ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅರಣ್ಯ ಸಿಬ್ಬಂದಿಗೂ ಕ್ಯಾಂಟೀನ್‌: ಶಿಫಾರಸು

ಪೊಲೀಸ್‌, ಸೇನೆಯ ಮಾದರಿ, 2022ರಿಂದಲೂ ಸರ್ಕಾರದ ಮುಂದೆ ಪ್ರಸ್ತಾವ
ಸೂರ್ಯನಾರಾಯಣ ವಿ.
Published 16 ಮಾರ್ಚ್ 2024, 6:11 IST
Last Updated 16 ಮಾರ್ಚ್ 2024, 6:11 IST
ಅಕ್ಷರ ಗಾತ್ರ

ಚಾಮರಾಜನಗರ: ಸೇನೆ ಮತ್ತು ಪೊಲೀಸ್‌ ಕ್ಯಾಂಟೀನ್‌ ಮಾದರಿಯಲ್ಲಿ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೂ ಕ್ಯಾಂಟೀನ್‌ ಸೌಲಭ್ಯ ಕಲ್ಪಿಸಬಹುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್‌ ಸುಭಾಷ್‌ ಮಾಲ್ಖೆಡೆ ಅವರು ಅರಣ್ಯ ಪಡೆ ಮುಖ್ಯಸ್ಥ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೃಜೇಶ್‌ ಕುಮಾರ್‌ ದೀಕ್ಷಿತ್‌ ಅವರಿಗೆ ಶಿಫಾರಸು ಮಾಡಿದ್ದಾರೆ. 

ಫೆ.16ರಂದು ಸುಭಾಷ್‌ ಅವರು ಪತ್ರ ಬರೆದಿದ್ದು, ‘ಕ್ಯಾಂಟೀನ್‌ ಸೌಲಭ್ಯವನ್ನು ವಿಸ್ತರಿಸಬಹುದು ಎಂದು ಶಿಫಾರಸು ಮಾಡುತ್ತಾ, ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ತಮಿಳುನಾಡಿನ ಮಾದರಿಯಲ್ಲಿ ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯವನ್ನು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೂ ವಿಸ್ತರಿಸುವ ಪ್ರಸ್ತಾವ ಅರಣ್ಯ ಇಲಾಖೆಯ ಮುಂದಿದೆ. ಒಂದು ವೇಳೆ, ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಇಲಾಖೆಯ  8ಸಾವಿರ ಅಧಿಕಾರಿ–ಸಿಬ್ಬಂದಿಗೆ ಅನುಕೂಲವಾಗಲಿದೆ. ಕ್ಯಾಂಟೀನ್‌ಗಳಲ್ಲಿ ರಿಯಾಯಿತಿ ದರದಲ್ಲಿ ಗೃಹ ಬಳಕೆ ವಸ್ತುಗಳು ಸಿಗುವುದರಿಂದ ಸಿಬ್ಬಂದಿ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

2022ರಲ್ಲೇ ಪ್ರಸ್ತಾವ: ಅರಣ್ಯ ಸಿಬ್ಬಂದಿಗೂ ಕ್ಯಾಂಟೀನ್‌ ಸೌಲಭ್ಯ ಕಲ್ಪಿಸುವಂತೆ ಕೋರಿ ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್‌ ಕುಲಕರ್ಣಿ 2022ರ ಮೇ 9ರಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಅದಕ್ಕೆ ಸ್ಪಂದಿಸಿದ್ದ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಸಂರಕ್ಷಣಾಧಿಕಾರಿಯವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಮತ್ತು ಮುಖ್ಯ ವನ್ಯಜೀವಿ ವಾರ್ಡನ್‌ಗೆ ಪತ್ರ ಬರೆದಿದ್ದರು‌.  

ಗಿರಿಧರ್‌ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೂ ಹಲವು ಬಾರಿ ಮನವಿ ಸಲ್ಲಿಸಿದ್ದರು. ಸಚಿವರ ಸೂಚನೆ ಮೇರೆಗೆ ಅವರ ಆಪ್ತ ಕಾರ್ಯದರ್ಶಿ ಎ.ಆರ್‌.ರವಿ, 2023ರ ಡಿ.19ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಮತ್ತು ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಗೆ ಪತ್ರ ಬರೆದು ಪ್ರಸ್ತಾವದ ಬಗ್ಗೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದರು.  

ಸುಭಾಷ್‌ ಮಾಲ್ಖೆಡೆ ಅವರು ಅರಣ್ಯ ಪಡೆ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ, ಸಚಿವರಿಗೆ ಗಿರಿಧರ್‌ ಸಲ್ಲಿಸಿದ ಮನವಿ, ಸಚಿವರ ಆಪ್ತ ಕಾರ್ಯದರ್ಶಿಯ ಪತ್ರ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಸಂರಕ್ಷಣಾಧಿಕಾರಿ ಬರೆದಿರುವ ಪತ್ರಗಳ ವಿವರಗಳನ್ನು ಉಲ್ಲೇಖಿಸಿದ್ದಾರೆ.

ಗಿರಿಧರ ಕುಲಕರ್ಣಿ
ಗಿರಿಧರ ಕುಲಕರ್ಣಿ
.
.

ಕ್ಯಾಂಟೀನ್‌ ಸೌಲಭ್ಯ ಕಲ್ಪಿಬಹುದು ಎಂಬ ಶಿಫಾರಸು ಬಂದಿದೆ. ಸದ್ಯ ಈ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. - ಪರಿಶೀಲನೆ ನಡೆಸಲಾಗುತ್ತಿದೆ ಬೃಜೇಶ್‌ ಕುಮಾರ್‌ ದೀಕ್ಷಿತ್‌

ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಮುಂಚೂಣಿ ಸಿಬ್ಬಂದಿಗೆ ಕ್ಯಾಂಟೀನ್‌ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆ ಮತ್ತು ಸರ್ಕಾರ ಶೀಘ್ರ ಕ್ರಮ ವಹಿಸಬೇಕು - ಗಿರಿಧರ್‌ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT