ಭಾನುವಾರ, ಮೇ 22, 2022
28 °C
ಕಾಂಗ್ರೆಸ್‌ ಕಾರ್ಮಿಕ ವಿಭಾಗದಿಂದ ಮೆರವಣಿಗೆ, ಜಿಲ್ಲಾಡಳಿತಕ್ಕೆ ಮನವಿ

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಸತ್ಯಮಂಗಲ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಡೀವಿಯೇಷನ್‌ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ವಿಷಕಂಠಮೂರ್ತಿ ಅವರು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಚುನಾವಣೆಯಲ್ಲಿ ಹಲವಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಈ ಆರು ವರ್ಷಗಳ ಅವಧಿಯಲ್ಲಿ ಭಾರತದ ಆರ್ಥಿಕತೆ ಕುಸಿದಿದೆ. ಕಪ್ಪು ಹಣ ತಡೆಗಟ್ಟಲು ನೋಟು ರದ್ದು ಮಾಡಿ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಾದ ಅಭಿವೃದ್ಧಿಯನ್ನು ನಾಶ ಮಾಡಲಾಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಕೇಂದ್ರದ ನೀತಿಗಳಿಂದಾಗಿ ದೇಶದ ಜಿಡಿಪಿ ಕುಸಿದಿದೆ. ರಾಷ್ಟ್ರದಾದ್ಯಂತ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳ ಮೇಲೆ ಭಾರಿ ಹೊಡೆತ ಬಿದ್ದಿದೆ. ಸಾವಿರಾರು ಕಾರ್ಖಾನೆಗಳು ಮುಚ್ಚಿರುವುದರಿಂದ ನಿರುದ್ಯೋಗದ ಪ್ರಮಾಣ ಹೆಚ್ಚಿದೆ. ಕೋವಿಡ್‌–19 ಕಾರಣಕ್ಕೆ ಏಕಾಏಕಿ ಹೇರಲಾದ ಲಾಕ್‌ಡೌನ್‌ನಿಂದ ಬಡವರು ಹಾಗೂ ಕೂಲಿಕಾರ್ಮಿಕರಿಗೆ ತೊಂದರೆಯಯಾಯಿತು’ ಎಂದು ದೂರಿದರು. 

‘ಕೆಲಸವಿಲ್ಲದೆ ವಲಸೆ ಕಾರ್ಮಿಕರು ಸ್ಥಳೀಯರು, ಕೂಲಿ ಕಾರ್ಮಿಕರು ನೂರಾರು ಕಿ.ಮೀ ಗಟ್ಟಲೆ ನಡೆದು ಹೋದರು. ಲಾಕ್‌ಡೌನ್‌ನಿಂದಾಗಿ ಕಾರ್ಮಿಕ ವರ್ಗ ಇನ್ನಷ್ಟು ಬಡತನಕ್ಕೆ ಸಿಲುಕಿತು. ಇಂತಹ ಪ‍ರಿಸ್ಥಿತಿಯಲ್ಲಿ ಕೇಂದ್ರ ಬಜೆಟ್‌ನಲ್ಲಿ‌ ಜನಸಾಮಾನ್ಯರಿಗೆ ಆರ್ಥಿಕವಾಗಿ ನೆರವಾಗುವ ಘೋಷಣೆಗಳನ್ನು ಮಾಡಬೇಕಿತ್ತು. ಅದರ ಬದಲಿಗೆ ಕಾರ್ಪೊರೇಟ್‌ ಕಂಪನಿಗಳಿಗೆ ಹಲವಾರು ರಿಯಾಯಿತಿಗಳನ್ನು ನೀಡಿ ರೈತರು, ಕಾರ್ಮಿಕರು ಹಾಗೂ ಬಡವರ ಬಗ್ಗೆ ವಿರೋಧಿ ನೀತಿ ಅನುಸರಿಸಲಾಗಿದೆ’ ಎಂದು ಅವರು ಆರೋಪಿಸಿದರು. 

ಕೇಂದ್ರ ಸರ್ಕಾರ ತಕ್ಷಣವೇ ಜನ ವಿರೋ‌ಧಿ ನೀತಿಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್‌ಅಸ್ಗರ್, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ನಾಗರಾರ್ಜನ್‌ಫೃಥ್ವಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಎಂ.ಶಿವಮೂರ್ತಿ, ಪ್ರವೀಣ್, ಸೋಮಶೇಖರ್, ರಾಮಸಮುದ್ರ ಕೃಷ್ಣಪ್ಪ, ಸ್ವಾಮಿ, ಕೆಂಪರಾಜು, ಗ್ರಾ.ಪಂ. ಅಧ್ಯಕ್ಷ ಕುಮಾರ್, ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು