ಚಾಮರಾಜನಗರದ ತೆಂಗು ಸಂಸ್ಕರಣ ಘಟಕಕ್ಕೆ ಕೊನೆಗೂ ಉದ್ಭಾಟನಾ ಭಾಗ್ಯ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘವು ಕಾಳನಹುಂಡಿ ರಸ್ತೆಯ ಮುಣಚನಹಳ್ಳಿಯಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ತೆಂಗು ಸಂಸ್ಕರಣ ಘಟಕವು ಇದೇ 18ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.
ಸಹಕಾರ ಸಂಘ ಸ್ಥಾಪಿಸಿರುವ ರಾಜ್ಯದ ಮೊದಲ ಸಂಸ್ಕರಣ ಘಟಕ ಇದು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ರಾಜ್ಯ ಸರ್ಕಾರ ನೀಡಿರುವ ₹7.5 ಕೋಟಿಯ ನೆರವಿನಿಂದ ನಿರ್ಮಿಸಲಾಗಿರುವ ಈ ಘಟಕವು 2018ರ ವರ್ಷಾರಂಭದಲ್ಲೇ ಉದ್ಘಾಟನೆಗೆ ಸಿದ್ಧವಾಗಿತ್ತು. ಪ್ರಾಯೋಗಿಕವಾಗಿ ಕಾರ್ಯವನ್ನೂ ನಿರ್ವಹಿಸಿದೆ. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು (ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ) ಬಾರದೇ ಇದ್ದುದರಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ.
ಇದೇ 18ರಂದು (ಶುಕ್ರವಾರ) ಘಟಕದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಘಟಕವನ್ನು ಉದ್ಘಾಟಿಸಲಿದ್ದಾರೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ತೆಂಗು ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ.
ಕಾರ್ಯಾರಂಭ: ಘಟಕ ಅಧಿಕೃತವಾಗಿ ಉದ್ಘಾಟನೆಯಾಗದಿದ್ದರೂ, ಜುಲೈ ತಿಂಗಳಿನಿಂದ ಕಾರ್ಯಾರಂಭ ಮಾಡಿದೆ. ಜೂನ್ ತಿಂಗಳಿನಿಂದಲೇ ಸಂಘದ ಸದಸ್ಯರಿಂದ ತೆಂಗಿನ ಕಾಯಿ ಪ್ರಕ್ರಿಯೆಯನ್ನು ಆರಂಭಿಸಿತ್ತು.
ದಿನಕ್ಕೆ ಕನಿಷ್ಠ 50 ಸಾವಿರ ತೆಂಗಿನಕಾಯಿಗಳನ್ನು ಸಂಸ್ಕರಿಸಿ ಪುಡಿ ಮಾಡುವ ಸಾಮರ್ಥ್ಯವನ್ನು ಈ ಅತ್ಯಾಧುನಿಕ ಘಟಕ ಹೊಂದಿದೆ.
‘ಘಟಕ ಈಗಾಗಲೇ ಕಾರ್ಯಾರಂಭ ಮಾಡಿದೆ. ಉತ್ಪನ್ನಗಳನ್ನೂ ತಯಾರಿಸುತ್ತಿದ್ದೇವೆ. ಸಚಿವರ ಮೂಲಕ ಅಧಿಕೃತವಾಗಿ ಉದ್ಘಾಟನೆ ಮಾಡುತ್ತಿದ್ದೇವೆ. ಕನಿಷ್ಠ 50 ಸಾವಿರ ತೆಂಗಿನಕಾಯಿಗಳನ್ನು ಸಂಸ್ಕರಿಸುವ ಸಾಮರ್ಥ್ಯ ಇದ್ದರೂ, ಕೋವಿಡ್ ಕಾರಣದಿಂದ 15 ಸಾವಿರದಿಂದ 20 ಸಾವಿರದಷ್ಟು ತೆಂಗಿನಕಾಯಿಗಳನ್ನು ಸಂಸ್ಕರಣೆ ಮಾಡುತ್ತಿದ್ದೇವೆ’ ಎಂದು ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಂಘದ ಅಧ್ಯಕ್ಷ ಮಹೇಶ್ ಪ್ರಭು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಸದ್ಯ, ಈ ಘಟಕದಲ್ಲಿ ತೆಂಗಿನ ಕಾಯಿ ತಿರುಳಿನಪುಡಿಯನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡುವ ಯೋಜನೆಯನ್ನು ಸಂಘ ಹಾಕಿಕೊಂಡಿದೆ.
ಸಹಕಾರ ಸಂಘವು ಸದಸ್ಯರಿಂದ ತೆಂಗಿನಕಾಯಿಗಳನ್ನು ಖರೀದಿಸುತ್ತಿದೆ. ಗುಣಮಟ್ಟದ ತೆಂಗಿನ ಕಾಯಿಗಳಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಬೆಳೆಗಾರರು ತಮ್ಮ ತೆಂಗಿನ ಕಾಯಿಗಳನ್ನು ನೇರವಾಗಿ ಘಟಕಕ್ಕೆ ಸರಬರಾಜು ಮಾಡಬೇಕು. ಖರೀದಿ ಮಾಡಿದ ನಂತರ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.