ಚಾಮರಾಜನಗರ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಅಲ್ಪಸಂಖ್ಯಾತ ಬುಡಕಟ್ಟು ಕುಕಿ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ರಾಷ್ಟ್ರಪತಿ ಆಡಳಿತ ಜಾರಿಗೆ ಒತ್ತಾಯಿಸಿ ಜಿಲ್ಲಾ ಕ್ರಿಶ್ಚಿಯನ್ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.
ಸತ್ಯಮಂಗಲ ರಸ್ತೆಯಲ್ಲಿರುವ ಸಿಎಸ್‌ಐ ಚರ್ಚ್ ಆವರಣದಲ್ಲಿ ವಿವಿಧ ಚರ್ಚ್‌ಗಳ ಧರ್ಮಗುರುಗಳ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕ್ರಿಶ್ಚಿಯನ್ನರು, ಸುಲ್ತಾನ್ ಷರೀಫ್ ವೃತ್ತ, ಡೀವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದರು. ರ‍್ಯಾಲಿ ಮಧ್ಯೆ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು.
‘ಮೂರು ತಿಂಗಳುಗಳಿಂದ ಮಣಿಪುರ ರಾಜ್ಯದಲ್ಲಿ ಮೀಸಲಾತಿ ವಿಚಾರವಾಗಿ ಜಾತಿ ಧರ್ಮದ ಕಲಹ ಏರ್ಪಟ್ಟಿದ್ದು, ಅಲ್ಪಸಂಖ್ಯಾತರಾದ ಕುಕಿ ಬುಡಕಟ್ಟಿನ ಕ್ರಿಶ್ಚಿಯನ್ ಸಮುದಾಯದ ಮೇಲೆ ಮೈತೇಯಿ ಹಿಂದೂ ಸಮುದಾಯವು ನಿರಂತರವಾಗಿ ದೌರ್ಜನ್ಯ ಮಾಡುತ್ತಿದೆ. ಕುಕಿ ಸಮುದಾಯದ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಿದ್ದು, ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಹೆಣ್ಣುಮಕ್ಕಳನ್ನು ಪೊಲೀಸರೇ ದಾಳಿಕೋರರ ಕೈಗೆ ಒಪ್ಪಿಸಿದ್ದಾರೆ ಎಂದೂ ವರದಿಯಾಗಿದೆ. ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿರುವುದು ಇಡೀ ದೇಶವನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದೆ. ಆ ಮಹಿಳೆಯರ ಮೇಲೆ ಗಂಟೆಗಟ್ಟಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಪೈಶಾಚಿಕ ಕೃತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ಘಟನೆಗಳಿಂದ ಜಗತ್ತಿನ ಮುಂದೆ ಭಾರತದ ಮಾನ ಹರಾಜಾಗಿದೆ. ಹಾಗಿದ್ದರೂ, ಅಮಾನುಷ ಹಿಂಸಾಚಾರ ಮುಂದುವರಿದೆ. ಕುಕಿ ಸಮುದಾಯದ ಮೇಲೆ ಬಹುಸಂಖ್ಯಾತರ ಗುಂಪುಗಳು ದಾಳಿ ಮಾಡುತ್ತಿರುವುದು, ಕೊಲ್ಲುತ್ತಿರುವುದು ಜನ ಸಮುದಾಯದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಕರ್ನಾಟಕದಲ್ಲೂ ಕೆಲವಾರು ವರ್ಷಗಳಿಂದ ರಾಜ್ಯದ ವಿವಿಧ ಚರ್ಚ್‌ಗಳ ಮೇಲೆ ಸಂಘಪರಿವಾರಗಳ ಸದಸ್ಯರು ದಾಳಿ ಮಾಡಿರುವ ಘಟನೆಗಳೂ ನಮ್ಮ ಮುಂದಿವೆ. ಹೀಗಾಗಿ ಮಣಿಪುರದ ಘಟನೆಗಳು ಇಲ್ಲಿನ ಕ್ರಿಶ್ಚಿಯನ್ನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಮಣಿಪುರದಲ್ಲಿ ಇದೇ ರೀತಿ ಹಿಂಸಾಚಾರ ಮುಂದುವರಿದರೆ ಕುಕಿ ಬುಡಕಟ್ಟು ಜನಾಂಗವೇ ನಾಶವಾಗುವ ಸಂಭವವಿದೆ. ಈ ಹಿಂಸಾಚಾರವನ್ನು ಅಲ್ಲಿನ ಸರ್ಕಾರ ನಿಯಂತ್ರಣಕ್ಕೆ ತರಲು ವಿಫಲವಾಗಿದೆ. ದಿನದಿಂದ ದಿನಕ್ಕೆ ಹಿಂಸಾಚಾರದ ಕ್ರೂರತೆ ಹೆಚ್ಚುತ್ತಾ ಹೋಗುತ್ತಿದೆ. ಈಗಾಗಲೇ ಲಕ್ಷಕಿಂತ ಹೆಚ್ಚು ಕುಕಿ ಕ್ರಿಶ್ಚಿಯನ್ನರು ಕಾಡು ಮೇಡುಗಳಲ್ಲಿ ತಲೆ ಮರೆಸಿಕೊಂಡಿದ್ದಾರೆ. ಬೇರೆಡೆಗೆ ವಲಸೆ ಹೋಗಿದ್ದಾರೆ. ಮಣಿಪುರ ರಾಜ್ಯದಲ್ಲಿ ಘನಘೋರ ಹಿಂಸಾಚಾರವನ್ನು ನಿಯಂತ್ರಿಸಲು ಅಶಕ್ತವಾದ ಅಲ್ಲಿನ ರಾಜ್ಯ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತಂದು ಮಣಿಪುರದಲ್ಲಿ ಶಾಂತಿಯನ್ನು ಮರುಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
ಧರ್ಮಗುರು ಅಂತೋಣಪ್ಪ ಸಿ, ಪಾಸ್ಟರ್ ಗ್ರೇಟ್ ಫುಲ್, ಪಾದ್ರಿ ಜೆ. ಅಂತೋಣಿರಾಜ್, ಪಾಸ್ಟರ್ ಫಿಲಿಪ್, ವಿನ್ಸೆಂಟ್ ಆಗ್ನೇಲ್ ದಾಸ್, ಸೆಲ್ವಕುಮಾರ್, ಪ್ರಸನ್ನಕುಮಾರ್, ಜಾನ್ ಸುಮತಿ ಪಾಲ್, ಪಾಸ್ಟರ್ ಸುರೇಶ್, ಧರ್ಮಗುರು ಅಂತೋಣಿ ಸ್ವಾಮಿ, ಪಾಸ್ಟರ್ ಚಂದ್ರು, ಥಾಮಸ್ ಕೆ.ಎ., ಪಿ.ಎಸ್.ಕುಮಾರ್, ದೊರೆಸ್ವಾಮಿ, ಸುಸಿ ಫ್ರಾನ್ಸಿಸ್, ಜೈಸಿ ಫ್ರಾನ್ಸಿಸ್, ಸಿಸ್ಟರ್ ಡೈಸಿ, ಬ್ರದರ್ ಆಗ್ಳೇಲ್, ಎಚ್.ಹೆಚ್ ನರಸಿಂಹಮೂರ್ತಿ, ಪಾಸ್ಟರ್ ಮಲ್ಲೇಶ್ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಧರ್ಮಗುರುಗಳು ಸಮುದಾಯದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.