ಶನಿವಾರ, ಮೇ 28, 2022
31 °C

ಸಾಲು‌ ರಜೆ: ಬಂಡೀಪುರದಲ್ಲಿ ಸಾಲುಗಟ್ಟಿ ನಿಂತ ವಾಹನಗಳು

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಕ್ರಿಸ್‌ಮಸ್‌ ಹಾಗೂ ವಾರಾಂತ್ಯದ ರಜೆ ಇರುವುದರಿಂದ ಬಂಡೀಪುರ ಮೂಲಕ ಹಾದುಹೋಗುವ ಊಟಿ ರಸ್ತೆಯಲ್ಲಿ  (ರಾಷ್ಟ್ರೀಯ ಹೆದ್ದಾರಿ) ಶುಕ್ರವಾರ ವಾಹನಗಳ ದಟ್ಟಣೆ ಹೆಚ್ಚಿತ್ತು.

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಚೆಕ್‌ಪೋಸ್ಟ್‌ ಮತ್ತು ತಮಿಳುನಾಡಿನ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟೆ ದೂರದವರೆಗೆ ಸಾಲುಗಟ್ಟಿ ನಿಂತಿದ್ದವು.

ಕೋವಿಡ್ –19ರ ಕಾರಣದಿಂದ ಅಂತರ ರಾಜ್ಯ ಪ್ರವಾಸ ಮಾಡಬೇಕಾದರೆ ಇ–ಪಾಸ್ ಅವಶ್ಯಕತೆ ಇದೆ. ಒಂದು ವೇಳೆ ಪಾಸ್ ಇಲ್ಲದಿದ್ದರೆ ತಮಿಳುನಾಡಿನ ಕೆಕ್ಕನಹಳ್ಳ ಚೆಕ್ಪೋಸ್ಟ್‌ನಲ್ಲಿ ಪ್ರವೇಶ ನಿರಾಕರಿಸುತ್ತಾರೆ. ಕಾಡಿನ ಮಧ್ಯಭಾಗದಲ್ಲಿ ವಾಹನಗಳು ಸಾಲು ಗಟ್ಟಿ ನಿಂತು ಕಾಡು ಪ್ರಾಣಿಗಳಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದಾಗಿ ಅರಣ್ಯ ಇಲಾಖೆಯವರು ಮೇಲುಕಾಮನಹಳ್ಳಿ ಬಳಿ ಇರುವ ಚೆಕ್‌ಪೋಸ್ಟ್‌ನಲ್ಲಿಯೇ  ಪಾಸ್ ಪರಿಶೀಲನೆ ಮಾಡಿ ಬಿಡುತ್ತಾರೆ.

ಕ್ರಿಸ್‌ಮಸ್‌ ಹಾಗೂ ವಾರಾಂತ್ಯದ ಕಾರಣಕ್ಕೆ ಮೂರು ದಿನಗಳ ಕಾಲ ರಜೆ ಇರುವುದರಿಂದ ಊಟಿ ಮತ್ತು ನೀಲಗಿರಿ, ಕೂನೂರು, ಮೇಟ್ಟುಪಾಳ್ಯಂನ ಪ್ರವಾಸಿ ತಾಣಗಳಿಗೆ ಹೊರಟಿದ್ದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅನೇಕರು ಪಾಸ್ ಪಡೆದುಕೊಳ್ಳದೆ ಬಂದಿದ್ದರಿಂದ ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ ಬಳಿ ಕಿಲೋಮೀಟರ್‌ವರೆಗೆ ವಾಹನಗಳು ಸಾಲು ಗಟ್ಟಿ ನಿಂತ ಪರಿಣಾಮ ಸರಕು ಮತ್ತು ತಮಿಳುನಾಡಿನ ವಾಹನಗಳಿಗೆ, ರಾಜ್ಯದ ಸಾರಿಗೆ ವಾಹನಗಳಿಗೆ ತೊಂದರೆ ಆಯಿತು.

ಬಳಿಕ ಇಲಾಖೆಯ ಸಿಬ್ಬಂದಿ ತಮಿಳುನಾಡಿನ ಗಡಿ ಭಾಗದಲ್ಲಿ ಇರುವ ಚೆಕ್‌ಪೋಸ್ಟ್‌ ಸಿಬ್ಬಂದಿ ಜೊತೆಗೆ ಮಾತುಕತೆ ನಡೆಸಿ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ. ಶೀಘ್ರವಾಗಿ ಪರಿಶೀಲನೆ ಮಾಡಿ ಬಿಡುವಂತೆ ಮನವಿ ಮಾಡಿದ ನಂತರ ವಾಹನಗಳ ಸಂಚಾರ ಸುಗಮವಾಯಿತು.

‘ಚೆಕ್‌ಪೋಸ್ಟ್‌ ಬಳಿ ಗೂಡಂ‌ಗಡಿಯಲ್ಲಿ ಪಾಸ್ ಮಾಡುವುದಾಗಿ ವಾಹನಗಳನ್ನು ನಿಲ್ಲಿಸಿಕೊಳ್ಳುತ್ತಾರೆ. ಇದರಿಂದಾಗಿ ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದರಿಂದಾಗಿ ಕಳೆದ ವಾರ ಮೂರು ಕಾರುಗಳಿಗೆ ಲಾರಿಗಳು ಹಾನಿ ಮಾಡಿದ್ದವು. ಚೆಕ್‌ಪೋಸ್ಟ್‌  ಸಿಬ್ಬಂದಿ ಪುಡಿಗಾಸಿನ ಆಸೆಗೆ ಇಲ್ಲೆ ಪಾಸ್ ಮಾಡುವಂತೆ ತಿಳಿಸುತ್ತಾರೆ. ಅದ್ದರಿಂದ ಪ್ರವಾಸಿಗರು ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸುತ್ತಾರೆ. ಚೆಕ್‌ಪೋಸ್ಟ್‌ ಇರುವುದರಿಂದ ವಾಹನಗಳು ರಸ್ತೆ ಬಿಟ್ಟು ಕೆಳಗೆ ಇಳಿಯಲು ಆಗುವುದಿಲ್ಲ. ಇಕ್ಕಟ್ಟಾದ್ದರಿಂದ ವಾಹನಗಳಿಗೆ ಹಾನಿಯಾಗುತ್ತದೆ’ ಎಂದು ಕಾರಿನ ಚಾಲಕ ಗಂಗಾಧರ್ ದೂರಿದರು.

‘ರಜೆಗಳಿದ್ದುದರಿಂದ ವಾಹನಗಳ ಸಂಚಾರ ಎಂದಿಗಿಂತ ಹೆಚ್ಚಿತ್ತು.  ಗಡಿಭಾಗದಲ್ಲಿ ಇರುವ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುತ್ತಿದ್ದರಿಂದ ಕಾಡಿನಲ್ಲಿ ಸಹ ವಾಹನ ದಟ್ಟಣೆ ಹೆಚ್ಚಾಯಿತು. ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿದರು. ವಾಹನಗಳಿಂದ ಕೆಳಗೆ ಇಳಿಯದಂತೆ ಎಚ್ಚರ ವಹಿಸಿದ್ದರು’ ಎಂದು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು