ಗುರುವಾರ , ಮಾರ್ಚ್ 23, 2023
30 °C
ಆಮ್ಲಜನಕ ದುರಂತ: ₹ 30 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಆಗ್ರಹ

ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಮೇ 2ರಂದು ಸಂಭವಿಸಿದ್ದ ಆಮ್ಲಜನಕ ದುರಂತದಲ್ಲಿ ಮೃತಪಟ್ಟ 36 ಕುಟುಂಬಗಳಿಗೆ ತಲಾ ₹ 30 ಲಕ್ಷ ಪರಿಹಾರ, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ಘಟನೆಯ ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ಆಮ್ಲಜನಕ ದುರಂತ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. 

ಕೈಗೆ ಕಪ್ಪು ಪಟ್ಟಿ ಧರಿಸಿದ್ದ ಕಾಂಗ್ರೆಸ್‌ ಮುಖಂಡರು ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು ಜಿಲ್ಲಾಸ್ಪತ್ರೆಯ ಹೊಸ ಕಟ್ಟಡದ ಮುಂಭಾಗದಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸಿದರು. ಸಂತ್ರಸ್ತರ ಕುಟುಂಬದ ಸದಸ್ಯರೂ ಜೊತೆಗಿದ್ದರು.

ದುರಂತ ನಡೆದು 60 ದಿನಗಳಾದರೂ ಸಿಗದ ನ್ಯಾಯ, ದೊರಕದ ಪರಿಹಾರ, ತಪ್ಪಿತಸ್ಥರಿಗೆ ಕಾನೂನಿನಡಿ ಶಿಕ್ಷೆ ಇಲ್ಲವೇ? ಅದಕ್ಷ ಮುಖ್ಯಮಂತ್ರಿ, ಅಸಮರ್ಥ ಮಂತ್ರಿಗಳು... ಮುಂತಾದ ಭಿತ್ತಿ ಪತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದುರಂತ ಹೋರಾಟ ಸಮಿತಿ ಅಧ್ಯಕ್ಷ ಎಸ್.ಬಾಲರಾಜ್ ಮಾತನಾಡಿ ‘ದುರಂತ ನಡೆದು ಎರಡು ತಿಂಗಳ ಕಳೆದರೂ ತಪ್ಪಿಸ್ಥತರ ವಿರುದ್ದ ಯಾವುದೇ ಕಾನೂನು ಕ್ರಮಗೈಗೊಂಡಿಲ್ಲ. ಕಣ್ಣು, ಕಿವಿ, ಹೃದಯ ಇಲ್ಲದ ಈ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಮೃತರ ಕುಟುಂಬದೊಂದಿಗೆ ಮೌನ ಪ್ರತಿಭಟನೆ ನಡೆಸಲಾಗಿದೆ’ ಎಂದರು. 

‘ಕೂಡಲೇ ಸರ್ಕಾರ ದುರಂತದಿಂದ ಮೃತ ಕುಟುಂಬದವರಿಗೆ ₹ 30 ಲಕ್ಷ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡುವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಘಟನೆ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ ಬರಲಾಗಿದೆ. ಮೃತಪಟ್ಟ 36 ಮಂದಿಯ ಕುಟುಂಬಗಳಿಗೆ ₹ 30 ಲಕ್ಷ ಪರಿಹಾರ, ಸರ್ಕಾರಿ ನೌಕರಿ ನೀಡಬೇಕು. ತಪ್ಪಿಸ್ಥರಿಗೆ ಶಿಕ್ಷೆ ಆಗುವ ತನಕ ಹೋರಾಟ ಮಾಡಲಾಗುವುದು’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ವಕ್ತಾರ ಕೆರೆಹಳ್ಳಿ ನವೀನ್, ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಅರುಣ್ ಕುಮಾರ್, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾದ ಮಹಮದ್ ಅಸ್ಗರ್, ಗುರುಸ್ವಾಮಿ, ಕಾಗಲವಾಡಿ ಚಂದ್ರು, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲತಾ ಜತ್ತಿ, ಆಲೂರು ಪ್ರದೀಪ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಾವಿದ್, ಎಂ.ಎನ್.ಶಿವಸ್ವಾಮಿ, ಶೇಖರಪ್ಪ, ಶಂಭಪ್ಪ, ಸುಹೇಲ್ ಅಲಿಖಾನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು