೆಸ್‌ ಮುಖಂಡರ ಬಳಿ ವ್ಯಕ್ತಪಡಿಸಿದ್ದಾರೆ. 

ಇನ್ನುಳಿದ ಅವಧಿಯನ್ನು ಇಬ್ಬರ ನಡುವೆ ಹಂಚಿಕೆ ಮಾಡುವ ಪ್ರಸ್ತಾವವನ್ನು (ಒಂದೂವರೆ ವರ್ಷ ನಂಜುಂಡ ಪ್ರಸಾದ್‌, ಒಂದು ವರ್ಷ ಬಸವರಾಜು) ಮುಂದಿಟ್ಟಿದ್ದಾರೆ ಎನ್ನಲಾಗಿದೆ. 

ಇದಕ್ಕೆ ನಂಜುಂಡ ಪ್ರಸಾದ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪೂರ್ಣ ಅವಧಿ ತಮಗೇ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. 

ಅಂತಿಮವಾಗಿ ಕಾಂಗ್ರೆಸ್‌ ಮುಖಂಡರು ಹಿಂದೆ ಆಗಿರುವ ಒಪ್ಪಂದಕ್ಕೆ ಜೋತು ಬಿದ್ದಿದ್ದು, ನಂಜುಂಡ ಪ್ರಸಾದ್‌ ಅವರಿಗೆ ಪೂರ್ಣ ಅವಧಿ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಇದರಿಂದ ಮುನಿಸಿಕೊಂಡಿರುವ ಬಸವರಾಜು ಬಿಜೆಪಿ ಪಾಳಯಕ್ಕೆ ಹೋಗಿದ್ದು, ಬುಧವಾರ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮರಿಸ್ವಾಮಿ ಅವರು, ‘ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಎಲ್ಲರ ಅಭಿಪ್ರಾಯಗಳನ್ನು ಪಡೆದಿದ್ದೇವೆ. ಬುಧವಾರ ಬೆಳಿಗ್ಗೆ 9 ಗಂಟೆಗೆ ಅಭ್ಯರ್ಥಿ ಹೆಸರನ್ನು ಘೋಷಿಸಲಾಗುವುದು’ ಎಂದು ಹೇಳಿದರು.

ಚುನಾವಣೆ ಮುಂದೂಡಲು ಆಗ್ರಹ
ಈ ಮಧ್ಯೆ, ಚಾಮುಲ್‌ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪದ ಬಗ್ಗೆ ನಡೆದಿರುವ ತನಿಖೆಯ ವರದಿ ಬರುವವರೆಗೆ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಬೇಕು ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ಜಿಲ್ಲಾ ನಾಗರಿಕ ಹಿತರಕ್ಷಣಾ ಸಮಿತಿಗಳು ಆಗ್ರಹಿಸಿವೆ.

‘ಸಿಬ್ಬಂದಿ (ಕಾಯಂ ಮತ್ತು ತಾತ್ಕಾಲಿಕ) ನೇಮಕಾತಿ ಮಾಡುವ ಸಂದರ್ಭದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಹಿಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಜಂಟಿ ತನಿಖೆಗೆ ಆದೇಶಿಸಿದ್ದರು. ಅದರ ವರದಿ ಇನ್ನೂ ಬಂದಿಲ್ಲ. ಇದರ ಮಧ್ಯೆಯೇ ಗುರುಮಲ್ಲಪ್ಪ ಅವರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ವರದಿ ಬರುವವರೆಗೂ ಚುನಾವಣೆ ನಡೆಸಬಾರದು’ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಹಾಗೂ ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ ವೆಂಕಟರಮಣಸ್ವಾಮಿ (ಪಾಪು) ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು