ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡೊ ಯಾತ್ರೆ ಸ್ವಾಗತಕ್ಕೆ ಕಾಂಗ್ರೆಸ್‌ ಸಜ್ಜು

ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶ; ರಾಜ್ಯದಲ್ಲಿ ಮೊದಲ ದಿನದ ಪಾದಯಾತ್ರೆ ಇಂದು
Last Updated 29 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆ (ಏಕತಾ ಯಾತ್ರೆ) ಶುಕ್ರವಾರ (ಸೆ.30) ತಾಲ್ಲೂಕಿನ ಮೂ‌ಲಕ ರಾಜ್ಯ ಪ್ರವೇಶಿಸಲಿದ್ದು, ರಾಹುಲ್‌ ಗಾಂಧಿ ಹಾಗೂ ಇತರ ಪಾದಯಾತ್ರಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಕೆಪಿಸಿಸಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಸಜ್ಜಾಗಿದೆ.

ರಾಜ್ಯದಲ್ಲಿ ನಡೆಯುವ ಮೊದಲ ದಿನದ ಪಾದಯಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಕೆಪಿಸಿಸಿ ಎಲ್ಲ ಸಿದ್ಧತೆಗಳನ್ನು ಮಾಡಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 21 ಕಿ.ಮೀ ಪಾದಯಾತ್ರೆ ಸಾಗಲಿದೆ.

ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ ನಿಂದ ತಾಲ್ಲೂಕಿನ ಗಡಿಭಾಗ ಹಿರಿಕಾಟಿಯವರೆಗೂ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರ ಭಾವಚಿತ್ರಗಳಿರುವ ಕಟೌಟ್‌, ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಪಾದಯಾತ್ರಿಗಳ ತಂಡಕ್ಕೆ ಸ್ವಾಗತ ಕೋರುವುದಕ್ಕಾಗಿ ಪಟ್ಟಣದಲ್ಲಿ ಬೃಹತ್‌ ಸ್ವಾಗತ ಕಮಾನು ನಿರ್ಮಿಸಲಾಗಿದೆ.

ಪಟ್ಟಣದ ಡಾ.ಬಿ.ಆರ್ ಅಂಬೇಡರ್ ಭವನದ ಮುಂಭಾಗ ಹೆಬ್ಬಾಗಿಲನ್ನು ನಿರ್ಮಿಸಲಾಗಿದೆ. ಭವನದ ಮುಂಭಾಗ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಬೃಹತ್ ವೇದಿಕೆ ಸಿದ್ಧ ಮಾಡಲಾಗಿದೆ. 3,000 ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

9 ಗಂಟೆಗೆ ಪ್ರವೇಶ: ಶುಕ್ರವಾರ ಬೆಳಿಗ್ಗೆ ತಮಿಳುನಾಡಿನ ಗೂಡಲೂರಿನಿಂದ ವಾಹನದಲ್ಲಿ ಹೊರಡುವರಾಹುಲ್‌ ಗಾಂಧಿ ಅವರು 9 ಗಂಟೆಗೆ ಗುಂಡ್ಲುಪೇಟೆ ತಲುಪಲಿದ್ದಾರೆ. ರಾಹುಲ್‌ ಹಾಗೂ ಇತರರನ್ನು ಆತ್ಮೀಯವಾಗಿ ರಾಜ್ಯ ಕಾಂಗ್ರೆಸ್‌ ನಾಯಕರು ಬರಮಾಡಿಕೊಳ್ಳಲಿದ್ದಾರೆ. ನಂತರ, ವೇದಿಕೆ ಸಮಾರಂಭ ನಡೆಯಲಿದ್ದು, ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ.

ವೇದಿಕೆ ಸಮಾರಂಭ ಮುಗಿದ ಬಳಿಕ ಪಾದಯಾತ್ರೆ ಆರಂಭವಾಗಲಿದೆ. ರಾಹುಲ್‌ ಗಾಂಧಿ ಅವರೊಂದಿಗೆ ಪಕ್ಷದ ರಾಷ್ಟ್ರೀಯ ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಮುಖಂಡರು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಲಿದ್ದಾರೆ.

ಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿ (ಶನೇಶ್ವರ ದೇವಸ್ಥಾನದ ಬಳಿ) ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿದೆ.

ಊಟವಾದ ನಂತರ ರಾಹುಲ್‌ ಗಾಂಧಿ ಅವರು ಬುಡಕಟ್ಟು ಸಮುದಾಯದವರು ಹಾಗೂ ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಕುಟುಂಬದವರೊಂದಿಗೆ ಸಂವಾದ ನಡೆಸಲಿದ್ದಾರೆ.

ಆ ಬಳಿಕ ಮತ್ತೆ ಪಾದಯಾತ್ರೆ ಮುಂದುವರಿಯಲಿದ್ದು, ಬೇಗೂರುವರೆಗೆ ಸಾಗಿ ದಿನದ ಮಟ್ಟಿಗೆ ಅಲ್ಲಿ ಸ್ಥಗಿತವಾಗಲಿದೆ. ಟಿಬಿ ಕ್ರಾಸ್‌ ಬಳಿ ಇರುವ ಜಮೀನಿನಲ್ಲಿ ರಾಹುಲ್‌ ಗಾಂಧಿ ಹಾಗೂ ಇತರರು ವಾಸ್ತವ್ಯ ಹೂಡಲಿದ್ದಾರೆ. ಶನಿವಾರ ಬೆಳಿಗ್ಗೆ ಬೇಗೂರಿನಿಂದ ನಂಜನಗೂಡಿನತ್ತ ಯಾತ್ರೆ ತೆರಳಲಿದೆ.

ಪಾನೀಯ, ಊಟದ ವ್ಯವಸ್ಥೆ: ಪಾದಯಾತ್ರೆಯಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಮಜ್ಜಿಗೆ, ನೀರು, ತಿಂಡಿಗಳನ್ನು ನೀಡಲು ‌ವ್ಯವಸ್ಥೆ ಮಾಡಲಾಗಿದೆ. ಹಿರಿಕಾಟಿಯವರೆಗೂ ಅಲ್ಲಲ್ಲಿ ವಿತರಿಸಲಿದ್ದಾರೆ.

ಈಗಾಗಲೇ ಪಟ್ಟಣದಲ್ಲಿ ಇರುವ ಎಲ್ಲ ಕಲ್ಯಾಣ ಮಂಟಪಗಳನ್ನು ಮತ್ತು ಕೆಲ ಹೊಟೆಲ್‌ಗಳನ್ನು ಮುಖಂಡರು ಕಾಯ್ದರಿಸಿದ್ದಾರೆ.

ಪಾದಯಾತ್ರೆಯಿಂದ ಊಟಿ, ಕೇರಳ ಕಡೆಯಿಂದ ಬರುವವರು ಮತ್ತು ಸ್ಥಳೀಯರಿಗೆ ಮೈಸೂರಿಗೆ ಸಂಚರಿಸಲು ಹಾಗೂ ಮೈಸೂರಿನಿಂದ ಪಟ್ಟಣ ಹಾಗೂ ಹೊರ ರಾಜ್ಯಗಳಿಗೆ ಓಡಾಡಲು ತೊಂದರೆಯಾಗಬಾರದು‌ ಎಂದು ಜಿಲ್ಲಾಡಳಿತ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.

ಮುಖಂಡರ ದಂಡು, ಸಿದ್ಧತೆ ಪರಿಶೀಲನೆ
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವು ರಾಜ್ಯ ನಾಯಕರು ಗುರುವಾರವೇ ಗುಂಡ್ಲುಪೇಟೆಗೆ ಭೇಟಿ ನೀಡಿ ಪಾದಯಾತ್ರೆಯ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು.

ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಲು ಮಾಡಿರುವ ಸಿದ್ಧತೆ, ವೇದಿಕೆ ನಿರ್ಮಾ, ಭದ್ರತೆ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್‌.ಧ್ರುವನಾರಾಯಣ, ಸಲೀಂ ಅಹಮದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕರಾದ ಕೆ.ಜೆ.ಜಾರ್ಜ್‌, ಪ್ರಿಯಾಂಕ್‌ ಖರ್ಗೆ ಸೇರಿ ಹಲವು ನಾಯಕರು ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT