ಶುಕ್ರವಾರ, ಜೂನ್ 18, 2021
21 °C
ಹಲವೆಡೆ ಬೆಳಿಗ್ಗೆಯೇ ವಹಿವಾಟು ಬಂದ್ ಮಾಡಿದ ವ್ಯಾಪಾರಸ್ಥರು

ಕೋವಿಡ್‌ ಸೋಂಕಿಗೆ ಬೆಚ್ಚಿಬಿದ್ದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ಕಂಡು ಬಂದ ಕೋವಿಡ್‌ ಸೋಂಕಿನ ಪ್ರಕರಣಗಳಿಗೆ ಜಿಲ್ಲೆಯ ಜನರು ತಲ್ಲಣಿಸಿದ್ದಾರೆ. 910 ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿರುವುದು ಹಾಗೂ 20 ಮಂದಿ ಮೃತಪಟ್ಟಿರುವುದು ಭೀತಿ ಸೃಷ್ಟಿಸಿದೆ.

ಒಂದೇ ರಾತ್ರಿ 14 ಮಂದಿ ಮೃತಪಟ್ಟರು ಎಂಬ ಸುದ್ದಿ ಹರಡುತ್ತಿದ್ದಂತೆ ನಗರದಲ್ಲಿ ಭಾನುವಾರ ಬೆಳಿಗ್ಗೆ ವ್ಯಾಪಾರಸ್ಥರು ಅನೇಕ ಕಡೆ ನಿಗದಿತ ಸಮಯಕ್ಕೂ ಮುಂಚೆಯೇ ಬಾಗಿಲು ಬಂದ್ ಮಾಡಿ ಮನೆಯತ್ತ ತೆರಳಿದರು. ಇದುವರೆಗೂ ಮಧ್ಯಾಹ್ನ 12 ಗಂಟೆಯವರೆಗೂ ದಿನಸಿ ವ್ಯಾಪಾರ ನಡೆಯುತ್ತಿತ್ತು . ಪೊಲೀಸ್ ವಾಹನ ಸೈರನ್‌ ಮೊಳಗಿಸಿ ಬಂದ ನಂತರವೇ ಬಾಗಿಲು ಬಂದ್ ಮಾಡಲಾಗುತ್ತಿತ್ತು. ಆದರೆ, ಒಂದೇ ರಾತ್ರಿ ಹಲವು ಮಂದಿ ಕೋವಿಡ್ ರೋಗಿಗಳು ಸಾವಿಗೀಡಾಗಿರುವ ಮಾಹಿತಿ ತಿಳಿದ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬೆಳಿಗ್ಗೆ 10 ಗಂಟೆಗೆ ತಮ್ಮ ಅಂಗಡಿಗಳನ್ನು ಬಂದ್ ಮಾಡಿದರು.

ಇಲ್ಲಿಯವರೆಗೂ ಬೆಳಿಗ್ಗೆ ಹೊತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚರಿಸುತ್ತಿದ್ದರು. ಆದರೆ, ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜನಸಂಚಾರವೂ ವಿರಳವಾಯಿತು. ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿಗಳು 10 ಗಂಟೆಯ ಹೊತ್ತಿಗೆ ಬಿಕೊ ಎನ್ನುತ್ತಿದ್ದವು.

ವಿಶೇಷವಾಗಿ ಗ್ರಾಮಾಂತರ ಭಾಗಗಳಲ್ಲಿನ ಜನರು ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ. ಸೋಮವಾರದಿಂದ ಕಟ್ಟುನಿಟ್ಟಿನ ಲಾಕ್‌ಡೌನ್‌ ಇರುವುದರಿಂದ ಭಾನುವಾರವೇ ಹಲವು ಗ್ರಾಮಗಳಿಗೆ ಸರಕು ಸಾಗಣೆ ವಾಹನಗಳಲ್ಲಿ, ಬೈಕ್‌ಗಳಲ್ಲಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ವಾಸವಿರುವ ಜನರು ಬಂದರು. ಕಳೆದ ಕೆಲ ದಿನಗಳ ಹಿಂದೆ ಜನತಾ ಕರ್ಫ್ಯೂ ಘೋಷಣೆಯಾದ ಬಳಿಕವೂ ಹಳ್ಳಿಗಳಿಗೆ ಇತರೆ ಜಿಲ್ಲೆಗಳಲ್ಲಿ ವಾಸವಿದ್ದವರು ಬಂದರು. ನಂತರ, ಕೊರೊನಾ ಸೋಂಕು ಹಳ್ಳಿಗಳಲ್ಲಿ ಉಲ್ಬಣಿಸಿತು. ಈಗಲೂ ಇದೇ ರೀತಿ ಆಗಲಿದೆಯೇ ಎಂಬ ಆತಂಕ ಜನರನ್ನು ಕಾಡುತ್ತಿದೆ.

 ಮದ್ಯದಂಗಡಿ ಮುಂದೆ ನೂಕುನುಗ್ಗಲು: ಸೋಮವಾರದಿಂದ ಕಟ್ಟುನಿಟ್ಟಿನ ಲಾಕ್‌ಡೌನ್‌ ಇರುವುದರಿಂದ ಭಾನುವಾರವೇ ಪಟ್ಟಣದ ಮದ್ಯದಂಗಡಿಗಳಿಗೆ ಪಾನಪ್ರಿಯರು ಮುಗಿಬಿದ್ದರು. ಗುಂಪಗೂಡಿ ಮದ್ಯದ ಖರೀದಿಯಲ್ಲಿದ್ದ ದೃಶ್ಯಗಳು ಬಹುತೇಕ ಎಲ್ಲ ಮದ್ಯದಂಡಿಗಳಲ್ಲಿಯೂ ಕಂಡು ಬಂದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು