ಶನಿವಾರ, ಸೆಪ್ಟೆಂಬರ್ 24, 2022
24 °C
ಮೇಕೆದಾಟು ಅರಣ್ಯ ಪ್ರದೇಶಕ್ಕೆ ಸಚಿವರ ಭೇಟಿ ಪರಿಶೀಲನೆ

ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಸಿ.ಎಂ ನಿರ್ಧಾರಕ್ಕೆ: ಉಮೇಶ ಕತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: 'ಈ ಭಾಗದ ಆರಾಧ್ಯ ದೈವವಾಗಿರುವ ಮಹದೇಶ್ವರ ಸ್ವಾಮಿಯ ವಾಹನ ಹುಲಿಯಾಗಿರುವುದರಿಂದ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಣೆ ಮಾಡುವುದು ಒಳ್ಳೆಯದು. ಇದಕ್ಕೆ ನನ್ನದೇನು ಅಭ್ಯಂತರವಿಲ್ಲ’ ಎಂದು ಅರಣ್ಯ ಸಚಿವ ಉಮೇಶ ವಿ. ಕತ್ತಿ ಭಾನುವಾರ ಹೇಳಿದರು. 

ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರೆ ಅರಣ್ಯ ಸಂಪತ್ತು ವೃದ್ಧಿಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವುದಿಲ್ಲ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಘೋಷಣೆ ಮಾಡಬೇಕೇ ಬೇಡವೇ ಎಂಬುದನ್ನು ಮುಖ್ಯಮಂತ್ರಿಗಳೇ ನಿರ್ಧರಿಸಲಿದ್ದಾರೆ’ ಎಂದರು. 

‘ವನ್ಯಜೀವಿ ಮತ್ತು ಕಾಡುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಸಚಿವನಾಗಿ ನನಗೆ ವೈಯಕ್ತಿಕವಾಗಿ ಹುಲಿ ಸಂರಕ್ಷಿತ ಪ್ರದೇಶವಾಗುವುದು ಒಳ್ಳೆಯದು ಎಂಬ ಅಭಿಪ್ರಾಯವಿದೆ. ನಮ್ಮ ಅಭಿಪ್ರಾಯಗಳು ಏನೇ ಇದ್ದರೂ  ಸಂಪುಟ ಸಭೆಯಲ್ಲಿ ಚರ್ಚಿಸಿ ಬಳಿಕ ಮುಖ್ಯಮಂತ್ರಿಗಳು ಕೈಗೊಳ್ಳುವ ತೀರ್ಮಾನವೇ ಅಂತಿಮ’ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ಖಚಿತ: ‘ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆ ಇದ್ದು ಮೇಕೆದಾಟು ಯೋಜನೆಯನ್ನು  ಜಾರಿ  ಮಾಡಿಯೇ ಮಾಡುತ್ತೇವೆ. ಹೊಗೆನಕಲ್  ಜಲಪಾತ ವೀಕ್ಷಣಾ ಗೋಪುರ , ಸೇತುವೆ ಸೇರಿದಂತೆ ಕಾಡಂಚಿನ ಕುಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು. ಚಂಗಡಿ ಪುನರ್ವಸತಿ ಯೋಜನೆ ಬಗ್ಗೆ ಸರ್ಕಾರ ಸೂಕ್ತ  ಕ್ರಮ  ಕೈಗೊಳ್ಳಲಿದ್ದು, ಇನ್ನೆರಡು ತಿಂಗಳೊಳಗೆ ಅಂತಿಮ ಆದೇಶ ಹೊರಬೀಳಲಿದೆ’ ಎಂದರು.

ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ಉಪೇಂದ್ರ ಪ್ರತಾಪ್ ಸಿಂಗ್, ಮಲೆಮಹದೇಶ್ವರ ವನ್ಯಧಾಮದ  ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, ಕಾವೇರಿ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಂಕರಾಜು, ಭಾಗ್ಯಲಕ್ಷ್ಮಿ,  ವಲಯ ಅರಣ್ಯಾಧಿಕಾರಿಗಳಾದ ಸಯ್ಯಾದ ಸಾಬ್ ನದಾಫ್, ಶಶಿಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು