ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಬೆಲೆ ಏರಿಕೆ, ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮುಖಂಡರು, ಕಾರ್ಯಕರ್ತರ ಆಕ್ರೋಶ
Last Updated 7 ಜುಲೈ 2020, 15:06 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ನಿರಂತರವಾಗಿ ಹೆಚ್ಚಿಸುತ್ತಿರುವುದನ್ನು ಖಂಡಿಸಿ, ಬ್ಲಾಕ್‌ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾನಿರತರು, ಧರಣಿ ಕುಳಿತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್‌ ಚಿದಾನಂದಸ್ವಾಮಿ ಅವರ ಮೂಲಕ ರಾಷ್ಟ್ರಪ‍ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು, ‘ಕೊರೊನಾ ವೈರಸ್ ಭಾರತ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಕಾಣಿಸಿಕೊಂಡು ಅಪಾರ ಸಾವು ನೋವಿಗೆ ಕಾರಣವಾಗಿದೆ. ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಎರಡು ತಿಂಗಳ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಆ ಸಂದರ್ಭದಲ್ಲಿ ಯಾವುದೇ ವಾಹನಗಳು ಸಂಚರಿಸಿರಲಿಲ್ಲ. ಇದರ ಪರಿಣಾಮ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 16.38 ಡಾಲರ್‌ಗೆ ಕುಸಿದಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ಕೇಂದ್ರದ ಬಿಜೆಪಿ ಸರಕಾರ ಪ್ರತಿಲೀಟರ್ ಗೆ ಪೆಟ್ರೋಲ್ ₹83, ಡೀಸೆಲ್ ₹75 ಮಾರಾಟ ಮಾಡುತ್ತಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಯೇರಿಕೆ ಆಗುತ್ತಿದ್ದು ಜನರು ಕಂಗಾಲಾಗುವಂತೆ ಮಾಡಿದೆ’ ಎಂದು ಆರೋಪಿಸಿದರು.

ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ಅವರು ಮಾತನಾಡಿ, ‘ಜಗತ್ತು ಕೋವಿಡ್‌–19 ಹಾವಳಿಯಿಂದ ತತ್ತರಿಸಿದೆ. ತೈಲ ಉತ್ಪಾದನೆ ಮಾಡುವ ದೇಶಗಳು ಸತತ ಬೆಲೆ ಕುಸಿತದಿಂದ ಕಂಗಲಾಗಿವೆ. ಇದನ್ನು ಮರೆಮಾಚುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದ್ದರೂ, ನಮ್ಮ ದೇಶದಲ್ಲಿ ಮಾತ್ರ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿ ನಮ್ಮ ದೇಶವನ್ನು ಅವರಿಸಿಕೊಂಡು ದಿವಾಳಿ ಮಾಡಿತ್ತು. ಈಗ ನರೇಂದ್ರ ಅಂಡ್ ಕಂಪನಿ ರಾಷ್ಟ್ರವನ್ನು ಮತ್ತೆ ಗುಲಾಮಗಿರಿಗೆ ದೂಡುತ್ತಿದೆ’ ಅಕ್ರೋಶ ವ್ಯಕ್ತಪಡಿಸಿದರು.

ನಗರ ಬ್ಲಾಕ್ ಕಾಂಗ್ರೆಸ್ ಮಹಮದ್ ಅಸ್ಗರ್ ಮಾತನಾಡಿ, ‘ಪ್ರಧಾನಿ ನರೇಂದ್ರ ಅವರು ಸುಳ್ಳಿನ ಸರದಾರ. ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಜನರು ಆದಾಯವಿಲ್ಲದೇ ಪರದಾಡುತ್ತಿದ್ದಾರೆ. ಘೋಷಣೆ ಹಾಗೂ ಪ್ಯಾಕೇಜ್‌ಗಳು ಜನರಿಗೆ ತಲುಪುತ್ತಿಲ್ಲ. ಇದನ್ನು ಪ್ರತಿಯೊಬ್ಬ ನಾಗರಿಕರು ಅರ್ಥಮಾಡಿಕೊಳ್ಳಬೇಕು. ರಾಜ್ಯದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಕೇಂದ್ರದಲ್ಲಿರುವ ಮೋದಿ ಸರ್ಕಾರ ಬಡ ಜನರ ರಕ್ತ ಹೀರುತ್ತಿವೆ’ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಎಪಿಎಂಸಿ ಅಧ್ಯಕ್ಷ ಡಿ.ನಾಗೇಂದ್ರ, ಚುಡಾ ಮಾಜಿ ಅಧ್ಯಕ್ಷ ಸುಹೇಲ್ ಆಲಿ ಖಾನ್, ಸೇವಾ ದಳದ ಅಧ್ಯಕ್ಷ ರವಿಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಹದೇವಶೆಟ್ಟಿ, ಪುಟ್ಟಸ್ವಾಮಿ, ಮುಖಂಡರಾದ ಕಾಗಲವಾಡಿ ಶಿವಸ್ವಾಮಿ, ಎಸ್.ರಾಜು, ಶಿವಮೂರ್ತಿ, ಸಿ.ಕೆ.ರವಿಕುಮಾರ್, ಆಯುಬ್ ಖಾನ್, ನಾಗವಳ್ಳಿ ನಾಗಯ್ಯ, ಸ್ವಾಮಿ, ಚನ್ನಪ್ಪನಪುರ ಪ್ರಸಾದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT