ಮಂಗಳವಾರ, ಜೂನ್ 2, 2020
27 °C
ಗುಂಡ್ಲುಪೇಟೆ: ಕೊರೊನಾ ವೈರಸ್‌ ಸೋಂಕಿನ ಭಯ, ರೋಗಿಗಳ ಸಂಖ್ಯೆಯೂ ಕಡಿಮೆ

ತೆರೆಯದ ಕ್ಲಿನಿಕ್‌ಗಳು, ಆದೇಶಕ್ಕಿಲ್ಲ ಬೆಲೆ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

‌‌‌ಗುಂಡ್ಲುಪೇಟೆ: ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ದಿಗ್ಬಂಧನ ಹೇರಿದ ನಂತರ ತಾಲ್ಲೂಕಿನಾದ್ಯಂತ ಖಾಸಗಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‌ಗಳನ್ನು ತೆರೆದು ಆರೋಗ್ಯ ಸೇವೆ ಒದಗಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ, ಜನಸಾಮಾನ್ಯರಿಗೆ ಸೇವೆ ಲಭ್ಯವಾಗುತ್ತಿಲ್ಲ.

ಸಾಮಾನ್ಯ ಜ್ವರ, ಕೆಮ್ಮು, ರಕ್ತದೊತ್ತಡ, ಗಾಯ ಸೇರಿದಂತೆ ಇತರೆ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಜನರು ತೊಂದರೆಗೆ ಒಳಗಾಗಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಕಷ್ಟವಾಗಿದೆ. ತಾಲ್ಲೂಕಿನಲ್ಲಿ 20 ಖಾಸಗಿ ಕ್ಲಿನಿಕ್‌ಗಳಿವೆ.

‘ಯಾವಾಗಲೂ ಕ್ಲಿನಿಕ್‌ಗಳನ್ನು ತೆರೆಯುವ ವೈದ್ಯರು ಈಗ ಯಾಕೆ ತೆರೆಯುತ್ತಿಲ್ಲ? ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೇವೆ ನೀಡಬೇಕಾಗಿತ್ತು. ಕ್ಲಿನಿಕ್‌ಗಳು ಮುಚ್ಚಿರುತ್ತವೆ ಎಂಬ ಕಾರಣಕ್ಕೆ ಗ್ರಾಮೀಣ ಭಾಗದ ಜನರು, ಸಾಮಾನ್ಯ ಕಾಯಿಲೆ ಹೊಂದಿರುವವರು ಆಸ್ಪತ್ರೆಗೆ ಬರುತ್ತಿಲ್ಲ’ ಎಂದು ಬೀಮನಭೀಡು ಗ್ರಾಮದ ಮಂಜುನಾಥ್ ಹೇಳಿದರು. 

‘ಸರ್ಕಾರಿ ವೈದ್ಯರು ಈಗ ಕೊರೊನಾ ವೈರಸ್‌ ನಿಯಂತ್ರಣದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಖಾಸಗಿ ವೈದ್ಯರು ಇಂತಹ ಕಠಿಣವಾದ ಸಮಯದಲ್ಲಿ ಸೇವೆ ನೀಡಿದರೆ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. 20 ಕ್ಲಿನಿಕ್‌ಗಳಿದ್ದರೂ ಯಾರೊಬ್ಬರೂ ತೆರೆಯದಿರುವುದು ಸೇವೆಗೆ ಮಾಡುತ್ತಿರುವ ಅವಮಾನ’ ಎಂದು ಹಿರಿಯ ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ದಿಗ್ಬಂಧನ ಇರುವುದರಿಂದ ಬರುವುದಕ್ಕೆ ತೊಂದರೆಯಾಗುತ್ತಿದೆ. ರೋಗಿಗಳೂ ಬರುತ್ತಿಲ್ಲ ಎಂದು ಕ್ಲಿನಿಕ್‌ ತೆರೆದಿಲ್ಲ. ತಾಲ್ಲೂಕಿಗೆ ಕೇರಳದ ನಂಟು ಹೆಚ್ಚಿರುವುದರಿಂದ ರೋಗಿಗಳಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಇದ್ದರೆ, ಅದು ವೈದ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೂ ಕೆಲವರು ಕ್ಲಿನಿಕ್‌ ತೆರೆಯಲು ಹಿಂದೇಟು ಹಾಕಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಗಳು ಬಿದ್ದು ಗಾಯಗೊಂಡಿದ್ದಾಳೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ಜನರಿದ್ದರು. ಖಾಸಗಿ ಕ್ಲಿನಿಕ್‌ಗೆ ತೋರಿಸೋಣ ಎಂದರೆ ಎಲ್ಲ ಬಂದ್ ಆಗಿವೆ’ ಎಂದು ಪಟ್ಟಣದ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.

***

ಎಲ್ಲಾ ಕ್ಲಿನಿಕ್ ತೆರೆಯುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳುತ್ತೇನೆ.

- ನಂಜುಂಡಯ್ಯ, ತಹಶೀಲ್ದಾರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು