ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಣಂ ಇದ್ದರೂ ಹೂವಿಗೆ ಇಲ್ಲ ಬೇಡಿಕೆ: ಚಾಮರಾಜನಗರದಲ್ಲಿ ಬೆಳೆಗಾರ ಕಂಗಾಲು

ಕೋವಿಡ್‌–19: ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ, ಗುಂಡ್ಲುಪೇಟೆ ಕೃಷಿಕರಿಗೆ ನಷ್ಟ
Last Updated 30 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ: ಓಣಂ ಅವಧಿಯಲ್ಲಿಸತತ ಎರಡು ವರ್ಷಗಳಿಂದ ನಷ್ಟ ಅನುಭವಿಸಿದ್ದ ಗುಂಡ್ಲುಪೇಟೆ ತಾಲ್ಲೂಕಿನ ಹೂವು ಬೆಳೆಗಾರರು ಈ ವರ್ಷವೂ ಕೋವಿಡ್‌ ಕಾರಣದಿಂದ ತೊಂದರೆ ಅನುಭವಿಸಿದ್ದಾರೆ.

ಅದರಲ್ಲೂ, ಕೇರಳದ ಪ್ರಸಿದ್ಧ ಓಣಂ ಹಬ್ಬವನ್ನೇ ಗುರಿಯಾಗಿಸಿಕೊಂಡು ಚೆಂಡು ಹೂ ಬೆಳೆದಿರುವ ರೈತರು ಹಾಗೂ ವ್ಯಾಪಾರಿಗಳಿಗೆ ಭಾರಿ ನಷ್ಟವಾಗಿದೆ. ವ್ಯಾಪಾರಿಗಳು ಕೋವಿಡ್‌ ಕಾರಣದಿಂದ ಅಂತರರಾಜ್ಯ ಸಂಚಾರ ಸಂಪೂರ್ಣವಾಗಿ ಮುಕ್ತವಾಗದೇ ಇರುವುದರಿಂದ ಈ ವರ್ಷ ಹೆಚ್ಚು ವ್ಯಾಪಾರ ನಡೆದಿಲ್ಲ.

ಕೇರಳದಾದ್ಯಂತ ಸೋಮವಾರ (ಆಗಸ್ಟ್‌ 31) ತಿರು ಓಣಂ ಆಚರಿಸಲಾಗುತ್ತಿದೆ.12 ದಿನಗಳ ಕಾಲ ನಡೆಯುವ ಈ ಹಬ್ಬದ‌ ಸಂಭ್ರಮ ಈ ಬಾರಿ ಆಗಸ್ಟ್‌ 22ರಿಂದಲೇ ಆರಂಭವಾಗಿದ್ದು, ಸೆಪ್ಟೆಂಬರ್‌ 2ರವರೆಗೆ ನಡೆಯಲಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಕೇರಳ ಗಡಿಗೆ ಹೊಂದಿಕೊಂಡಿರುವುದರಿಂದ ತಾಲ್ಲೂಕಿನ ನೂರಾರು ರೈತರು ಓಣಂ ಹಬ್ಬವನ್ನು ಕೇಂದ್ರೀಕರಿಸಿ ಚೆಂಡು ಹೂ ಹಾಗೂ ಸೇವಂತಿಗೆಯನ್ನು ಪ್ರಮುಖವಾಗಿ ಬೆಳೆಯುತ್ತಾರೆ. ನೂರಕ್ಕೂ ಹೆಚ್ಚು ವ್ಯಾಪಾರಿಗಳು ರೈತರಿಂದ ಹೂವುಗಳನ್ನು ಖರೀದಿಸಿ ಕೇರಳದ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದರು. ಬೆಳೆಗಾರರಿಗೂ, ವ್ಯಾಪಾರಿಗಳಿಗೂ ಉತ್ತಮ ಆದಾಯ ಬರುತ್ತಿತ್ತು.

ಮೂರು ವರ್ಷಗಳಿಂದ ಬೇಡಿಕೆ ಇಲ್ಲ: 2018ರಲ್ಲಿ ಕೇರಳದಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ಅಲ್ಲಿ ಓಣಂ ಸಂಭ್ರಮವೇ ಇರಲಿಲ್ಲ. ಇದರಿಂದಾಗಿ, ತಾಲ್ಲೂಕಿನ ಹೂವುಗಳಿಗೂ ಬೇಡಿಕೆ ಇರಲಿಲ್ಲ. ಕಳೆದ ವರ್ಷವೂ ‌ಅಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಹೂವುಗಳಿಗೆ ಬೇಡಿಕೆ ಇರಲಿಲ್ಲ. ದರವೂ ಕುಸಿದಿತ್ತು.

ಈ ವರ್ಷ ಕೋವಿಡ್‌–19 ಹಾವಳಿಯಿಂದ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸೋಂಕು ಹರಡುವಿಕೆ ತಡೆಗಾಗಿ ಅಂತರರಾಜ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೊರ ರಾಜ್ಯಗಳಿಂದ ಹೂವುಗಳನ್ನು ತರುವುದಕ್ಕೂ ಕೇರಳ ಸರ್ಕಾರ ಕೆಲವು ನಿಬಂಧನೆಗಳನ್ನು ವಿಧಿಸಿದೆ. ಇದರಿಂದಾಗಿ, ಹೂವುಗಳಿಗೆ ಬೇಡಿಕೆ ಇಲ್ಲ ಎಂದು ಹೇಳುತ್ತಾರೆ ಬೆಳೆಗಾರರು ಮತ್ತು ವ್ಯಾಪಾರಿಗಳು.

ಎಲ್ಲೆಲ್ಲಿ ಬೆಳೆ?: ತಾಲ್ಲೂಕಿನಲ್ಲಿ ಮೂರು ಹೂವುಗಳ ಕಾರ್ಖಾನೆಗಳಿವೆ. ಇದಕ್ಕಾಗಿ ಚೆಂಡು ಹೂವುಗಳನ್ನು ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಇವರ ಜೊತೆಗೆ ಓಣಂ ಹಬ್ಬದಲ್ಲಿ ಹೂವಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಹಬ್ಬದ ಸಮಯಕ್ಕೆ ಸರಿಯಾಗಿ ಹೂವು ಕಟಾವಿಗೆ ಬರುವಂತಹ ನೂರಾರು ರೈತರು ಇದ್ದಾರೆ.

ತಾಲ್ಲೂಕಿನ ಮದ್ದಯ್ಯನಹುಂಡಿ, ಬೇರಾಂಬಾಡಿ, ಚೆನ್ನಮಲ್ಲಿಪುರ, ಹೊಂಗಳ್ಳಿ, ಬೀಮನಬೀಡು, ಗೋಪಾಲಪುರ ಸೇರಿದಂತೆ ಕೇರಳದ ಗಡಿಭಾಗದಲ್ಲಿ ಬರುವ ಗ್ರಾಮೀಣ ಪ್ರದೇಶಗಳ ರೈತರು ಓಣಂಗಾಗಿಯೇ ಚೆಂಡು ಹೂವು ಬೆಳೆಯುತ್ತಾರೆ. ಕೆಲವು ರೈತರು ವ್ಯಾಪಾರಿಗಳಿಗೆ ಮಾರಾಟ ಮಾಡಿದರೆ, ಇನ್ನು ಕೆಲವರು ಸ್ವತಃ ತಾವೇ ರಸ್ತೆ ಬದಿಯಲ್ಲಿ ಹೂವುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಾರೆ. ಕೇರಳದ ವ್ಯಾಪಾರಿಗಳು ಬಂದು ಖರೀದಿಸುವುದೂ ಉಂಟು.

‘ತಾಲ್ಲೂಕಿನಲ್ಲಿ ಚೆಂಡು ಮಲ್ಲಿಗೆ ಕಾರ್ಖಾನೆ ಇದ್ದರೂ ಹಲವು ಬೆಳೆಗಾರರು ಕೇರಳವನ್ನು ಆಶ್ರಯಿಸಿದ್ದರು. ಇಲ್ಲಿನ ಕಾರ್ಖಾನೆಯಲ್ಲಿ ಕೆಜಿಗೆ ₹6ರಿಂದ ₹7 ರೂಪಾಯಿ ನೀಡಿದರೆ, ಓಣಂ ಸಂದರ್ಭದಲ್ಲಿ ₹10 ರಿಂದ ₹12 ರೂಪಾಯಿಗೆ ಖರೀದಿ ಆಗುತ್ತದೆ. ಉತ್ತಮ ಲಾಭವೂ ಸಿಗುತ್ತಿತ್ತು. ಈ ವರ್ಷ ಕೊರೊನಾ ಮಹಾಮಾರಿಯಿಂದ ಬೆಳೆಗಾರರು ಹಾಗೂ ವ್ಯಾಪಾರಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಿಗಲಿಲ್ಲ’ ಎಂದು ಪಟ್ಟಣದ ಹೂವಿನ ವ್ಯಾಪಾರಿ ಮಹದೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಮಿಳುನಾಡಿನ ಗೂಡಲೂರು ಭಾಗದಲ್ಲಿ ಸಹ ಹೆಚ್ಚಿನ ಮಲಯಾಳಿಗಳು ಇರುವುದರಿಂದ ಅಲ್ಲೂ ಹೂ ಮಾರಾಟ ಆಗುತ್ತಿತ್ತು. ಪ್ರತಿ ದಿನ ಬೆಳಗಿನ ಜಾವ ತಮಿಳುನಾಡು ಸಾರಿಗೆ ಬಸ್‌ನಲ್ಲಿ ಹೂಗಳನ್ನು ಕೊಂಡೊಯ್ದು ಮಾರಾಟ ಮಾಡುತ್ತಿದ್ದೆವು. ಸಾರಿಗೆ ಸಂಪರ್ಕ ಕಡಿತವಾಗಿರುವುದರಿಂದ ಇದನ್ನು ನಂಬಿ ಜೀವನ ನಡೆಸುತ್ತಿರುವ ನಮಗೆ ತೊಂದರೆಯಾಗಿದೆ’ ಎಂದು ವ್ಯಾಪಾರಿ ಮಹಿಳೆ ಸುಂದರಮ್ಮ ಅಳಲು ತೋಡಿಕೊಂಡರು.

ಹೂವಿಗೆ ಬೇಡಿಕೆ ಯಾಕೆ?

ಕೇರಳದಲ್ಲಿ ‘ಚಿಂಗಂ’ (ಸಿಂಹ) ಮಾಸದಲ್ಲಿ ಆಚರಿಸುವ ಓಣಂನಲ್ಲಿ ಹೂವಿಗೆ ಹೆಚ್ಚು ಮಹತ್ವ. ಹೂವುಗಳಿಂದ ಬಿಡಿಸುವ ರಂಗೋಲಿ–‘ಪೂಕಳಂ’ ಈ ಹಬ್ಬದ ಆಕರ್ಷಣೆ. ಹಿಂದೂಗಳು ಮಾತ್ರವಲ್ಲದೇ ಕ್ರಿಶ್ಚಿಯನ್ನರು, ಮುಸ್ಲಿಮರು ಸೇರಿದಂತೆ ಕೇರಳದ ಎಲ್ಲರೂ ಈ ಹಬ್ಬವನ್ನು ಆಚರಿಸುವುದು ವಿಶೇಷ. ಆಕರ್ಷಕ ಹೂವಿನ ರಂಗೋಲಿ ಬಿಡಿಸಿ ಸಂಭ್ರಮಿಸುತ್ತಾರೆ. ಈ ರಂಗೋಲಿ ಬಿಡಿಸಲು ವಿವಿಧ ಜಾತಿಯ ಬಣ್ಣಗಳ ಹೂವುಗಳು ಬೇಕಾಗುತ್ತವೆ. ಆ ಕಾರಣಕ್ಕಾಗಿ ಹೂವಿಗೆ ಹೆಚ್ಚಿನ ಬೇಡಿಕೆ ಇದೆ. ದೋಣಿಗಳ ಸ್ಪರ್ಧೆ, ಹುಲಿ ನೃತ್ಯ, ಪೂಜೆ, ನೃತ್ಯಗಳು ಈ ಹಬ್ಬದ ಇತರ ಮುಖ್ಯ ಸಂಗತಿಗಳು.

ಸಣ್ಣ ಪ್ರಮಾಣದ ವ್ಯಾಪಾರ

‘ಗುಂಡ್ಲುಪೇಟೆ ತಾಲ್ಲೂಕಿನ ಬಹುತೇಕ ಎಲ್ಲ ಹೂ ಬೆಳೆಗಾರರು, ಕಾರ್ಖಾನೆಗಳಿಗೆ ಹೂವುಗಳನ್ನು ಮಾರಾಟ ಮಾಡುತ್ತಾರೆ. ಕೇರಳಕ್ಕೆ ಮಾರಾಟ ಮಾಡುವವರ ಸಂಖ್ಯೆ ಕಡಿಮೆ. ಕೇರಳಿಗರು ಮೈಸೂರು ಮತ್ತು ಬೆಂಗಳೂರು ಹೂವಿನ ಮಾರುಕಟ್ಟೆಯನ್ನು ಅವಲಂಬಿಸಿರುವ ಸಾಧ್ಯತೆಯೇ ಹೆಚ್ಚು’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಂದು ಶಿವಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಲ್ಲೂಕಿನಲ್ಲಿ ಈ ಬಾರಿ 2,750 ಹೆಕ್ಟೇರ್‌ ಪ್ರದೇಶದಲ್ಲಿ ಹೂ ಬೆಳೆಯಲಾಗಿದೆ. ಪ್ರತಿ ಹೆಕ್ಟೇರ್‌ಗೆ 5ರಿಂದ 10 ಟನ್‌ಗಳಷ್ಟು ಇಳುವರಿ ಬರುತ್ತದೆ. ಬಹುತೇಕ ರೈತರು ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಾರೆ. ಅಂದಾಜು 30–40 ಟನ್‌ಗಳಷ್ಟು ಕೇರಳಕ್ಕೆ ಮಾರಾಟ ಮಾಡುತ್ತಾರೆ’ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಅವರು ಮಾಹಿತಿ ನೀಡಿದರು.

ಗುಂಡ್ಲುಪೇಟೆಯಲ್ಲಷ್ಟೇ ಬೇಡಿಕೆ: ‘ಕೇರಳಕ್ಕೆ ನಮ್ಮ ಮಾರುಕಟ್ಟೆಯಿಂದ ಹೂವುಗಳು ಹೋಗುವುದಿಲ್ಲ. ಗುಂಡ್ಲುಪೇಟೆ ತಾಲ್ಲೂಕು ಕೇರಳ ಗಡಿಗೆ ಹೊಂದಿಕೊಂಡಿರುವುದರಿಂದ, ಅಲ್ಲಿಂದ ಮಾತ್ರ ಹೂವುಗಳು ಹೋಗುತ್ತವೆ’ ಎಂದು ಚಾಮರಾಜನಗರದ ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT