ಗುರುವಾರ , ಆಗಸ್ಟ್ 18, 2022
25 °C
ಆಸನ ಸಾಮರ್ಥ್ಯಕ್ಕಿಂತೆ ಹೆಚ್ಚು ಚಿಣ್ಣರನ್ನು ಕೂರಿಸುವ ಚಾಲಕರು

ಆಟೊ ಪ್ರಯಾಣ: ಮಕ್ಕಳ ಸುರಕ್ಷತೆಗಿಲ್ಲ ಖಾತ್ರಿ

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ನಗರದ ವಿವಿಧ ಶಾಲೆಗಳಿಗೆ ಆಟೊಗಳಲ್ಲಿ ತೆರಳುವ ಮಕ್ಕಳು ಪ್ರತಿ ದಿನ ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸುತ್ತಿದ್ದಾರೆ.

ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಆಟೊ ಚಾಲಕರು ಕರೆದುಕೊಂಡು ಹೋಗುತ್ತಿದ್ದು, ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ಪೊಲೀಸರು ಮೌನ ವಹಿಸಿದ್ದಾರೆ ಎಂಬುದು ಜನರ ಆರೋಪ.  

ನಗರದಲ್ಲಿರುವ ಕೆಲವು ಶಿಕ್ಷಣ ಸಂಸ್ಥೆಗಳು ಬಸ್‌ ವ್ಯವಸ್ಥೆ ಹೊಂದಿವೆ. ಇನ್ನೂ ಕೆಲವು ಹೊಂದಿಲ್ಲ. ಪೋಷಕರು ಮಕ್ಕಳನ್ನು ಆಟೊ ಮೂಲಕ ಕಳುಹಿಸುತ್ತಿದ್ದಾರೆ. ಶಾಲಾ ವಾಹನದ ಶುಲ್ಕ ಹೆಚ್ಚು ಎಂಬ ಕಾರಣಕ್ಕೆ ಶಾಲಾ ಬಸ್‌ನಲ್ಲಿ ಮಕ್ಕಳನ್ನು ಕಳುಹಿಸದ ಪೋಷಕರೂ ಇದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಶಾಲಾ ವಾಹನಗಳು ಹೋಗದಿರುವ ಕಾರಣಕ್ಕೆ ಕೆಲವು ಪೋಷಕರು ಅನಿವಾರ್ಯವಾಗಿ ಆಟೊಗಳನ್ನೇ ಅವಲಂಬಿಸಬೇಕಾದ ಸ್ಥಿತಿಯೂ ಇದೆ. 

ತಿಂಗಳ ಆಟೊ ಶುಲ್ಕದ ಹೊರೆಯನ್ನು ಕಡಿಮೆ ಮಾಡುವುದಕ್ಕೆ ಗಮನ ನೀಡುವ ಪೋಷಕರು, ಮಕ್ಕಳ ಸುರಕ್ಷತೆ ಬಗ್ಗೆ ಆಸ್ಥೆ ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. 

ಜೀವದ ಜೊತೆ ಆಟ: ಆಟೊಗಳಲ್ಲಿ ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವುದು ಅಪಾಯಕಾರಿ. ಒಂದೆರಡು ಕಿ.ಮೀ ದೂರ ಇದ್ದರೆ ತೊಂದರೆ ಇಲ್ಲ. ಆದರೆ, ಗ್ರಾಮೀಣ ಭಾಗಗಳಿಂದ ಬರುವ ಆಟೊಗಳು ಕಿ.ಮೀಗಟ್ಟಲೆ ಸಂಚರಿಸಬೇಕಾಗುತ್ತದೆ. ಹದಗೆಟ್ಟ ರಸ್ತೆ ಇದ್ದರಂತೂ ಅಪಾಯ ಇನ್ನಷ್ಟು ಹೆಚ್ಚು. 

ಬಹುತೇಕ ಎಲ್ಲ ಆಟೊಗಳ ಚಾಲಕರು ನಿಗದಿಗಿಂತ ಹೆಚ್ಚು ಮಕ್ಕಳನ್ನು ಆಟೊದಲ್ಲಿ ಕೂರಿಸುತ್ತಾರೆ. 15ರಿಂದ 20 ಮಕ್ಕಳವರೆಗೂ ಕರೆದೊಯ್ಯುತ್ತಾರೆ. 

ಕೆಲ ಮಕ್ಕಳು ಚಾಲಕನ ಅಕ್ಕಪಕ್ಕದಲ್ಲಿ, ಹಲವು ಮಕ್ಕಳು ಆಟೊ ಮಧ್ಯದ ಜಾಗದಲ್ಲಿ, ಉಳಿದ ಮಕ್ಕಳು ಹಿಂಬದಿಯಲ್ಲಿ ಕುಳಿತುಕೊಳ್ಳುತ್ತಾರೆ. ಇವರ ಮೇಲೆ ಮತ್ತೆ ಕೆಲವರನ್ನು ಕೂರಿಸಲಾಗುತ್ತದೆ. ಆಟೊದ ಬಾಗಿಲ ಬಳಿ ನೇತಾಡಿಕೊಂಡು ಹೋಗುವವರೂ ಇದ್ದಾರೆ. 

ಅನಿವಾರ್ಯ: ‘ಆಸನ ಸಾಮರ್ಥ್ಯಕ್ಕೆ ಸೀಮಿತವಾಗಿ ಮಕ್ಕಳನ್ನು ಕರೆದೊಯ್ಯಬೇಕಾದರೆ, ಪೋಷಕರು ಹೆಚ್ಚು ಹಣ ಕೊಡಬೇಕು. ಆದರೆ, ಯಾರೂ ಕೊಡುವುದಕ್ಕೆ ಸಿದ್ಧರಿಲ್ಲ. ಕಡಿಮೆ ಹಣ ಪಡೆದು ಆಟೊ ಓಡಿಸಿದರೆ, ನಮಗೆ ಏನೂ ಸಿಗುವುದಿಲ್ಲ. ಹಾಗಾಗಿ ಹೆಚ್ಚು ಮಕ್ಕಳನ್ನು ಹಾಕಿಕೊಂಡು ಹೋಗುವುದು ಅನಿವಾರ್ಯ’ ಎಂದು ಹೇಳುತ್ತಾರೆ ಆಟೊ ಚಾಲಕರು. 

‘ವಾರದ ಹಿಂದೆ ಮಧುವನಹಳ್ಳಿ ಗ್ರಾಮಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಆಟೊದಿಂದ ಆಯ ತಪ್ಪಿ ಇಬ್ಬರು ಮಕ್ಕಳು ಕೆಳಗೆ ಬಿದ್ದಿದ್ದರು. ಅದೃಷ್ಟವಶಾತ್‌ ಏನೂ ಆಗಿಲ್ಲ. ಆಟೊದ ಮೇಲ್ಭಾಗದಲ್ಲಿ ಲಗೇಜ್‌ ಇಡುವ ಅಥವಾ ಬದಿಯಲ್ಲಿ ನೇತಾಡಿಸುವ ಮಕ್ಕಳ ಚೀಲಗಳು ದಾರಿ ಮಧ್ಯೆ ಕೆರೆಗೆ ಬಿದ್ದಿರುವ ನಿದರ್ಶನಗಳೂ ಇವೆ. ಆಟೊ ಚಾಲಕರು ಮಕ್ಕಳ ಜೀವದ ಜೊತೆ ಆಟವಾಡುತ್ತಾರೆ. ಬಹುತೇಕ ಪೋಷಕರೂ ಈ ಬಗ್ಗೆ ಗಮನ ಹರಿಸುವುದಿಲ್ಲ’ ಎಂದು ಮಧುವನಹಳ್ಳಿಯ ನಾಗೇಶ್ ಹೇಳಿದರು.

ಕಾನೂನು ಕ್ರಮ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಟ್ಟಣ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಚೇತನ್‌, ‘ನಿಯಮ ಮೀರಿ ಆಟೊದಲ್ಲಿ ಮಕ್ಕಳನ್ನು ಕರೆದುಕೊಂಡು ಹೋದರೆ, ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನಾಲ್ಕು ದಿನಗಳ ಹಿಂದೆ 27ಕ್ಕೂ ಹೆಚ್ಚು ಆಟೊಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದೇವೆ. ನಿಯಮ ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು. 

‘ನೋಟಿಸ್ ನೀಡಿದರೂ ಪ್ರಯೋಜನವಾಗಿಲ್ಲ’

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ ಅವರು ಪ್ರತಿಕ್ರಿಯಿಸಿ, ’ಮಕ್ಕಳನ್ನು ಆಟೊಗಳಲ್ಲಿ ಕುರಿಗಳಂತೆ ತುಂಬಿಕೊಂಡು ಹೋಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅನೇಕ ಬಾರಿ ಶಾಲೆಗಳಿಗೆ ಹೋಗಿ ನೋಟಿಸ್ ನೀಡಿದ್ದೇನೆ. ನೋಟೀಸ್ ನೀಡಿದ ಒಂದು ವಾರ ಆಟೊ ಚಾಲಕರು ಮಕ್ಕಳನ್ನು ನಿಯಮಾನುಸಾರವಾಗಿ ಕರೆದು ಕೊಂಡು ಹೋಗುತ್ತಾರೆ. ಕೆಲ ದಿನಗಳ ನಂತರ ಮತ್ತೆ ಹಳೆಯ ಚಾಳಿ ಮುಂದುವರಿಸುತ್ತಾರೆ. ಪೋಷಕರ ಸಭೆಯಲ್ಲೂ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ.  ‘ನಮ್ಮ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ, ಬಸ್‌ ಬರುವುದಿಲ್ಲ. ಆ ಕಾರಣದಿಂದ ವಿಧಿ ಇಲ್ಲದೆ ನಾವು ಆಟೊದಲ್ಲಿ ಮಕ್ಕಳನ್ನು ಕಳುಹಿಸುತ್ತೇವೆ’ ಎಂದು ಎಂದು ಹೇಳುತ್ತಾರೆ’  ಅವರು ತಿಳಿಸಿದರು.

--

ಎಲ್ಲ ಶಾಲೆಗಳಿಗೆ ಭೇಟಿ ನೀಡಿ, ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಿಗೆ ಸೂಚನೆ ನೀಡಲಾಗುವುದು

ಚಂದ್ರ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು