ಬುಧವಾರ, ಜನವರಿ 22, 2020
28 °C
ಚಿಕ್ಕಲ್ಲೂರು ಜಾತ್ರೆ: ಪರ ವಿರೋಧ ಆರಂಭ, ಜಿಲ್ಲಾಡಳಿತ ಹದ್ದಿನ ಕಣ್ಣು

ಪಂಕ್ತಿ ಸೇವೆ ನಡೆಯಲಿದೆ: ಎನ್‌.ಮಹೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ಇನ್ನು ಎರಡು ದಿನಗಳು ಬಾಕಿ ಇರುವಂತೆಯೇ, ಜಾತ್ರೆಯ ನಾಲ್ಕನೇ ದಿನ ನಡೆಯುವ ಪಂಕ್ತಿ ಸೇವೆಯ ಬಗ್ಗೆ ಪರ, ವಿರೋಧ ಚರ್ಚೆಗಳು ಆರಂಭವಾಗಿವೆ.

‌ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಪ್ರಾಣಿ ಬಲಿ ನೀಡುವುದಕ್ಕೆ ಅವಕಾಶ ನೀಡಬಾರದು. ಇದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೈಕೋರ್ಟ್‌ ಆದೇಶ ಅನುಸಾರ ಪ್ರಾಣಿ ಬಲಿ ನೀಡಬಾರದು ಎಂದು ಭಕ್ತರಲ್ಲೂ ಅವರು ಮನವಿ ಮಾಡಿದ್ದಾರೆ. 

ಇತ್ತ ಕೊಳ್ಳೇಗಾಲ ಮತ್ತು ಹನೂರು ಕ್ಷೇತ್ರಗಳ ಶಾಸಕರಾದ ಎನ್‌.ಮಹೇಶ್‌ ಹಾಗೂ ಆರ್‌.ನರೇಂದ್ರ ಅವರು ಪಂಕ್ತಿಸೇವೆಯ ಪರವಾಗಿ ಮಾತನಾಡಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌.ಮಹೇಶ್‌ ಅವರು, ‘ಪಂಕ್ತಿಸೇವೆ ಎಂದರೆ ಪ್ರಾಣಿ ಬಲಿ ಅಲ್ಲ. ಅದು ಸಹಭೋಜನ. ಇದು ಕೋರ್ಟ್‌ ತೀರ್ಪಿನ ಉಲ್ಲಂಘನೆಯಲ್ಲ. ಹಾಗಾಗಿ, ಈ ವರ್ಷವೂ ಪಂಕ್ತಿಸೇವೆ ನಡೆದೇ ನಡೆಯುತ್ತದೆ. ಎಲ್ಲರೂ ಚಿಕ್ಕಲ್ಲೂರಿಗೆ ಬನ್ನಿ’ ಎಂದು ಹೇಳಿದ್ದಾರೆ. 

‘ಚಿಕ್ಕಲ್ಲೂರು ಜಾತ್ರೆ 500ರಿಂದ 600 ವರ್ಷಗಳ ಪರಂ‍ಪರೆ ಇದೆ. ಜಾತ್ರೆಯಲ್ಲಿ ಪ್ರಾಣಿ ಬಲಿ ಕೊಡಲಾಗುತ್ತದೆ ಎಂಬ ತಪ್ಪುಕಲ್ಪನೆ ಇದೆ. ಸಿದ್ದಪ್ಪಾಜಿ, ಮಂಟೇಸ್ವಾಮಿ ಪರಂಪರೆಯಲ್ಲಿ ಪ್ರಾಣಿ ಬಲಿ ಕೊಡುವ ಆಚರಣೆ ಇಲ್ಲ. ಚಿಕ್ಕಲ್ಲೂರಿನಲ್ಲಿ ಬಲಿ ಪೀಠವೂ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

‘ಜಾತ್ರೆಯ ನಾಲ್ಕನೇ ದಿನ ಪಂಕ್ತಿಸೇವೆ ನಡೆಯುತ್ತಿದೆ. ಇದು ಸಹಭೋಜನ ಪದ್ಧತಿ. ಸಿದ್ದಪ್ಪಾಜಿ ಕಾಲದಿಂದಲೂ ನಡೆಯುತ್ತಿದೆ. ಬಹುಸಂಖ್ಯಾತರು ಮಾಂಸಾಹಾರ ಸಿದ್ಧಪಡಿಸಿ, ಊಟ ಮಾಡುತ್ತಾರೆ. ಪಂಕ್ತಿಸೇವೆಗೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬಾರದು. ಅದು ಅವರ ಪದ್ಧತಿ, ಆಹಾರದ ಹಕ್ಕು. ಈ ವರ್ಷವೂ ಕಾನೂನು ಉಲ್ಲಂಘನೆಯಾಗದಂತೆ ಪಂಕ್ತಿಸೇವೆ ನಡೆಯಲಿದೆ’ ಎಂದು ಅವರು ಹೇಳಿದರು. 

ಕೊಳ್ಳೇಗಾಲದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌.ನರೇಂದ್ರ ಅವರು ಪಂಕ್ತಿಸೇವೆಯ ಪರವಾಗಿ ಮಾತನಾಡಿದ್ದರು. ‘ಅಲ್ಲಿ ನಡೆಯುವುದು ಜಾತ್ಯತೀತ ಭೋಜನದ ಪಂಕ್ತಿಸೇವೆ. ಇದನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಲಾಗುವುದು’ ಎಂದು ಹೇಳಿದ್ದರು. 

ಜಿಲ್ಲಾಡಳಿತ ಕ್ರಮವನ್ನು ಖಂಡಿಸಿ ಪ್ರಕಟಣೆ ಹೊರಡಿಸಿರುವ ಸ್ವರಾಜ್‌ ಇಂಡಿಯಾ ಪ‍ಕ್ಷದ ಮೈಸೂರು ಘಟಕದ ಅಧ್ಯಕ್ಷ ಉಗ್ರ ನರಸಿಂಹೇಗೌಡ ಅವರು, ‘ಪ್ರಾಣಿಬಲಿ ಒಂದು ಅಮಾನವೀಯ ಆಚರಣೆ. ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಸ್ವಾಗತಾರ್ಹ. ಆದರೆ ಮಂಟೇಸ್ವಾಮಿ ಪರಂಪರೆಯ ಚಿಕ್ಕಲ್ಲೂರು ಜಾತ್ರೆಯಲ್ಲಿ ಬಲಿ ಆಚರಣೆ ಅಥವಾ ಪದ್ಧತಿ ಇಲ್ಲವೇ ಇಲ್ಲ. ಇದಕ್ಕೆ ಆರು ನೂರು ವರ್ಷಗಳ ಪರಂಪರೆ ಇದೆ. ಜಿಲ್ಲಾಧಿಕಾರಿ ಅವರಿಗೆ ಈ ಜಾತ್ರೆಯ ಸಾಂಸ್ಕೃತಿಕ ಆಚರಣೆ, ಮಹತ್ವ, ಆಹಾರ ‍ಪದ್ಧತಿಗಳ ಬಗ್ಗೆ ಅರಿವಿಲ್ಲದಿರುವುದು ವಿಷಾದನೀಯ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳ ದ್ರವ್ಯಗಳಿಂದ ಪೂಜೆ ಸಲ್ಲಿಸಲು ಮನವಿ

ಪಂಕ್ತಿ ಸೇವೆ ಆಚರಣೆಯನ್ನು ‌ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು ದೇವಸ್ಥಾನದ ಆವರಣದ ಹೊರಗಡೆ, ಪ್ರಾಣಿಗಳನ್ನು ಕೊಂದು ಮಾಂಸಾಹಾರ ಸಿದ್ಧಪಡಿಸುವುದರ ವಿರುದ್ಧ ಈ ವರ್ಷವೂ ಧ್ವನಿ ಎತ್ತಿದ್ದಾರೆ. 

‘ಸಹಪಂಕ್ತಿ ಭೋಜನ, ಪಂಕ್ತಿಸೇವೆ ಹೆಸರಿನಲ್ಲಿ ಜಾತ್ರಾ ಪರಿಸರ, ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಾಣಿಗಳ ಬಲಿ, ಹತ್ಯೆ, ರಕ್ತತರ್ಪಣ–ಮಾಂಸಾಹಾರದ ನೈವೇದ್ಯ ನಡೆಯುತ್ತದೆ. ಹೈಕೋರ್ಟ್‌ ತೀರ್ಪಿನ ಅನ್ವಯ ಇದು ಕಾನೂನುಬಾಹಿರ. ಹಿಂಸಾತ್ಮಕ ಆಚರಣೆಗಳ ಬದಲಾಗಿ ತೆಂಗಿನಕಾಯಿ, ಬಾಳೆಹಣ್ಣು, ನಿಂಬೆ, ಹೂವು, ಧೂಪ ದೀಪ ಮೊದಲಾದ ಮಂಗಳದ್ರವ್ಯಗಳಿಂದ ಸಿದ್ದಪ್ಪಾಜಿ ಹಾಗೂ ಇತರ ದೇವತೆಗಳಿಗೆ ಪೂಜೆ ಸಲ್ಲಿಸಿ’ ಎಂದು ಅವರು ಭಕ್ತರಿಗೆ ಮನವಿ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ. ಪ್ರಾಣಿ ಬಲಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಸೆಕ್ಟರ್‌ ಅಧಿಕಾರಿಗಳ ನೇಮಕ

ಈ ಮಧ್ಯೆ, ಜಾತ್ರೆ ನಡೆಯುವ ಸಂದರ್ಭದಲ್ಲಿ ಪ್ರಾಣಿಬಲಿ ತಡೆಯುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೆಚ್ಚುವರಿ ಸೆಕ್ಟರ್ ಅಧಿಕಾರಿಗಳನ್ನಾಗಿ ನಿಯೋಜಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.

ಕೋರ್ಟ್‌ ನಿರ್ದೇಶನದಂತೆ ದೇವರ ಹೆಸರಿನಲ್ಲಿ ಪ್ರಾಣಿಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು, ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಘಟನೆಗಳು ಸಂಭವಿಸಿದಲ್ಲಿ ತಕ್ಷಣ ಆದೇಶಗಳನ್ನು ಕೈಗೊಳ್ಳುವ ಸಲುವಾಗಿ ಉಪವಿಭಾಗಾಧಿಕಾರಿ, ಕೊಳ್ಳೇಗಾಲ ತಹಶೀಲ್ದಾರ್ ಅವರ ಜೊತೆಗೆ ಹೆಚ್ಚುವರಿಯಾಗಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಇವರು ಮೂರು ಪಾಳಿಯಲ್ಲಿ ಅಂದರೆ, ಬೆಳಿಗ್ಗೆ 8 ರಿಂದ ಮಧ್ಯಾಹ್ನ 2, ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆ, ರಾತ್ರಿ 10ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು